ಸಾರಾಂಶ
ಬೆಂಗಳೂರು : ರಾಜ್ಯದಲ್ಲಿ ಅನುದಾನ ಕೊರತೆ ಕುರಿತು ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ ಎಲ್ಲಾ ಕಾಂಗ್ರೆಸ್ ಶಾಸಕರಿಗೂ ತಲಾ 50 ಕೋಟಿ ರು. ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದು ಪತ್ರ ಬರೆದಿದ್ದಾರೆ.
2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾದ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿ ಕಾಂಗ್ರೆಸ್ ಶಾಸಕರ ವಿಧಾನಸಭಾ ಕ್ಷೇತ್ರಗಳಿಗೆ ತಲಾ 50 ಕೋಟಿ ರು.ಗಳ ವಿಶೇಷ ಅನುದಾನ ಹಂಚಿಕೆ ಮಾಡುವುದಾಗಿ ಹೇಳಿದ್ದಾರೆ.
ಜತೆಗೆ ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಗೂ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಪ್ರತಿಪಕ್ಷಗಳ ಶಾಸಕರ ಕ್ಷೇತ್ರಕ್ಕೆ ತಲಾ 25 ಕೋಟಿ ರು. ಅನುದಾನ ನೀಡುವುದಾಗಿ ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೆಯೇ ತಲಾ 50 ಕೋಟಿ ರು. ವಿಶೇಷ ಅನುದಾನ ನೀಡುವ ಕುರಿತು ಭರವಸೆ ನೀಡಿದ್ದರು. ಅನುದಾನ ಬಿಡುಗಡೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕರು ಬಹಿರಂಗವಾಗಿ ಅನುದಾನ ಕೊರತೆ ಬಗ್ಗೆ ಅಳಲು ತೋಡಿಕೊಂಡಿದ್ದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಭೆಯಲ್ಲೂ ಅನುದಾನ ಕೊರತೆ ಸಮಸ್ಯೆಯನ್ನೇ ಬಹುತೇಕ ಶಾಸಕರು ಪ್ರಸ್ತಾಪಿಸಿದ್ದರು.
ಇದರ ಬೆನ್ನಲ್ಲೇ ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರು. ಅನುದಾನ ಬಿಡುಗಡೆಗೆ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿದ್ದಾರೆ. ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಡಿಯ ಕಾಮಗಾರಿಗಳಿಗೆ 37.50 ಕೋಟಿ ರು. ಹಾಗೂ ಶಾಸಕರ ವಿವೇಚನಾಧಿಕಾರದ ಅಡಿ 12.50 ಕೋಟಿ ರು. ಬಳಕೆಗೆ ಅವಕಾಶ ನೀಡಿ ಅನುದಾನ ನೀಡುವುದಾಗಿ ಶಾಸಕರಿಗೆ ಖುದ್ದು ಪತ್ರ ಬರೆದಿದ್ದಾರೆ.
ಸಿಎಂ ಜಿಲ್ಲಾವಾರು ಸಭೆ:
ಅನುದಾನ ಬಿಡುಗಡೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರೊಂದಿಗೆ ಜಿಲ್ಲಾವಾರು ಸಭೆ ನಡೆಸಲಿದ್ದಾರೆ. ಜು.30 ಮತ್ತು 31ರಂದು ಸಭೆ ನಿಗದಿ ಮಾಡಿದ್ದು, ಈ ಸಭೆಗೆ ಶಾಸಕರು ಬೇಡಿಕೆ ಪತ್ರದೊಂದಿಗೆ ಕಾಮಗಾರಿ ವಿವರ ನೀಡುವಂತೆ ಮುಖ್ಯಮಂತ್ರಿಗಳು ಪತ್ರದಲ್ಲಿ ತಿಳಿಸಿದ್ದಾರೆ.
ಶಾಸಕರ ಆಪ್ತ ಸಹಾಯಕರಿಗೆ
ಸಿಎಲ್ಪಿ ಕಚೇರಿಯಿಂದಲೂ ಪತ್ರ
ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಿಂದಲೂ ಕಾಂಗ್ರೆಸ್ ಶಾಸಕರ ಆಪ್ತ ಸಹಾಯಕರಿಗೆ ಪತ್ರ ಬರೆದು, ಕ್ಷೇತ್ರದ ಅಭಿವೃದ್ಧಿಗೆ 50 ಕೋಟಿ ರು. ಅನುದಾನ ಮಂಜೂರು ಮಾಡಿರುವ ಬಗ್ಗೆ ತಿಳಿಸಲಾಗಿದೆ. ಮುಖ್ಯಮಂತ್ರಿಗಳು ಶಾಸಕರಿಗೆ ಬರೆದಿರುವ ಪತ್ರವನ್ನು ಶಾಸಕರ ಆಪ್ತ ಸಹಾಯಕರು ಕೂಡಲೇ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯ ಅವರ ಕಚೇರಿಯಲ್ಲಿ ವಿಶೇಷ ಕರ್ತವ್ಯಾಧಿಕಾರಿ ಆಗಿರುವ ಶಶಿಕುಮಾರ್ ಅವರನ್ನು ಸಂಪರ್ಕಿಸಿ ಪಡೆದುಕೊಳ್ಳುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಅಲ್ಲಂ ಪ್ರಭು ಪಾಟೀಲ್ ತಿಳಿಸಿದ್ದಾರೆ.
ಶಾಸಕರ ಜೊತೆ 30, 31ಕ್ಕೆ ಸಿಎಂ ಸಿದ್ದು ಮಹತ್ವದ ಸಭೆ
ಬೆಂಗಳೂರುರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸರಣಿ ಸಭೆ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು.30, 31ರಂದು ಅನುದಾನ ಬಿಡುಗಡೆ ಕುರಿತು ಚರ್ಚಿಸಲು ಶಾಸಕರ ಸಭೆ ಕರೆದಿದ್ದಾರೆ.
ಸಚಿವರ ಕಾರ್ಯವೈಖರಿ, ನಿರ್ಲಕ್ಷ್ಯ ಹಾಗೂ ಅನುದಾನ ಕೊರತೆ ಬಗ್ಗೆ ಕಾಂಗ್ರೆಸ್ ಶಾಸಕರು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಆರು ದಿನಗಳ ಕಾಲ ಪ್ರತಿಯೊಬ್ಬ ಶಾಸಕರೊಂದಿಗೂ ವೈಯಕ್ತಿಕವಾಗಿ ಚರ್ಚಿಸಿ ಮುಖ್ಯಮಂತ್ರಿಗಳಿಗೆ ವರದಿ ನೀಡಿದ್ದರು.ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಕಾಂಗ್ರೆಸ್ ಶಾಸಕರಿಗೂ ವೈಯಕ್ತಿಕವಾಗಿ ಪತ್ರ ಬರೆದಿದ್ದಾರೆ. ಪತ್ರದಲ್ಲಿ ನಿಮ್ಮ ಕ್ಷೇತ್ರಕ್ಕೆ 50 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗುವುದು. ಈ ಸಂಬಂಧ ವಿಧಾನಸೌಧದ ಸಮಿತಿ ಕೊಠಡಿ (ಕೊಠಡಿ ಸಂಖ್ಯೆ-313) ರಲ್ಲಿ ಜಿಲ್ಲಾವಾರು ವಿಧಾನಸಭಾ ಸದಸ್ಯರ ಸಭೆಯನ್ನು ಏರ್ಪಡಿಸಲಾಗಿದೆ. ಈ ಸಭೆಗೆ ಬೇಡಿಕೆ ಪತ್ರ ಹಾಗೂ ಕಾಮಗಾರಿಗಳ ವಿವರಗಳ ಜತೆ ಹಾಜರಾಗುವಂತೆ ಸೂಚಿಸಿದ್ದಾರೆ.