ಸಾರಾಂಶ
ಮಿರ್ಚಿ ಹಾಕಿದ ಗವಿಶ್ರೀ । 350ಕ್ಕೂ ಹೆಚ್ಚು ಜನರಿಂದ ಮಿರ್ಚಿ ತಯಾರಿಕೆಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ಗವಿಸಿದ್ಧೇಶ್ವರ ರಥೋತ್ಸವದ ಮಾರನೇ ದಿನವಾದ ಗುರುವಾರ ಮಹಾದಾಸೋಹದಲ್ಲಿ ಲಕ್ಷಾಂತರ ಭಕ್ತರು ಬಿಸಿ ಬಿಸಿ ಮಿರ್ಚಿ ಹಾಗೂ ಜಿಲೇಬಿ ಸವಿದರು.ಗವಿಸಿದ್ಧೇಶ್ವರ ಜಾತ್ರೆ ಅಂದರೆ ವಿಶಿಷ್ಟತೆಗೆ ಹೆಸರು. ಅದರಲ್ಲೂ ಮಹಾದಾಸೋಹ ಅತ್ಯಂತ ಜೋರಾಗಿರುತ್ತದೆ. ಈ ಮಧ್ಯೆ ಜಾತ್ರೆಯ ಮಾರನೇ ದಿನ ಲಕ್ಷ ಲಕ್ಷ ಭಕ್ತರಿಗೆ ಮಿರ್ಚಿ ತಯಾರಿಸಿ ಉಣಬಡಿಸಲಾಗಿದೆ. ಸುಮಾರು 5 ಲಕ್ಷ ಮಿರ್ಚಿ ಮಾಡಲಾಗಿತ್ತು. ದೇಶದ ಜಾತ್ರಾ ಪರಂಪರೆಯಲ್ಲೇ ಇದೊಂದು ವಿಶಿಷ್ಟ ದಾಖಲೆಯಾಗಿದೆ. 25 ಕ್ವಿಂಟಲ್ ಹಸಿಮೆಣಸಿನಕಾಯಿ, 25 ಕ್ವಿಂಟಲ್ ಹಸಿ ಹಿಟ್ಟು, 10 ಬ್ಯಾರಲ್ ಎಣ್ಣೆ, 50 ಕೆಜಿ ಅಜವಾನ, 50 ಕೆಜಿ ಸೋಡಾಪುಡಿ,100 ಕೆಜಿ ಉಪ್ಪು, 60 ಸಿಲಿಂಡರ್ ಬಳಸಿ ಮಿರ್ಚಿ ಮಾಡಲಾಗಿತ್ತು. ಗುರುವಾರ ತಡರಾತ್ರಿಯವರೆಗೂ ಮಿರ್ಚಿ ಹಾಕಲಾಗಿದ್ದು, ಭಕ್ತರು ರಾತ್ರಿಯೂ ಪ್ರಸಾದದಲ್ಲಿ ಮಿರ್ಚಿ ಸವಿದಿದ್ದಾರೆ.
ಮಿರ್ಚಿ ಹಾಕಿದ ಗವಿಶ್ರೀ:ಗವಿಸಿದ್ಧೇಶ್ವರ ಸ್ವಾಮೀಜಿ ಸಹ ಸ್ವತಃ ತಾವೇ ಮಿರ್ಚಿ ಹಾಕಿದರು. ಕಾದ ಬಾಣಲೆಯಲ್ಲಿ ಮಿರ್ಚಿ ಹಾಕಿ ಅವುಗಳನ್ನು ತೆಗೆದರು.
350 ಜನರಿಂದ ಮಿರ್ಚಿ ತಯಾರಿ:ಸಿಂಧನೂರ ಭಾಗದ ಭಕ್ತರು ಸೇರಿದಂತೆ ಕೊಪ್ಪಳ ಸುತ್ತಮುತ್ತಲಿನ ಸುಮಾರು 350ಕ್ಕೂಹೆಚ್ಚು ಜನ ಬೆಳಗ್ಗೆ 5ರಿಂದ ರಾತ್ರಿ 10 ರವರೆಗೆ ನಿರಂತರವಾಗಿ ಮಿರ್ಚಿ ಮಾಡುವ ಸೇವೆಯಲ್ಲಿ ತೊಡಗಿದ್ದರು.
14 ಲಕ್ಷ ಜಿಲೇಬಿ:ಮಹಾದಾಸೋಹದಲ್ಲಿ ಭಕ್ತರ ಪ್ರಸಾದಕ್ಕೆ 14 ಲಕ್ಷ ಜಿಲೇಬಿ ತಯಾರಿಸಿ ಬಡಿಸಲಾಗಿದೆ. ಪ್ರತಿ ವರ್ಷ ಒಂದಿಲ್ಲಾ ಒಂದು ವಿಶೇಷ ಖಾದ್ಯವನ್ನು ಜಾತ್ರೆಯಲ್ಲಿ ಮಾಡಲಾಗುತ್ತದೆ. ಈ ವರ್ಷ ಮಿರ್ಚಿ ಜೊತೆ ಜಿಲೇಬಿಯನ್ನು ಸಹ ಭಕ್ತರು ಸವಿದರು.
ಮಿರ್ಚಿ ಹಾಕಿದ ಎಸ್ಪಿ, ಜಿಲೇಬಿ ಹಾಕಿದ ಎಸ್ಪಿ ಪತ್ನಿ, ತಾಯಿ-ತಂದೆ:ಜಾತ್ರೆ ಮಹಾದಾಸೋಹದಲ್ಲಿ ಎಸ್ಪಿ ರಾಮ ಅರಸಿದ್ದಿ ಅವರ ಮಡದಿ ಸುಧಾ ರಾಮ ಅರಸಿದ್ದಿ, ಅವರ ತಂದೆ ಲಕ್ಷ್ಮಣ, ಅವರ ತಾಯಿ ರತ್ನಮಾಲಾ ಅರಸಿದ್ದಿ ಜಿಲೇಬಿ ಹಾಕಿದರು.