ಸಂಚಾರ ನಿಯಮ ಉಲ್ಲಂಘಿಸಿ ವಾಹನ ನಿಲುಗಡೆ ನಿಷೇಧಿತ ಪ್ರದೇಶಗಳಲ್ಲಿ ವಾಹನ ನಿಲ್ಲಿಸುವವರೆಗೆ ಪೊಲೀಸರು ಬಿಸಿ ಮುಟ್ಟಿಸಿದ್ದು, ಪ್ರತಿ ದಿನ 50 ರಿಂದ 70 ವಾಹನಗಳನ್ನು ಟೋಯಿಂಗ್ ಮೂಲಕ ದಂಡ ವಿಧಿಸುತ್ತಿದ್ದಾರೆ. ರಾಜಧಾನಿಯಲ್ಲಿ ನಾಲ್ಕು ವರ್ಷಗಳ ಬಳಿಕ ಪುನಾ ರಸ್ತೆಗಿಳಿದ ಟೋಯಿಂಗ್ ವಾಹನಗಳು, ತಿಂಗಳ ಅವಧಿಯಲ್ಲಿ ಸುಮಾರು 600ಕ್ಕೂ ಹೆಚ್ಚಿನ ವಾಹನಗಳ ಟೋಯಿಂಗ್ ಮೂಲಕ ಪೊಲೀಸರು ದಂಡ ವಿಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಈ ಸಂಬಂಧ ‘ಕನ್ನಡಪ್ರಭ’ಕ್ಕೆ ಶುಕ್ರವಾರ ಪ್ರತಿಕ್ರಿಯಿಸಿದ ಜಂಟಿ ಆಯುಕ್ತ (ಸಂಚಾರ) ಕಾರ್ತಿಕ್ ರೆಡ್ಡಿ ಅವರು, ನಗರದಲ್ಲಿ ಟೋಯಿಂಗ್ ವ್ಯವಸ್ಥೆ ಮುಂದುವರಿದಿದೆ. ಯಾವುದೇ ರೀತಿಯ ತಾಂತ್ರಿಕ ಸಮಸ್ಯೆ ಎದುರಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಸುಸ್ತ ಗ್ರೇಟರ್ ಬೆಂಗಳೂರು ಪ್ರಾಧಿಕಾರದ 3 ಪಾಲಿಕೆ (ಕೇಂದ್ರ, ಉತ್ತರ ಹಾಗೂ ಪಶ್ಚಿಮ) ವ್ಯಾಪ್ತಿಯಲ್ಲಿ ಆರು ಟೋಯಿಂಗ್ ವಾಹನಗಳು ಕಾರ್ಯಾಚರಣೆ ನಡೆಸಿವೆ. ಸಂಚಾರ ನಿಯಮ ಉಲ್ಲಂಘಿಸಿ ನಿಲುಗಡೆ ನಿಷೇಧ ಪ್ರದೇಶದಲ್ಲಿ ನಿಲ್ಲಿಸುವ ವಾಹನಗಳಿಗೆ ದಂಡ ವಿಧಿಸಲಾಗುತ್ತಿದ್ದು, ಪ್ರತಿ ದಿನ ಸುಮಾರು 50-70 ವಾಹನಗಳು ಟೋಯಿಂಗ್ ಮಾಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಇನ್ನುಳಿದ ಪಾಲಿಕೆಗಳ ಸರಹದ್ದಿನಲ್ಲಿ ಟೋಯಿಂಗ್ ಜಾರಿಗೊಳ್ಳಲಿದ್ದು, ಇದಕ್ಕೆ ಮತ್ತೆ ಮೂರು ವಾಹನಗಳು ಸೇರ್ಪಡೆಯಾಗಲಿವೆ ಎಂದು ಹೇಳಿದರು.

ರಾಜಧಾನಿಯಲ್ಲಿ 2022ರಲ್ಲಿ ಟೋಯಿಂಗ್ ವಾಹನಗಳ ಕಾರ್ಯಾಚರಣೆ ವಿರುದ್ಧ ಜನಾಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಸರ್ಕಾರ ಸ್ಥಗಿತಗೊಳಿಸಲಾಗಿತ್ತು. ಬಳಿಕ ಆ ವ್ಯವಸ್ಥೆಯನ್ನು ಪರಿಷ್ಕರಣೆಗೊಳಸಿ ಕಳೆದ ಏ.6 ರಿಂದ ಮತ್ತೆ ನಗರದಲ್ಲಿ ಟೋಯಿಂಗ್ ವಾಹನಗಳಿಗೆ ಸರ್ಕಾರ ಹಸಿರು ನಿಶಾನೆ ತೋರಿತ್ತು. ಆದರೆ ಈ ಬಾರಿ ಸರ್ಕಾರದ ಸೂಚನೆ ಮೇರೆಗೆ ಜಿಬಿಎ ಹಾಗೂ ಸಂಚಾರ ಪೊಲೀಸರ ಜಂಟಿಯಾಗಿ ಟೋಯಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.