ಸಾರಾಂಶ
ಕಳೆದ ಏಳೆಂಟು ವರ್ಷಗಳಿಂದಲೂ ರೈತರ ಕಬ್ಬಿಗೆ ಯಾವುದೇ ರೀತಿಯ ಬೆಲೆ ನಿಗದಿ ಮಾಡದೆ ಇದ್ದು, ರೈತರು ತುಂಬಾ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ನಡುವೆ ಕೊರೋನಾ ಮತ್ತು ಬರದಿಂದ ತತ್ತರಿಸಿ ಜೀವನ ನಡೆಸುವುದೇ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ರೈತರನ್ನು ರಕ್ಷಣೆ ಮಾಡಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಟನ್ ಕಬ್ಬಿಗೆ ೫ ಸಾವಿರ ನಿಗದಿ ಮಾಡುವುದು, ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಬೈಕ್ ಜಾಥಾ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಕಳೆದ ಏಳೆಂಟು ವರ್ಷಗಳಿಂದಲೂ ರೈತರ ಕಬ್ಬಿಗೆ ಯಾವುದೇ ರೀತಿಯ ಬೆಲೆ ನಿಗದಿ ಮಾಡದೆ ಇದ್ದು, ರೈತರು ತುಂಬಾ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ನಡುವೆ ಕೊರೋನಾ ಮತ್ತು ಬರದಿಂದ ತತ್ತರಿಸಿ ಜೀವನ ನಡೆಸುವುದೇ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ರೈತರನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯಲ್ಲಿ ರೈತರು ಬೆಳೆದ ಕಬ್ಬು ೧೮ ತಿಂಗಳು ತುಂಬುತ್ತಿದ್ದರೂ ಕಾರ್ಖಾನೆಯವರು ಕಬ್ಬು ತೆಗೆದುಕೊಳ್ಳುವುದನ್ನು ವಿಳಂಬ ಮಾಡುತ್ತಿದ್ದಾರೆ. ಕಾರ್ಖಾನೆಯವರು ಕಬ್ಬು ಕಟಾವಿಗೆ ಕ್ರಮ ವಹಿಸಿ ಸೂಕ್ತ ಸಮಯಕ್ಕೆ ಕಬ್ಬು ಕಟಾವು ಮಾಡಿಸಲು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಕಬ್ಬಿಗೆ ಕನಿಷ್ಠ ೫ ಸಾವಿರ ರು. ಬೆಲೆ ಕೊಡಲೇಬೇಕು. ಇಲ್ಲದಿದ್ದಲ್ಲಿ ರೈತರು ಬೀದಿಗೆ ಇಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರಲ್ಲದೆ, ನಾಡಹಬ್ಬ ದಸರಾದೊಳಗೆ ಕಬ್ಬಿಗೆ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ನಿಂಗೇಗೌಡ, ಕೋಣನಹಳ್ಳಿ ಮಂಜು, ನಾಗರಾಜು, ಚಂದ್ರು, ರಾಮಲಿಂಗೇಗೌಡ, ಜಿ.ಎನ್. ಸುರೇಶ, ಬಿ. ಶ್ರೀನಿವಾಸ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.