ಸಾರಾಂಶ
ಬಾಗಲಕೋಟೆ ಜಿಲ್ಲೆಯ ಇತಿಹಾಸದಲ್ಲಿಯೇ ತಾಲೂಕಿನ ನಾಗರಾಳ ಗ್ರಾಮಸ್ಥರು ಸರ್ಕಾರದ ಹಣಕಾಸಿನ ನೆರವು ಪಡೆಯದೇ ಸ್ವತಃ ದೇಣಿಗೆ ಸಂಗ್ರಹಿಸಿ ಭವ್ಯವಾದ ಸಮುದಾಯ ಭವನ ನಿರ್ಮಿಸಿ ಇತಿಹಾಸ ಬರೆದಿದ್ದಾರೆ.
ಆನಂದ ಜಡಿಮಠ
ಕನ್ನಡಪ್ರಭ ವಾರ್ತೆ ಬೀಳಗಿಬಾಗಲಕೋಟೆ ಜಿಲ್ಲೆಯ ಇತಿಹಾಸದಲ್ಲಿಯೇ ತಾಲೂಕಿನ ನಾಗರಾಳ ಗ್ರಾಮಸ್ಥರು ಸರ್ಕಾರದ ಹಣಕಾಸಿನ ನೆರವು ಪಡೆಯದೇ ಸ್ವತಃ ದೇಣಿಗೆ ಸಂಗ್ರಹಿಸಿ ಭವ್ಯವಾದ ಸಮುದಾಯ ಭವನ ನಿರ್ಮಿಸಿ ಇತಿಹಾಸ ಬರೆದಿದ್ದಾರೆ.
ಗ್ರಾಮ ಚಿಕ್ಕದಾದರೂ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಗ್ರಾಮದ ಕಪ್ಪರಪಡಿಯಮ್ಮದೇವಿ, ದಿಗಂಬರೇಶ್ವರ ದೇವಸ್ಥಾನ, ಭವ್ಯವಾದ ಮಠ ಹೀಗೆ ಹಲವಾರು ದೇವಸ್ಥಾನಗಳಿವೆ. ಈ ಗ್ರಾಮದವರು ವಿವಿಧ ಇಲಾಖೆಗಳಲ್ಲಿ ಸಿಪಾಯಿ ಹುದ್ದೆಯಿಂದ ಹಿಡಿದು ರಾಜ್ಯದ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುವ ನೌಕರಿದ್ದಾರೆ. ಆದರೂ ಹಿರಿಯರ ಮಾರ್ಗದರ್ಶನದಲ್ಲಿ ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಸದಾಕಾಲ ಹೊಸ ಪ್ರಯೋಗ ಮಾಡುವ ಈ ಗ್ರಾಮದ ಜನರು ಸರ್ಕಾರದ ಸಹಾಯಕ್ಕಾಗಿ ಕೈಚಾಚಿ ಕುಳಿತುಕೊಳ್ಳದೆ ಗ್ರಾಮದ ಭಕ್ತರಿಂದಲೇ ಸುಮಾರು ₹50 ಲಕ್ಷ ಹಣ ಸಂಗ್ರಹಿಸಿ ಸಾವಿರಾರು ಜನ ಕುಳಿತುಕೊಳ್ಳಬಹುದಾದ ಬೃಹತ್ ಕಪ್ಪರ ಪಡಿಯಮ್ಮ ದೇವಿ ಸಭಾಮಂದಿರ ನಿರ್ಮಾಣ ಮಾಡಿ ಹೊಸ ಮೈಲುಗಲ್ಲು ಸೃಷ್ಟಿಸಿದ್ದಾರೆ.2 ತಿಂಗಳಲ್ಲಿ ಸಭಾಭವನ ನಿರ್ಮಾಣ:
ನಾಗರಾಳ ಗ್ರಾಮದ ಭಕ್ತರು ಕೇವಲ ಎರಡು ತಿಂಗಳಲ್ಲಿ ಸಮುದಾಯ ಭವನ ನಿರ್ಮಿಸಿ ನವರಾತ್ರಿ ಉತ್ಸವ ಧಾರ್ಮಿಕ ಹಾಗೂ ಸಾಹಿತ್ಯಿಕ ,ಸಾಂಸ್ಕೃತಿಕ, ಸಮಾಜಮುಖಿ ಕಾರ್ಯಕ್ರಮಗಳಿಗೆ ಸುಸಜ್ಜಿತವಾದ ವೇದಿಕೆ ಸಿದ್ಧಪಡಿಸಿದ್ದಾರೆ. ಪ್ರತಿದಿನ ಗ್ರಾಮದ 40 ರಿಂದ 50 ಯುವಕರು, ಹಿರಿಯರು ಸೇರಿ ಬೆಳಗ್ಗೆ ಮಠಕ್ಕೆ ಆಗಮಿಸಿದರೆ, ಕೆಲಸ ಮುಗಿಸಿಕೊಂಡು ಸಂಜೆಯೇ ಮರಳಿ ಮನೆಗೆ ಹೋಗುತ್ತಾರೆ.ಕೆಲವರು ಕಟ್ಟಡ ಕಟ್ಟಿದರೆ ಕೆಲವರು ಕೈಯಲ್ಲಿ ಸಿಮೆಂಟ್, ಇಟ್ಟಿಗೆ ಕೊಡುವ ಕೆಲಸ, ಇನ್ನೂ ಕೆಲವರು ಕಟ್ಟಡಕ್ಕೆ ನೀರು ಹೊಡೆಯುವುದು ಹೀಗೆ ಅವರವರ ದೈಹಿಕ ಸಾಮಥ್ಯ ಮತ್ತು ಪರಿಣಿತಿ ಹೊಂದಿದ ಕುಲಕಸಬನ್ನು ಮಾಡಿ ನಿರಂತರವಾಗಿ 2 ತಿಂಗಳ ಪರ್ಯಂತರ ಕಾರ್ಯನಿರ್ವಹಿಸಿದ್ದಾರೆ. ಈ ಕೆಲಸಕ್ಕೆ ಭಕ್ತರು ಒಂದು ರೂಪಾಯಿ ಸಂಬಳ ಪಡೆಯದೆ ಉಚಿತವಾಗಿ ಭಕ್ತಿಯ ಸೇವೆ ಸಮರ್ಪಿಸಿರುವುದು ಅಭಿನಂದನಾರ್ಹ ಕಾರ್ಯವಾಗಿದೆ.
ಸಭಾಭವನ ಉದ್ಘಾಟನೆ ಇಂದು: ಸೆ.22ರಂದು ಬೆಳಗ್ಗೆ 7ಕ್ಕೆ ಹೋಮ ಹವನ ಪೂಜಾ ಕಾರ್ಯಕ್ರಮ, 8 ಗಂಟೆಗೆ ನಾಡದೇವಿ ಮೂರ್ತಿ ಭವ್ಯ ಮೆರವಣಿಗೆ. 501 ಮಹಿಳೆಯರಿಂದ ಕುಂಭಮೇಳ. ನಾವಲಗಿಯ ಪ್ರಸಿದ್ಧ ಸಂಬಳ ವಾದನ ನಾಡಿನ, ಪ್ರಸಿದ್ಧ ಕಲಾವಿದರಿಂದ ಭವ್ಯ ಮೆರವಣಿಗೆ, 11ಕ್ಕೆ 1001 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ. ನಾಡಿನ ಶ್ರೀಗಳ ಅಮೃತ ಹಸ್ತದಿಂದ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ನಂತರ ಗೌರವ ಸಮರ್ಪಣೆ 10,000 ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಇಂಗಳೇಶ್ವರ ವಚನ ಶಿಲಾಮಂಟಪದ ಚನ್ನಬಸವ ಸ್ವಾಮೀಜಿ, ಜಮಖಂಡಿ ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೀಳಗಿ ಸೋಮಪ್ಪಯ್ಯನ ಮಠದ ಚನ್ನಬಸವ ಸ್ವಾಮೀಜಿ, ಬನಹಟ್ಟಿ ಹಿರೇಮಠ ಶರಣಬಸವ ಶಿವಾಚಾರ್ಯ ಸ್ವಾಮೀಜಿ, ಕೊಣ್ಣೂರು ಹೊರಗಿನ ಮಠದ ವಿಶ್ವಪ್ರಭು ಶಿವಾಚಾರ್ಯ ಸ್ವಾಮೀಜಿ, ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ, ಕುಂದರಗಿ ಚರಂತಿಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಾಗರಾಳ ದಿಗಂಬರೇಶ್ವರ ಮಠದ ಶೇಷಪ್ಪಯ್ಯ ಗುರುನಿಂಗಪ್ಪಯ್ಯ ಸ್ವಾಮೀಜಿ ಹಾಗೂ ನಿಂಗಪ್ಪಯ್ಯ ಗುರುಶೇಷಪ್ಪಯ್ಯ ಸ್ವಾಮೀಜಿ ನೇತೃತ್ವ ವಹಿಸುವರು, ಮಂಟೂರ ಬೃಹನ್ಮಠದ ಸದಾನಂದ ಸ್ವಾಮೀಜಿ, ಬಾಗಲಕೋಟೆ ದಿಗಂಬರೇಶ್ವರ ಮಠದ ಬಸವರಾಜ ಸ್ವಾಮೀಜಿ, ಸುನಗ ಅನ್ನಪೂರ್ಣೇಶ್ವರಿ ಬೃಹನ್ಮಠದ ಶಿವಾನಂದ ಸ್ವಾಮೀಜಿ, ಬೀಳಗಿ ಹುಚ್ಚಪ್ಪಯ್ಯನ ಮಠದ ಫಕೀರಯ್ಯ ಸ್ವಾಮೀಜಿ, ಸಿದ್ದಾಪೂರ ಮಾನಪ್ಪಯ್ಯ ಹುಚ್ಚಪ್ಪಯ್ಯ ಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ.