ಸಾರಾಂಶ
ದೊಡ್ಡಬಳ್ಳಾಪುರ: ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದ ಪ್ರಸಕ್ತ ಸರ್ಕಾರದ ಮೊದಲ ಪೂರ್ಣಪ್ರಮಾಣದ ಬಜೆಟ್‌ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 7 ಯೋಜನೆಗಳನ್ನು ಪ್ರಸ್ತಾಪಿಸಲಾಗಿತ್ತು. ಆದರೆ ಈವರೆಗೆ ಆ 7 ಯೋಜನೆಗಳ ಪೈಕಿ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿರುವ ಒಂದು ಭರವಸೆ ಹೊರತುಪಡಿಸಿ ಉಳಿದ 6 ಯೋಜನೆಗಳು ಕಾರ್ಯಗತಗೊಂಡಿಲ್ಲ.
ಬೆಂ.ಗ್ರಾ ಜಿಲ್ಲೆಗೆ 2024-25ರ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಯೋಜನೆಗಳು:1.ಬೆಂಗಳೂರು ಹೊರವಲಯದಲ್ಲಿರುವ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ಮಾಗಡಿ ಮತ್ತು ಬಿಡದಿಯಲ್ಲಿ ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಉಪನಗರ ಟೌನ್‌ಶಿಪ್‌ಗಳನ್ನಾಗಿ ಅಭಿವೃದ್ಧಿ ಪಡಿಸಲಾಗುವುದು.
ವಸ್ತುಸ್ಥಿತಿ: ಯೋಜನೆ ಪರಿಶೀಲನೆ ಹಂತದಲ್ಲಿದೆ. ಜಿಲ್ಲೆಯ ವಿವಿಧ ಪಟ್ಟಣಗಳನ್ನು ಸಂಪರ್ಕಿಸುವ ಸುಸಜ್ಜಿತ ರಸ್ತೆ ಮತ್ತು ರೈಲು ಯೋಜನೆಯ ಬಗ್ಗೆ ಅಧ್ಯಯನ ನಡೆಯುತ್ತಿದೆ. ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ.2.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವನಹಳ್ಳಿವರೆಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ರೈಲು ಯೋಜನೆ ಪ್ರಾರಂಭಿಸಲು ಕಾರ‍್ಯಸಾಧ್ಯತಾ ವರದಿ ತಯಾರಿಸಲಾಗುವುದು.
ವಸ್ತುಸ್ಥಿತಿ: ಈ ಭರವಸೆ ಕುರಿತು ಯಾವುದೇ ಕ್ರಮಗಳೂ ಆಗಿಲ್ಲ. ಕೇವಲ ಘೋಷಣೆಗಷ್ಟೇ ಈ ಪ್ರಸ್ತಾವನೆ ಸೀಮಿತವಾಗಿದ್ದು, ಮೆಟ್ರೋ ಕಾರ್ಯಸಾಧ್ಯತಾ ವರದಿ ಸದ್ಯಕ್ಕೆ ತಯಾರಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.3.ತಾಲೂಕು ಆಸ್ಪತ್ರೆಗಳಿಲ್ಲದ ಅನೇಕಲ್, ನೆಲಮಂಗಲ, ಹೊಸಕೋಟೆ ತಾಲೂಕುಗಳಲ್ಲಿ ಪ್ರಸಕ್ತ ಸಾಲಿನಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಗಳನ್ನು ತಲಾ 40 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು.
ವಸ್ತುಸ್ಥಿತಿ: ಈ ಪ್ರಸ್ತಾವನೆ ಕೇವಲ ಘೋಷಣೆಯಾಗಿ ಮಾತ್ರ ಉಳಿದಿದ್ದು, ಬಜೆಟ್ ನಂತರದ ದಿನಗಳಲ್ಲಿ ಯಾವುದೇ ಪ್ರಕ್ರಿಯೆಯೂ ನಡೆದಿಲ್ಲ. ಆರೋಗ್ಯ ಇಲಾಖೆಯಿಂದ ಯೋಜನೆಗೆ ಅಗತ್ಯ ಅನುದಾನವೂ ದೊರೆತಿಲ್ಲ.4.ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚನೆ.
ವಸ್ತುಸ್ಥಿತಿ: ಘಾಟಿ ಸುಬ್ರಹ್ಮಣ್ಯ ದೇವಾಲಯ ಅಭಿವೃದ್ದಿ ಪ್ರಾಧಿಕಾರ ರಚನೆಯಾಗಿದ್ದು, ಸರ್ಕಾರದಿಂದ ಸದಸ್ಯರ ನೇಮಕವೂ ಆಗಿದೆ. ಪ್ರಾಧಿಕಾರ ತನ್ನ ವ್ಯಾಪ್ತಿಯ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿದೆ.5.ನೆಲಮಂಗಲದಲ್ಲಿ 6 ಕೋಟಿ ರುಪಾಯಿ ವೆಚ್ಚದಲ್ಲಿ ಸ್ವಯಂ ಚಾಲಿತ ಚಾಲನಾ ಪಥ ನಿರ್ಮಾಣ (ರಾಜ್ಯದ ವಿವಿಧ ಜಿಲ್ಲೆಗಳ 6 ಸ್ಥಳಗಳಲ್ಲಿ ಚಾಲನಾ ಪಥ ನಿರ್ಮಾಣಕ್ಕೆ 36 ಕೋಟಿ ರು.ಮೀಸಲು).
ವಸ್ತುಸ್ಥಿತಿ: ಯೋಜನೆ ಬಜೆಟ್ ನಂತರದಲ್ಲಿ ಮತ್ತೆಲ್ಲೂ ಪ್ರಸ್ತಾಪವೇ ಆಗಿಲ್ಲ. ಯಾವುದೇ ಪ್ರಕ್ರಿಯೆ ನಡೆದಿಲ್ಲ.6.ದೇವನಹಳ್ಳಿಯಲ್ಲಿ 5 ಕೋಟಿ ವೆಚ್ಚದಲ್ಲಿ ಸೀಜಿಂಗ್ ಯಾಡ್ ನಿರ್ಮಾಣ ಮಾಡುವುದು (ತುಮಕೂರು ಮತ್ತು ದೇವನಹಳ್ಳಿಗಳಿಗೆ ಯೋಜನೆ ಜಾರಿಗೆ ಒಟ್ಟು 10 ಕೋಟಿ ರು ಮೀಸಲು.)
ವಸ್ತುಸ್ಥಿತಿ: ಈ ಯೋಜನೆಗೂ ಘೋಷಣೆಗಷ್ಟೇ ಸೀಮಿತವಾಗಿದೆ. ಯಾವುದೇ ಚಟುವಟಿಕೆಗಳೂ ಈ ಕುರಿತು ಸಂಬಂಧಪಟ್ಟ ಇಲಾಖೆಗಳಲ್ಲಿ ನಡೆದಿಲ್ಲ.7.ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತು ಉತ್ತೇಜಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಪೂಜನಹಳ್ಳಿಯಲ್ಲಿ ಆಹಾರ ಪಾರ್ಕ್ ಸ್ಥಾಪನೆ.
ವಸ್ತುಸ್ಥಿತಿ: ಈ ಪ್ರಸ್ತಾವನೆ ಕೇವಲ ಘೋಷಣೆಯಾಗಿ ಮಾತ್ರ ಉಳಿದಿದ್ದು, ಬಜೆಟ್ ನಂತರದ ದಿನಗಳಲ್ಲಿ ಯಾವುದೇ ಪ್ರಕ್ರಿಯೆಯೂ ನಡೆದಿಲ್ಲ. ಆರೋಗ್ಯ ಇಲಾಖೆಯಿಂದ ಯೋಜನೆಗೆ ಅಗತ್ಯ ಅನುದಾನವೂ ದೊರೆತಿಲ್ಲ.