77 ನೇ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಸೋಮವಾರ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾಡಳಿತ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 77 ನೇ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಸೋಮವಾರ ಆಚರಿಸಲಾಯಿತು.ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು, 1950ರ ಜ. 26ರಂದು ನಮ್ಮ ಸಂವಿಧಾನ ಜಾರಿಗೆ ಬರುವ ಮೂಲಕ ಭಾರತವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರ ಹೊಮ್ಮಿತು. ಹಕ್ಕು ಮತ್ತು ಕರ್ತವ್ಯಗಳ ಸಮನ್ವಯವೇ ನಮ್ಮ ಸಂವಿಧಾನದ ಶಕ್ತಿಯಾಗಿದೆ. ಈ ಶುಭ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಸರ್ದಾರ್ ಪಟೇಲ್ ಹಾಗೂ ನಮ್ಮ ನೆಲದ ಹೆಮ್ಮೆಯ ಸೇನಾ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ತ್ಯಾಗವನ್ನು ಸ್ಮರಿಸುವುದು ನಮ್ಮ ಕರ್ತವ್ಯ. ವ್ಯಕ್ತಿಗಿಂತ ಸಮಾಜ ಮುಖ್ಯ, ಸಮಾಜಕ್ಕಿಂತ ದೇಶ ಮುಖ್ಯ ಎಂಬ ಧ್ಯೇಯದೊಂದಿಗೆ, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತಾ ನಾವೆಲ್ಲರೂ ಮುನ್ನಡೆಯೋಣ ಎಂದು ಹೇಳಿದರು.ಪ್ರಸಕ್ತ ಸಾಲಿನಲ್ಲಿ ಗೋಣಿಕೊಪ್ಪ, ಕುಟ್ಟ, ಶಿರಂಗಾಲ, ಕುಶಾಲನಗರ ಹಾಗೂ ಕೂಡಿಗೆಯಲ್ಲಿ ಒಟ್ಟು 5 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮಂಜೂರು ಮಾಡಲಾಗಿದೆ. ಶಾಲೆಗಳ ಮೂಲ ಸೌಕರ್ಯಕ್ಕಾಗಿ ಪ್ರತಿ ಶಾಲೆಗೆ 3 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.
ಕೊಡಗಿನ ‘ಸಿ ಮತ್ತು ಡಿ’ ಜಮೀನುಗಳ ಸಮಸ್ಯೆ ಪರಿಹಾರಕ್ಕಾಗಿ ಈಗಾಗಲೇ ಸಮಿತಿ ರಚಿಸಲಾಗಿದ್ದು, ಸಮಿತಿ ವರದಿ ಬಂದ ಕೂಡಲೇ ಮುಂದಿನ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.ವಿರಾಜಪೇಟೆಯ ತಾಲೂಕು ಆಸ್ಪತ್ರೆಯನ್ನು 91.5 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಿ , 250 ಬೆಡ್ ಗಳ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುತ್ತಿದೆ.
ಕುಶಾಲನಗರ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರವನ್ನು 41.5 ಕೋಟಿ ರೂ. ವೆಚ್ಚದಲ್ಲಿ 100 ಬೆಡ್ ಗಳ ತಾಲೂಕು ಆಸ್ಪತ್ರೆಗೆ ಮೇಲ್ದರ್ಜೆಗೇರಿಸಲಾಗಿದೆ. ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರವನ್ನು ಹೆಚ್ಚುವರಿಯಾಗಿ 5.75 ಕೋಟಿ ರೂ. ವೆಚ್ಚದಲ್ಲಿ 50 ಬೆಡ್ ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ತಿಳಿಸಿದರು.ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಸಂತ ಜೋಸರ್ರ ಆಂಗ್ಲ ಮಾಧ್ಯಮ ಶಾಲೆ, ಮರೂರು ಆಶ್ರಮ ಶಾಲೆ, ಪಿ.ಎಂ.ಶ್ರೀ ಶಾಲೆ, ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯ, ಸಂತ ಮೈಕಲರ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ಕಾರ್ಯಕ್ರಮ ನಡೆಯಿತು. ಎನ್ ಸಿಸಿ ವಿಭಾಗದಲ್ಲಿ ಪಿ.ಎಂ.ಶ್ರೀ ಜವಾಹರ ನವೋದಯ ಶಾಲೆ ಗಾಳಿಬೀಡು (ಪ್ರ), ಕೊಡಗು ವಿದ್ಯಾಲಯ (ದ್ವಿ), ಮಡಿಕೇರಿ ಸಂತ ಜೋಸೆಫರ ಪ್ರೌಢಶಾಲೆ (ತೃ), ಸ್ಕೌಡ್ ಅಂಡ್ ಗೈಡ್ಸ್ ಹಾಗೂ ಸೇವಾ ದಳ ವಿಭಾಗದಲ್ಲಿ ಮಡಿಕೇರಿಯ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ (ಪ್ರ), ಸರ್ಕಾರಿ ಪದವಿ ಪೂರ್ವ ಕಾಲೇಜು-ಪ್ರೌಢಶಾಲಾ ವಿಭಾಗ (ದ್ವಿ), ಸಂತ ಮೈಕಲರ ಪ್ರಾಥಮಿಕ ಶಾಲೆ ಕನ್ನಡ ಮಾಧ್ಯಮ(ತೃ) ಬಹುಮಾನ ಗಳಿಸಿತು.ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ, ನಗರಸಭೆ ಅಧ್ಯಕ್ಷರಾದ ಪಿ. ಕಲಾವತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮೆಹರೋಜ್ ಖಾನ್, ಜಿಲ್ಲಾ ಅಧ್ಯಕ್ಷ ಟಿ.ಎಂ. ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಆರ್.ಎನ್., ಲೋಕಾಯುಕ್ತ ಎಸ್ ಪಿ. ದಿನೇಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.