ಘಟನೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತರಲಾಗಿದೆ. ಗಾಯಾಳುಗಳ ಚಿಕಿತ್ಸಾ ವೆಚ್ಚ ಅಥವಾ ಗರಿಷ್ಠ ತಲಾ ₹50 ಸಾವಿರದವರೆಗೆ ನೆರವು ನೀಡಲು ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ.

ಗದಗ: ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅವರು ಸೋಮವಾರ ನಗರದ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಗೆ ಭೇಟಿ ನೀಡಿ, ತೋಂಟದಾರ್ಯ ಮಠದ ಆವರಣದಲ್ಲಿ ನಡೆದ ಅವಘಡದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಗಾಯಾಳುಗಳ ಚಿಕಿತ್ಸೆಗಾಗಿ ಸರ್ಕಾರದಿಂದ ತಲಾ ₹50 ಸಾವಿರ ನೆರವು ನೀಡುವುದಾಗಿ ತಿಳಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೋಂಟದಾರ್ಯ ಮಠದ ಜಾತ್ರೆಯಲ್ಲಿನ ಅವಘಡದ ಪ್ರಕರಣದಲ್ಲಿ ಒಟ್ಟು 17 ಜನರು ಗಾಯಗೊಂಡಿದ್ದು, ಎಲ್ಲರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹಿರಿಯ ವೈದ್ಯರು ಹಾಗೂ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. 17 ಜನರಲ್ಲಿ ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ 16 ಮಂದಿಯಲ್ಲಿ ಬಹುತೇಕರು ಗುಣಮುಖರಾಗಿದ್ದಾರೆ.

ಇಬ್ಬರಿಗೆ ಹೆಚ್ಚಿನ ಆರೈಕೆ ಅಗತ್ಯವಿದ್ದು, ವೈದ್ಯರು ವಿಶೇಷ ನಿಗಾ ವಹಿಸಿದ್ದಾರೆ. ಸುಮಾರು 11 ಜನರನ್ನು ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಉಳಿದವರು ಮುಂದಿನ ಎರಡು ಅಥವಾ ಮೂರು ದಿನಗಳಲ್ಲಿ ಮನೆಗೆ ಮರಳಲಿದ್ದಾರೆ ಎಂದರು.ಘಟನೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತರಲಾಗಿದೆ. ಗಾಯಾಳುಗಳ ಚಿಕಿತ್ಸಾ ವೆಚ್ಚ ಅಥವಾ ಗರಿಷ್ಠ ತಲಾ ₹50 ಸಾವಿರದವರೆಗೆ ನೆರವು ನೀಡಲು ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು. ಚಿಕಿತ್ಸಾ ವೆಚ್ಚ ಹೆಚ್ಚಾದಲ್ಲಿ ಸರ್ಕಾರದಿಂದ ಇನ್ನಷ್ಟು ನೆರವು ನೀಡುವ ಕುರಿತು ಸಹ ಚರ್ಚೆ ನಡೆದಿದೆ. ಗಾಯಾಳುಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.ಜಾತ್ರೆ ಆಯೋಜಕರ ಜವಾಬ್ದಾರಿ:

ಜಾತ್ರೆಗಳಲ್ಲಿ ನಡೆಯುವ ಮನರಂಜನಾ ಆಟಗಳು ಹಾಗೂ ಇತರ ವ್ಯವಸ್ಥೆಗಳ ಗುತ್ತಿಗೆ ಪಡೆದವರು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಇಂತಹ ಅವಘಡಗಳು ಸಂಭವಿಸಿದಾಗ ಪೊಲೀಸರು ಹಾಗೂ ಸಂಬಂಧಿತ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳುತ್ತವೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದರು.

ಸಮಿತಿ ನಿರ್ಧಾರ:

ತೋಂಟದಾರ್ಯ ಮಠದ ಜಾತ್ರೆಯ ಅವಧಿಯನ್ನು ಸೀಮಿತಗೊಳಿಸುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ತೋಂಟದಾರ್ಯ ಮಠದ ಶ್ರೀಗಳು ಹಾಗೂ ಜಾತ್ರಾ ಸಮಿತಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಿ ಎಂದರು.ಬಸ್ ತಂಗುದಾಣ ನಿರ್ಮಾಣ: ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಜಿಲ್ಲಾಸ್ಪತ್ರೆಗೆ ಬರುವ ಸಾರ್ವಜನಿಕರು ಹಾಗೂ ರೋಗಿಗಳ ಅನುಕೂಲಕ್ಕಾಗಿ ಶೀಘ್ರದಲ್ಲೇ ಆಸ್ಪತ್ರೆ ಆವರಣದಲ್ಲಿ ಬಸ್ ತಂಗುದಾಣ ನಿರ್ಮಿಸಲಾಗುವುದು. ಸಾರ್ವಜನಿಕ ಮೂಲ ಸೌಕರ್ಯ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು.

ಉತ್ತಮ ಸ್ಪಂದನೆ: ಕಳೆದ ವಾರ ಲಕ್ಕುಂಡಿಯಲ್ಲಿ ಪುರಾತತ್ವ ಅವಶೇಷ ಸಪ್ತಾಹ ಆರಂಭಿಸಲಾಗಿದೆ. ಈ ವೇಳೆ ನಾವು ಹಾಗೂ ಶಾಸಕ ಸಿ.ಸಿ. ಪಾಟೀಲರು ಮಾತನಾಡಿದಂತೆ ಈಗಾಗಲೇ 1300ಕ್ಕೂ ಹೆಚ್ಚು ಪುರಾತತ್ವ ಅವಶೇಷಗಳನ್ನು ಗುರುತಿಸಿ ಬಯಲಿಗೆ ತರುವ ಕಾರ್ಯ ನಡೆದಿದೆ ಎಂದರು.

ಅವಶೇಷಗಳು ಪತ್ತೆ: ಲಕ್ಕುಂಡಿಯಲ್ಲಿ ರಾಷ್ಟ್ರಕೂಟರು ಹಾಗೂ ಹೊಯ್ಸಳರ ಕಾಲಕ್ಕೆ ಸೇರಿದ ಅಮೂಲ್ಯ ಶಿಲ್ಪಗಳು ಹಾಗೂ ಪುರಾತತ್ವ ಅವಶೇಷಗಳು ದೊರೆತಿವೆ. ದೇಶದಲ್ಲಿಯೇ ಅತ್ಯುತ್ತಮ ಪುರಾತತ್ವ ಸಂಪತ್ತನ್ನು ಹೊಂದಿರುವ ತಾಣಗಳಲ್ಲಿ ಲಕ್ಕುಂಡಿ ಪ್ರಮುಖ ಸ್ಥಾನ ಪಡೆದಿದೆ. ಲಕ್ಕುಂಡಿಯಲ್ಲಿ ಸುಮಾರು ₹10 ಕೋಟಿ ರುಪಾಯಿ ವೆಚ್ಚದಲ್ಲಿ ಉತ್ಖನನ ಕಾರ್ಯ ಆರಂಭಿಸಲಾಗಿದೆ. ಇದು ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಅತ್ಯಂತ ಮಹತ್ವದ ಪ್ರದೇಶವಾಗಿದ್ದು, ಸರ್ಕಾರ ಯೋಜಿತ ರೀತಿಯಲ್ಲಿ ಕಾರ್ಯ ನಡೆಸುತ್ತಿದೆ ಎಂದರು.ಮಾಧ್ಯಮಗಳು ಈ ಕಾರ್ಯವನ್ನು ಉತ್ತಮವಾಗಿ ಬೆಳಕಿಗೆ ತರುತ್ತಿದ್ದು, ಲಕ್ಕುಂಡಿ ಜನರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಎಲ್ಲಿಯೇ ಪುರಾತತ್ವ ಅವಶೇಷಗಳು ದೊರೆತರೂ ಜನರು ಅವನ್ನು ಸರ್ಕಾರ ಹಾಗೂ ಪುರಾತತ್ವ ಪ್ರಾಧಿಕಾರಕ್ಕೆ ಒಪ್ಪಿಸುವ ಮೂಲಕ ದೊಡ್ಡತನ ಮೆರೆದಿದ್ದಾರೆ ಎಂದು ಪ್ರಶಂಸಿಸಿದರು.ಈ ವೇಳೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಎಸ್.ಎನ್. ಬಳ್ಳಾರಿ, ಸಿದ್ದು ಪಾಟೀಲ, ಪ್ರಭು ಬುರಬುರೆ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಡಿವೈಎಸ್ಪಿ ಮುರ್ತುಜಾ ಖಾದ್ರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.