ಸಾರಾಂಶ
ಸವಣೂರು ಪಟ್ಟಣದ ಕೋರಿಪೇಟೆಯ ಶ್ರೀ ಶಿರಹಟ್ಟಿ ಜಗದ್ಗುರು ಫಕ್ಕೀರಸ್ವಾಮಿಗಳವರ ಶಾಖಾ ಮಠದ ಆವರಣದಲ್ಲಿ ಶಾಸಕ ಯಾಸೀರ್ ಅಹ್ಮದಖಾನ ಪಠಾಣ ಅವರನ್ನು ಸನ್ಮಾನಿಸಲಾಯಿತು.
ಸವಣೂರು: ಒಬ್ಬ ಸಾಮಾನ್ಯ ವ್ಯಕ್ತಿ ಕ್ಷೇತ್ರದ ಶಾಸಕನಾಗಲು ಜನರ ಆಶೀರ್ವಾದದೊಂದಿಗೆ ದೇವರ ಆಶೀರ್ವಾದ ಇದ್ದರೆ ಮಾತ್ರ ಸಾಧ್ಯ. ಶರಣರು ನೆಲೆಸಿರುವ ಪುಣ್ಯಭೂಮಿಯಲ್ಲಿ ಈ ಕ್ಷೇತ್ರದ ಶಾಸಕನಾಗಿರುವುದು ನನ್ನ ಪೂರ್ವ ಜನ್ಮದ ಪುಣ್ಯದ ಫಲವಾಗಿದೆ ಎಂದು ಶಾಸಕ ಯಾಸೀರ್ ಅಹ್ಮದಖಾನ ಪಠಾಣ ಹೇಳಿದರು.
ಪಟ್ಟಣದ ಕೋರಿಪೇಟೆಯ ಶ್ರೀ ಶಿರಹಟ್ಟಿ ಜಗದ್ಗುರು ಫಕ್ಕೀರಸ್ವಾಮಿಗಳವರ ಶಾಖಾ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ, ಶ್ರೀಗಳಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರ ನೀಡಿದ ₹1 ಸಾವಿರ ಕೋಟಿ ಅನುದಾನದಲ್ಲಿ ₹50 ಕೋಟಿ ವೆಚ್ಚದಲ್ಲಿ ಕ್ಷೇತ್ರದಲ್ಲಿನ ದೇವಸ್ಥಾನಗಳ ಅಭಿವೃದ್ಧಿ ಮಾಡಲಾಗಿದೆ. ಪಟ್ಟಣ ಎಲ್ಲಮ್ಮ ದೇವಸ್ಥಾನಕ್ಕೆ ₹10 ಲಕ್ಷ, ಅಡವಿಸ್ವಾಮಿಮಠಕ್ಕೆ ₹50 ಲಕ್ಷ, ಕರಿಯಮ್ಮ ದೇವಸ್ಥಾನಕ್ಕೆ ₹15 ಲಕ್ಷ, ಉಡಚಮ್ಮ ದೇವಸ್ಥಾನಕ್ಕೆ ₹15 ಲಕ್ಷ, ಗ್ರಾಮದೇವಿ ಸಮುದಾಯ ಭವನಕ್ಕೆ ₹50 ಲಕ್ಷ, ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ₹50 ಲಕ್ಷ, ಕಲಾಲ ಸಮಾಜದ ಸಮುದಾಯ ಭವನಕ್ಕೆ ₹25 ಲಕ್ಷ, ಬಸವಣ್ಣ ದೇವರ ಸಮುದಾತ ಭವನಕ್ಕೆ ₹25 ಲಕ್ಷ, ಸಾಯಿಬಾಬಾ ದೇವಸ್ಥಾನದ ಭವನಕ್ಕೂ ₹50 ಲಕ್ಷ, ಜಮಲಮ್ಮ ದೇವಸ್ಥಾನ ಸಭಾಭವನಕ್ಕೆ ₹25 ಲಕ್ಷ, ವೀರಭದ್ರೇಶ್ವರ ಸಭಾಭವನಕ್ಕೆ ₹50 ಲಕ್ಷ, ಈರಣ್ಣ ದೇವರ ದೇವಸ್ಥಾನಕ್ಕೆ ₹25 ಲಕ್ಷ, ಖಂಡೋಬಾ ದೇವಸ್ಥಾನಕ್ಕೆ ₹50 ಲಕ್ಷ, ವೀರಶೈವ ಸಮಾಜದ ರುದ್ರಭೂಮಿ ಅಭಿವೃದ್ಧಿಗೆ ₹30 ಲಕ್ಷ, ದೊಡ್ಡಹುಣಸೆ ಕಲ್ಮಠಕ್ಕೆ ₹80 ಲಕ್ಷ ಅನುದಾನ ನೀಡಿದ್ದೇನೆ ಎಂದು ಹೇಳಿದರು.ಶಿರಹಟ್ಟಿ ಸಂಸ್ಥಾನಮಠದ ಶ್ರೀ ಜಗದ್ಗುರು ಫಕ್ಕೀರಸಿದ್ದರಾಮ ಸ್ವಾಮೀಜಿ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಶಾಸಕರನ್ನು ಸನ್ಮಾನಿಸಿದರು. ಶಿರಹಟ್ಟಿ ಸಂಸ್ಥಾನಮಠದ 13ನೇ ಜಗದ್ಗುರು ಶ್ರೀ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಫಕ್ಕೀರಸ್ವಾಮಿ ಮಠ ಭಾವೈಕ್ಯತೆ ಹಾಗೂ ವಿಶೇಷವಾಗಿ ಜಾತ್ಯತೀತ ಮಠವಾಗಿದೆ. ನಾಡಿನ ವೀರಶೈವ ಲಿಂಗಾಯತ ಮಠಗಳು ಜಾತ್ಯತೀತ ಮಠಗಳಾಗಿವೆ ಎಂದರು.
ದೊಡ್ಡ ಹುಣಸೆ ಕಲ್ಮಠದ ಚನ್ನಬಸವ ಸ್ವಾಮೀಜಿ, ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ತಹಸೀಲ್ದಾರ್ ರವಿಕುಮಾರ್ ಕೊರವರ, ಹಿರಿಯ ಪ್ರಮುಖರಾದ ರುದ್ರಪ್ಪ ಸೈಬಣ್ಣವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ಮುಲ್ಲಾ, ಗ್ಯಾರಂಟಿ ಜಿಲ್ಲಾ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ಕೆಡಿಪಿ ಸದಸ್ಯ ರವಿ ಕರಿಗಾರ, ಮುಖಂಡ ಮೌಲಾಸಾಬ್ ಹೊಂಬರಡಿ ಇದ್ದರು.