ಬ್ಯಾಡಗಿ: ಸಿದ್ಧರಾಮೇಶ್ವರ ಜಯಂತ್ಯುತ್ಸವಕ್ಕೆ ಸರ್ಕಾರದಿಂದ ₹50 ಲಕ್ಷ ಅನುದಾನ

| Published : Jan 10 2024, 01:45 AM IST / Updated: Jan 10 2024, 02:52 PM IST

ಬ್ಯಾಡಗಿ: ಸಿದ್ಧರಾಮೇಶ್ವರ ಜಯಂತ್ಯುತ್ಸವಕ್ಕೆ ಸರ್ಕಾರದಿಂದ ₹50 ಲಕ್ಷ ಅನುದಾನ
Share this Article
  • FB
  • TW
  • Linkdin
  • Email

ಸಾರಾಂಶ

ಕಾಯಕಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತ್ಯುತ್ಸವಕ್ಕೆ ಸರ್ಕಾರದ ಪರವಾಗಿ ₹50 ಲಕ್ಷ ಅನುದಾನ ಬಿಡುಗಡೆ ಮಾಡಿಸಿಕೊಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಕಾಯಕಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತ್ಯುತ್ಸವಕ್ಕೆ ಸರ್ಕಾರದ ಪರವಾಗಿ ₹50 ಲಕ್ಷ ಅನುದಾನ ಬಿಡುಗಡೆ ಮಾಡಿಸಿಕೊಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.

ಜ.14 ಮತ್ತು 15 ರಂದು ಎರಡು ದಿನಗಳ ಕಾಲ ತಾಲೂಕಿನ ಚಿಕ್ಕಬಾಸೂರಿನಲ್ಲಿ ನಡೆಯಲಿರುವ 851ನೇ ಸಿದ್ಧರಾಮೇಶ್ವರ ಜಯಂತ್ಯುತ್ಸವ ಮತ್ತು ರಾಜ್ಯಮಟ್ಟದ ನೊಳಂಬ ಲಿಂಗಾಯತ ಸಮಾವೇಶ ಹಿನ್ನೆಲೆ ಗ್ರಾಮದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ದಾರ್ಶನಿಕರು, ಸಮಾಜ ಸುಧಾರಕರು ಹಾಗೂ ಸಮಾಜಮುಖಿ ಕೆಲಸ ಮಾಡಿದವರನ್ನು ನೆನೆಸಿಕೊಳ್ಳುವುದೇ ಪುಣ್ಯದ ಕೆಲಸ ಹೀಗಾಗಿ 800 ವರ್ಷಗಳ ಹಿಂದೆಯೇ ಸಿದ್ಧರಾಮೇಶ್ವರರು ಕೆರೆಕಟ್ಟೆಗಳನ್ನು ನಿರ್ಮಿಸುವ ಮೂಲಕ ತಲೆ ತಲಾಂತರಗಳಿಂದ ಜನರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ ಎಂದರು.

ಶ್ರೀಗಳ ಹೆಸರಿನಲ್ಲಿ ಯೋಜನೆ:

ಯಾವುದೇ ಸರ್ಕಾರಗಳು ಮಾಡದೇ ಇರುವಂತಹ ಶಾಶ್ವತ ಕೆಲಸವನ್ನು ಸಿದ್ಧರಾಮೇಶ್ವರರು ಅಂದಿನ ಕಾಲದಲ್ಲಿಯೇ ಮಾಡಿ ತೋರಿಸಿದ್ದಾರೆ. ಹೀಗಿರುವಾಗ ರಾಜ್ಯದೆಲ್ಲೆಡೆ ಕೆರೆಕಟ್ಟೆಗಳನ್ನು ನಿರ್ಮಿಸುವ ಮೂಲಕ ಶ್ರೀಗಳ ಹೆಸರಿನಲ್ಲೇ ರಾಜ್ಯದಲ್ಲಿ ಬೃಹತ್ ಯೋಜನೆಯೊಂದನ್ನು ಘೋಷಿಸುವ ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆದಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ ಕೊಡಿಸುವುದಾಗಿ ತಿಳಿಸಿದರು.

ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ. ಸಮಾವೇಶಕ್ಕೆ ಆಗಮಿಸಿದ ಎಲ್ಲರಿಗೂ ಊಟ, ವಸತಿ ಸೇರಿದಂತೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಸಮಾವೇಶ ಅದ್ಧೂರಿಯಾಗಿ ನಡೆಯುವಂತೆ ನೋಡಿಕೊಳ್ಳಲಾಗುವುದು.

 ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಹೆಚ್ಚಿನ ಪ್ರಮಾಣದ ಬಸ್ ಸೌಕರ್ಯ, ನಿರಂತರ ವಿದ್ಯುತ್, ಕುಡಿಯುವ ನೀರಿನ ಸೌಲಭ್ಯ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ದಿನದ 24 ಗಂಟೆ ಕಾಲ ವೈದ್ಯಕೀಯ ಸೇವೆ ನಡೆಯುವಂತೆ ನೋಡಿಕೊಳ್ಳಲಾಗುವುದು ಎಂದರು.

ಶಾಸಕ ಬಸವರಾಜ ಶಿವಣ್ಣವನರ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರ ಪ್ರಯತ್ನದಿಂದ ಮುಖ್ಯಮಂತ್ರಿ 3ನೇ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ಬಂದಿದೆ. 

ನೊಳಂಬ ಸಮಾಜವು ಇಲ್ಲಿಯೂ ಗಟ್ಟಿಯಾಗಿದೆ ಎಂಬುದನ್ನು ಸಮಾವೇಶದಲ್ಲಿ ಜನರನ್ನು ಸೇರಿಸುವ ಮೂಲಕ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.

ನೊಳಂಬ ಲಿಂಗಾಯತ ರಾಜ್ಯ ಸಮಿತಿ ಅಧ್ಯಕ್ಷ ಎಸ್‌.ಆರ್. ಪಾಟೀಲ ಮಾತನಾಡಿ, ಈ ಹಿಂದೆ ಅರಸೀಕೆರೆಯಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿಯ ₹ 25 ಲಕ್ಷ ಇಂದಿಗೂ ಬಿಡುಗಡೆಯಾಗಿಲ್ಲ, ಕೂಡಲೇ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಮುಖ್ಯಮಂತ್ರಿಗಳಿಂದ ಸದರಿ ಹಣವನ್ನೂ ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು.

ಈ ವೇಳೆ ಪುಷ್ಪಗಿರಿಮಠದ ಸೋಮೇಶ್ವರ ಶ್ರೀ, ನಂದಿಗುಡಿಮಠದ ಸಿದ್ದರಾಮೇಶ್ವರ ಶ್ರೀ, ಸೋಮಶೇಖರ ಕಣಗಿಲಭಾವಿ, ಜಿಲ್ಲಾಧಿಕಾರಿ ರಘುನಂದನಮೂರ್ತಿ, ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ ಶ್ರೀಧರ, ಅಡಿಶನಲ್ ಎಸ್ಪಿ ಕೆ. ಗೋಪಾಲ್ ತಹಸೀಲ್ದಾರ ಫೀರೋಜ್‌ಶಾ ಸೋಮನಕಟ್ಟಿ, ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ, ಜಗದೀಶ ಕಣಗಿಲಭಾವಿ, ವೀರಭದ್ರಪ್ಪ ಗೊಡಚಿ, ದಾನಪ್ಪಚೂರಿ, ಪ್ರಭುಲಿಂಗ ದೊಡ್ಡಮನಿ, ಮಹೇಶಗೌಡ ಪಾಟೀಲ, ಸುರೇಶ ಮೆಣಸಿನಹಾಳ, ಬೀರಪ್ಪ ಬಣಕಾರ, ರುದ್ರಪ್ಪ ಹೊಂಕಣದ, ರುದ್ರಗೌಡ್ರ ಕಾಡನಗೌಡ್ರ, ಲಿಂಗರಾಜ ಕುಮ್ಮೂರು, ಪ್ರಭುಗೌಡ್ರ ಪಾಟೀಲ, ಸುರೇಶಗೌಡ ಪಾಟೀಲ(ದಿಡಗೂರ), ಪ್ರಭುಲಿಂಗಪ್ಪ ದೊಡ್ಮನಿ ಇತರರಿದ್ದರು.