ಸಾರಾಂಶ
ಹಂಗಾಮಿನ ಕಬ್ಬು ನುರಿಸುವ ಕಾರ್ಯವನ್ನು ಸರ್ಕಾರದ ಆದೇಶದಂತೆ ನವೆಂಬರ್‌ನಲ್ಲಿ ಪ್ರಾರಂಭಿಸಲಾಗುವುದು ಮತ್ತು ಈ ವರ್ಷ 5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ.
ಕನ್ನಡಪ್ರಭ ವಾರ್ತೆ ಬೀದರ್
ಕಾರ್ಖಾನೆಯನ್ನು ಆರ್ಥಿಕವಾಗಿ ಸದೃಢಗೊಳಿಸಲು ಕಾರ್ಖಾನೆ 100 ಎಕರೆ ಜಮೀನಿನಲ್ಲಿ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಲು ಖಾಸಗಿ ಕಂಪನಿಯವರಿಗೆ ಗುತ್ತಿಗೆ ಮೇಲೆ ನೀಡಲು ಉದ್ದೇಶಿಸಲಾಗಿದ್ದಲ್ಲದೆ ಎಥೆನಾಲ್ ಘಟಕವನ್ನು ಶೀಘ್ರ ಆರಂಭಿಸಲಾಗುವುದು ಎಂದು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿದ್ರಾಮ್ ತಿಳಿಸಿದರು.ಅವರು ಕಾರ್ಖಾನೆ 2023-24ನೇ ಸಾಲಿನ 39ನೇ ವಾರ್ಷಿಕ ಮಹಾಸಭೆ ಉದ್ದೇಶಿಸಿ ಮಾತನಾಡಿ, ಪ್ರಸಕ್ತ 2024-25ನೇ ಹಂಗಾಮಿನ ಕಬ್ಬು ನುರಿಸುವ ಕಾರ್ಯವನ್ನು ಸರ್ಕಾರದ ಆದೇಶದಂತೆ ನವೆಂಬರ್‌ನಲ್ಲಿ ಪ್ರಾರಂಭಿಸಲಾಗುವುದು ಮತ್ತು ಈ ವರ್ಷ 5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿರುವುದಾಗಿ ತಿಳಿಸಿದರಲ್ಲದೇ ರೈತರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿಕೊಂಡರು.
ಡಿಸಿಸಿ ಬ್ಯಾಂಕಿನ ಸಾಲವನ್ನು ನಾವು ಪ್ರತಿ ವರ್ಷ 20ಕೋಟಿ ರು.ಯಂತೆ ತೀರಿಸಲು ಸಿದ್ಧರಿದ್ದು ಅವರು ನೀಡಿರುವ ಸರ್ಫೇಸಿ ಕಾಯ್ದೆಯಡಿ ನೋಟಿಸ್ ಹಿಂದಕ್ಕೆ ಪಡೆಯಬೇಕು ಎಂದು ಮನವಿಸಿದರು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ರೈತರ ಹಿತದೃಷ್ಟಿಯಿಂದ ಮಧ್ಯಸ್ಥಿಕೆ ವಹಿಸಿ ಕಾರ್ಖಾನೆ ಹಾಗೂ ಬ್ಯಾಂಕ್‌ನವರ ಸಭೆ ಕರೆದು ಕಬ್ಬು ನುರಿಸುವ ಹಂಗಾಮಿಗೆ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ಅಧ್ಯಕ್ಷ ಡಿ.ಕೆ ಸಿದ್ರಾಮ್ ಮನವಿ ಮಾಡಿದರು.ಸದರಿ ವಾರ್ಷಿಕ ಮಹಾಸಭೆಗೆ ಆಗಮಿಸಿದ ಸರ್ವ ಸದಸ್ಯ ರೈತರನ್ನು ಹಾಗೂ ಗಣ್ಯರನ್ನು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಸೋಮಶೇಖರ ಪಾಟೀಲ್ ಸ್ವಾಗತಿಸಿ ಮಹಾಸಭೆಯ ನೋಟೀಸ್‌ನ್ನು ಮಂಡಿಸಿದರು. ಸಭೆಯಲ್ಲಿ ಕಾರ್ಖಾನೆಯ ಉಪಾಧ್ಯಕ್ಷರಾದ ಬಾಲಾಜಿ ಚವ್ಹಾಣ, ಕಾನೂನು ಸಲಹೆಗಾರರಾದ ಬಿಎಸ್ ಅಪರಂಜಿ, ನಿರ್ದೇಶಕರಾದ ಉಮಾಕಾಂತ ನಾಗಮಾರಪಳ್ಳಿ ಸೇರಿದಂತೆ ಮತ್ತಿತರರು ಇದ್ದರು.