ಸರ್ಕಾರಿ ಉದ್ಯಾನಗಳ ಒಟ್ಟು ವಿಸ್ತೀರ್ಣದ ಗರಿಷ್ಠ ಶೇ. 5 ರಷ್ಟು ಜಾಗವನ್ನು ಸಾರ್ವಜನಿಕ ಉಪಯೋಗಕ್ಕಾಗಿ ಮಾರಾಟ, ಅಡಮಾನಕ್ಕೆ ಅವಕಾಶ ಕಲ್ಪಿಸುವ ‘ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ಕಾಯ್ದೆ– 1975’ ತಿದ್ದುಪಡಿ ಮಸೂದೆಗೂ ಉಭಯ ಸದನಗಳಲ್ಲಿ ಸೋಮವಾರ ಅಂಗೀಕಾರ ದೊರೆತಿದೆ.
ಕನ್ನಡಪ್ರಭ ವಾರ್ತೆ, ವಿಧಾನಮಂಡಲ
ಸರ್ಕಾರಿ ಉದ್ಯಾನಗಳ ಒಟ್ಟು ವಿಸ್ತೀರ್ಣದ ಗರಿಷ್ಠ ಶೇ. 5 ರಷ್ಟು ಜಾಗವನ್ನು ಸಾರ್ವಜನಿಕ ಉಪಯೋಗಕ್ಕಾಗಿ ಮಾರಾಟ, ಅಡಮಾನಕ್ಕೆ ಅವಕಾಶ ಕಲ್ಪಿಸುವ ‘ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ಕಾಯ್ದೆ– 1975’ ತಿದ್ದುಪಡಿ ಮಸೂದೆಗೂ ಉಭಯ ಸದನಗಳಲ್ಲಿ ಸೋಮವಾರ ಅಂಗೀಕಾರ ದೊರೆತಿದೆ.ಉಭಯ ಸದನಗಳಲ್ಲಿ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸದಸ್ಯರು ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಈ ವೇಳೆ ಯಾವುದೇ ಚರ್ಚೆ ಇಲ್ಲದೆ ವಿವಾದಾತ್ಮಕ ಮಸೂದೆಗೆ ಅಂಗೀಕಾರ ದೊರೆತಿದೆ.
ಸರ್ಕಾರಿ ಉದ್ಯಾನಗಳ ಶೇ.5 ರಷ್ಟು ಜಾಗವನ್ನು ಸಾರ್ವಜನಿಕ ಉಪಯೋಗಕ್ಕಾಗಿ ಮಾರಾಟ, ಗುತ್ತಿಗೆ, ಉಡುಗೊರೆ, ವಿನಿಮಯ, ಅಡಮಾನ ಅಥವಾ ಇತರ ವಿಧಾನಗಳ ಮೂಲಕ ಹಸ್ತಾಂತರಿಸಲು ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ.ಉದ್ಯಾನದ ಜಾಗ ಬಳಕೆ ಕುರಿತು ರಾಜ್ಯ ಸರ್ಕಾರಕ್ಕೆ ಯಾವುದೇ ಶಿಫಾರಸು ಮಾಡುವ ಮೊದಲು, ಪ್ರಸ್ತಾವಿತ ಭೂ ಬಳಕೆಯು ಕೂಲಂಕಷವಾಗಿ ಮೌಲ್ಯಮಾಪನ ಆಗುವುದನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ನೇತೃತ್ವದಲ್ಲಿ ಹಾಗೂ ನಿರ್ದಿಷ್ಟ ಅಧಿಕಾರಿಗಳು ಮತ್ತು ಆಯಾ ಕ್ಷೇತ್ರದ ಪರಿಣತ ವೃತ್ತಿಪರರನ್ನು ಒಳಗೊಂಡ ಅಧಿಕೃತ ಮೌಲ್ಯಮಾಪನ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.
ಹಿಂದಿನ ಹಸ್ತಾಂತರಿತ ಜಾಗವೂ ಸೇರಿ ಶೇ.5 ರ ಮಿತಿ:ಅಲ್ಲದೆ, ಶೇ.5ರಷ್ಟು ಭೂ ವಿಸ್ತೀರ್ಣದ ಮಿತಿಯು ಈ ಹಿಂದೆ ಹಸ್ತಾಂತರಿಸಲಾದ ಭೂಮಿಯನ್ನು ಕಡ್ಡಾಯವಾಗಿ ಸೇರಿರಬೇಕು. ಆ ಮೂಲಕ, ಉಳಿದ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ರಕ್ಷಿಸಬೇಕು. ತೋಟಗಾರಿಕೆ ಇಲಾಖೆಯು ತನ್ನದೇ ಆದ ಆಡಳಿತಾತ್ಮಕ ಮತ್ತು ಸಂಬಂಧಿತ ಬಳಕೆಗಾಗಿ ಕೈಗೊಳ್ಳುವ ಸಾಮಾನ್ಯ ಅಭಿವೃದ್ಧಿ ಕಾರ್ಯಗಳು ಈ ನಿರ್ಬಂಧದ ವ್ಯಾಪ್ತಿಗೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಪ್ರಮುಖ ತೋಟಗಾರಿಕೆ ಯೋಜನೆಗಳನ್ನು ಜಾರಿಗೆ ತರಲು ಹಾಗೂ ತೋಟಗಾರಿಕಾ ಪ್ರದೇಶದ ಒಳಗಿನ ಅಲ್ಪಪ್ರಮಾಣದ ಪ್ರದೇಶಗಳನ್ನು ಬಳಸಿಕೊಳ್ಳಲು ವಿಶೇಷ ಕಾನೂನು ಮಾರ್ಗವನ್ನು ಒದಗಿಸಬೇಕು.ವಿಶೇಷವಾಗಿ ಇದು ಸಂಸ್ಕರಣಾ ನಂತರದ ಸೌಲಭ್ಯಗಳು, ಶೀತಲ ಸಂಗ್ರಹಣಾ ಘಟಕಗಳು, ಸುಧಾರಿತ ತಳಿಗಳ ಉತ್ಪಾದನೆ ಮತ್ತು ಸ್ಥಳೀಯ ಕೃಷಿ ಸಮುದಾಯಕ್ಕೆ ನೇರ ಪ್ರಯೋಜನ ನೀಡುವ ಕೃಷಿ ಆಧಾರಿತ ಕೈಗಾರಿಕೆಗಳನ್ನು ಒಳಗೊಂಡಿರುತ್ತದೆ.
ಇದಕ್ಕೆ ಸಾರ್ವಜನಿಕ ಹಿತಾಸಕ್ತಿ ಮತ್ತು ಅತಿ ಅಗತ್ಯವನ್ನು ಸಾಬೀತುಪಡಿಸುವ ದಾಖಲಿತ ಕಾರಣಗಳ ಬೆಂಬಲ ಇರಬೇಕು ಎಂದೂ ಮಸೂದೆಯಲ್ಲಿ ವಿವರಿಸಲಾಗಿದೆ.