ಮೋದಿ ರೋಡ್‌ ಶೋಗೆ ಪುತ್ತೂರಿನಿಂದ 5 ಸಾವಿರ ಮಂದಿ: ಮಠಂದೂರು

| Published : Apr 14 2024, 01:56 AM IST / Updated: Apr 14 2024, 10:58 AM IST

ಸಾರಾಂಶ

ಪುತ್ತೂರಿನಲ್ಲಿ ಏ.16  ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೋಡ್ ಶೋ ನಡೆಸಲಿದ್ದಾರೆ ಎನ್ನುತ್ತಿದ್ದಾರೆ. ಸೋಲಿನ ಹತಾಶೆ ಕಾಂಗ್ರೆಸನ್ನು ಕಾಡುತ್ತಿದೆ ಎಂದು ಮಠಂದೂರು ಹೇಳಿದರು.

 ಪುತ್ತೂರು:  ಮಂಗಳೂರಿನಲ್ಲಿ ಭಾನುವಾರ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಕಾರ್ಯಕ್ರಮದಲ್ಲಿ ಪುತ್ತೂರಿನಿಂದ ೫ ಸಾವಿರಕ್ಕೂ ಮಿಕ್ಕಿದ ಮೋದಿ ಅಭಿಮಾನಿಗಳು ಭಾಗಿಯಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳು ಸ್ವಯಿಚ್ಛೆಯಿಂದ ತಮ್ಮ ವಾಹನಗಳಲ್ಲಿ ಮಂಗಳೂರಿಗೆ ತೆರಳಲಿದ್ದಾರೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

ಅವರು ಶನಿವಾರ ಪುತ್ತೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಪುತ್ತೂರು ವಿಧಾನಸಭೆಯ ಎಲ್ಲ ಬೂತ್‌ಗಳಿಂದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಪರಸ್ಪರ ತಾವೇ ಹೊಂದಾಣಿಕೆ ಮಾಡಿಕೊಂಡು ಬಸ್ಸು ಮೂಲಕ ಮಂಗಳೂರಿಗೆ ಆಗಮಿಸಲಿದ್ದಾರೆ. ಮಂಗಳೂರಿನಲ್ಲಿ ನಡೆಯುವ ಮೋದಿ ರೋಡ್ ಶೋ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರನ್ನು 4 ಲಕ್ಷಕ್ಕೂ ಮಿಕ್ಕಿದ ಮತಗಳಲ್ಲಿ ಗೆಲ್ಲಿಸುವ ಕಾರ್ಯಕ್ರಮಕ್ಕೆ ಮುನ್ನುಡಿಯಾಗಲಿದೆ. ಕೇಂದ್ರದಲ್ಲಿ ಬಿಜೆಪಿ 400 ಕ್ಕೂ ಮಿಕ್ಕಿ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು ಇವುಗಳಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಸ್ಥಾನವೂ ಒಂದಾಗಲಿದೆ ಎಂದರು.

ಪುತ್ತೂರಿನಲ್ಲಿ ಏ.16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೋಡ್ ಶೋ ನಡೆಸಲಿದ್ದಾರೆ ಎನ್ನುತ್ತಿದ್ದಾರೆ. ಸೋಲಿನ ಹತಾಶೆ ಕಾಂಗ್ರೆಸನ್ನು ಕಾಡುತ್ತಿದೆ ಎಂದು ಮಠಂದೂರು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಇದ್ದರು.