50ಪ್ಲಸ್‌ ವಯೋಮಾನದ ಪುರುಷರ ಫುಟ್ಬಾಲ್‌: ಟೀಂ ಶಿವಾಜಿ ತಂಡಕ್ಕೆ ಪ್ರಶಸ್ತಿ

| Published : Dec 04 2024, 12:30 AM IST

50ಪ್ಲಸ್‌ ವಯೋಮಾನದ ಪುರುಷರ ಫುಟ್ಬಾಲ್‌: ಟೀಂ ಶಿವಾಜಿ ತಂಡಕ್ಕೆ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗುಮಾಸ್ಟರ್ಸ್‌ ಫುಟ್ಬಾಲ್ ಕಪ್ 2024 ವತಿಯಿಂದ ನಗರದ ತಾಲೂಕು ಮೈದಾನದಲ್ಲಿ ಹೊನಲುಬೆಳಕಿನ 50ಪ್ಲಸ್‌ ಪುರುಷರ 5 2 ಫುಟ್ಬಾಲ್ ಪಂದ್ಯಾಟ ನಡೆಯಿತು. ಟಾಸ್ ಮೂಲಕ ಟೀಮ್ ಶಿವಾಜಿ ತಂಡ ಚಾಂಪಿಯನ್ ಅಗಿಹೊರಹೊಮ್ಮಿತು. ವಿರಾಜಪೇಟೆನಗರ ಮತ್ತು 6 ಕಿ.ಮೀ. ಸರಹದ್ದಿನಲಿರುವ 1970, 80, 90ರ ದಶಕದಲ್ಲಿ ಫುಟ್ಬಾಲ್ ಆಟದ ಮೂಲಕ ಚಿರಪರಿಚಿತ ಕ್ರೀಡಾಕಲಿಗಳಿಗಾಗಿ ಪಂದ್ಯಾಟ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ವಿರಾಜಪೇಟೆ ನಗರ ಪ್ರಥಮ ಬಾರಿಗೆ ವಿನೂತನ ಫುಟ್ಬಾಲ್ ಪಂದ್ಯಕ್ಕೆ ಸಾಕ್ಷಿಯಾಯಿತು. 1970, 80, 90 ರ ದಶಕದಲ್ಲಿ ಫುಟ್ಬಾಲ್ ಕ್ಲಬ್‌ಗಳಲ್ಲಿ ಪ್ರತಿನಿಧಿಸಿ ಜಿಲ್ಲೆ, ರಾಜ್ಯಮಟ್ಟದಲ್ಲಿ ಹೆಸರುವಾಸಿಗಳಾಗಿದ್ದ ಕ್ರೀಡಾಕಲಿಗಳು ಮತ್ತೊಮ್ಮೆ ಮೈದಾನದಲ್ಲಿ ವಿಜೃಂಭಿಸಿದರು.

ಕೊಡಗುಮಾಸ್ಟರ್ಸ್‌ ಫುಟ್ಬಾಲ್ ಕಪ್ 2024 ವತಿಯಿಂದ ನಗರದ ತಾಲೂಕು ಮೈದಾನದಲ್ಲಿ ಹೊನಲುಬೆಳಕಿನ 50ಪ್ಲಸ್‌ ಪುರುಷರ 5+2 ಫುಟ್ಬಾಲ್ ಪಂದ್ಯಾಟ ನಡೆಯಿತು. ಟಾಸ್ ಮೂಲಕ ಟೀಮ್ ಶಿವಾಜಿ ತಂಡ ಚಾಂಪಿಯನ್ ಅಗಿಹೊರಹೊಮ್ಮಿತು.

ವಿರಾಜಪೇಟೆನಗರ ಮತ್ತು 6 ಕಿ.ಮೀ. ಸರಹದ್ದಿನಲಿರುವ 1970, 80, 90ರ ದಶಕದಲ್ಲಿ ಫುಟ್ಬಾಲ್ ಆಟದ ಮೂಲಕ ಚಿರಪರಿಚಿತ ಕ್ರೀಡಾಕಲಿಗಳಿಗಾಗಿ ಪಂದ್ಯಾಟ ಆಯೋಜಿಸಲಾಗಿತ್ತು.

ಪುರಸಭೆ ಉಪಾಧ್ಯಕ್ಷ ಫಸೀಯ ತಬುಸ್ಸಂ ಚೆಂಡನ್ನು ಒದ್ದು ಪಂದ್ಯಾಟಕ್ಕೆ ಚಾಲನೆ ನೀಡಿದರು.

ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಮಾತನಾಡಿ, ಕ್ರೀಡಾಮನೋಭಾವದೊಂದಿಗೆ 50 ವಯಸ್ಕರನ್ನೊಳಗೊಂಡು ಮಾನಸಿಕವಾಗಿ ಸದೃಢಗೊಂಡು ಕ್ರೀಡೆಯಲ್ಲಿ ಭಾಗಿಸುವುದೇ ಧೃಡಕಾಯ ಮನಸ್ಸು ಎಂದರು.

ಪುರಸಭೆ ಸದಸ್ಯರಾದ ಎಸ್.ಎಚ್. ಮತೀನ್, ಮೊಹಮ್ಮದ್ ರಾಫಿ, ರಾಜೇಶ್ ಪದ್ಮನಾಭ ಮತ್ತಿತರರು ಮಾತನಾಡಿದರು.

ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಹಾಕಿ ಮತ್ತು ಫುಟ್ಬಾಲ್ ದಂತಕತೆ ಡಾ. ಎಂ.ಸಿ. ಕಾರ್ಯಪ್ಪ, 80ರ ದಶಕದ ಕ್ರೀಡಾಪಟುಗಳನ್ನು ಮತ್ತೊಮ್ಮೆ ಪರಿಚಯಿಸಿರುವುದು ಅತಿ ಸಂತೋಷ ತಂದಿದೆ. ಹಾಲೇಂಡ್ ದೇಶದಲ್ಲಿ ಇಂದಿಗೂ 50+, 60+, 70+ ಎಂದು ವಿವಿಧ ವರ್ಗಗಳನ್ನಾಗಿಸಿ ಪಂದ್ಯಾಟ ಆಯೋಜಿಸಲಾಗುತ್ತಿದೆ ಎಂದರು.

ಕ್ರೀಡಾ ವೀಕ್ಷಕ ವಿವರಣೆಗಾರ ಚೆಪ್ಪುಡೀರ ಕಾರ್ಯಪ್ಪ ಮಾತನಾಡಿ, ಕ್ರೀಡಾಳುಗಳ ದೇಹಕ್ಕೆ ಮುಪ್ಪಾದರೂ, ಕ್ರೀಡೆಯ ಮೇಲೀರುವ ಅಭಿಮಾನದಿಂದ ಕ್ರೀಡೆಯಲ್ಲಿ ಭಾಗವಹಿಸಿರುವುದು ಕ್ರೀಡೆಗೆ ನೀಡುವ ಗೌರವ ಎಂದರು.

ಅಂತಾರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಮಾತನಾಡಿದರು.

ಆರಂಭದಲ್ಲಿ ಅಗಲಿದ ಫುಟ್ಬಾಲ್‌ ಕ್ರೀಡಾಪಟುಗಳ ಗೌರವಾರ್ಥ ಮೌನಾಚರಣೆ ನಡೆಯಿತು.

ಫುಟ್ಬಾಲ್ ಮತ್ತು ಹಾಕಿ ಕ್ರೀಡೆಯಲ್ಲಿ ಅನನ್ಯ ಕೊಡುಗೆ ನೀಡಿದ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್‌ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ನಗರದ ಹೆಸರಾಂತ ವೈದ್ಯ ಎನ್.ಸಿ ಕಾರ್ಯಪ್ಪ ಅವರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಕೊಡಗು ಮಾಸ್ಟರ್‌ ಫುಟ್ಬಾಲ್‌ ಆಯೋಜಕ ಸಂಸ್ಥೆ ಅಧ್ಯಕ್ಷ ಎಲ್.ಜಿ. ಬಾಸ್ಕರ್ ಅಧ್ಯಕ್ಷತೆ ವಹಿಸಿದ್ದರು.

ವಿರಾಜಪೇಟೆ ವೃತ್ತನೀರಿಕ್ಷಕ ಅನೂಪ್ ಮಾದಪ್ಪ, ಉದ್ಯಮಿ ಬಿ.ವಿ. ಹೇಮಂತ್, ಕ್ರೀಡಾಪಟು ನೆಲ್ಲಮಕ್ಕಡ ಸಚಿನ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ. ಗಣೇಶ್, ಉದ್ಯಮಿ ಬಿ.ಸಿ. ಶಖೀಲ್, ವಕೀಲ ಶ್ರೀನಿವಾಸ್ ಪ್ರಸಾದ್, ಟಿ.ಕೆ. ಕೃಷ್ಣ ಶೆಟ್ಟಿ ಇದ್ದರು.

ಫಲಿತಾಂಶ:

ಪಂದ್ಯಾಟದಲ್ಲಿ 8 ತಂಡಗಳು ಭಾಗಿಗಳಾಗಿದ್ದವು. 56 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. 70 ರ ದಶಕದಲ್ಲಿ ನಗರದಲ್ಲಿ ನೆಲೆಸಿ ಹಾಲಿ ಕೇರಳದ ವಡಗರ ಜಿಲ್ಲೆಯಲ್ಲಿ ನೆಲೆಸಿರುವ ಸತ್ಯನ್ (74) ಬ್ಲೂಸ್ಟಾರ್ ತಂಡದಲ್ಲಿ ಆಟವಾಡಿ ಕ್ರೀಡಾಪ್ರೇಮಿಗಳ ಮನರಂಜಿಸಿದರು.

ಪ್ರಥಮ ಪಂದ್ಯಾಟ ಸೆಮಿಫೈನಲ್ಸ್ ಬ್ಲಾಕ್ ಆಂಡ್ ವೈಟ್ ಮತ್ತು ಸ್ನೇಹಿತರ ಬಳಗ ತಂಡದ ಮಧ್ಯೆ ನಡೆದು 2-0 ಗೋಲುಗಳಿಂದ ಸ್ನೇಹಿತರ ಬಳಗ ತಂಡ ಫೈನಲ್ ಪ್ರವೇಶ ಮಾಡಿತು. ದ್ವಿತೀಯ ಸೆಮಿ ಫೈನಲ್ಸ್‌ ಪಂದ್ಯಾಟ ಟೀಮ್ ಶಿವಾಜಿ ಎಫ್.ಸಿ ತಂಡ ಮತ್ತು ಜಾಗ್ವಾರ್ ಎಫ್.ಸಿ ತಂಡಗಳ ಮಧ್ಯೆ ನಡೆಯಿತು.

ಪ್ರಥಮಾರ್ಧ ಮತ್ತು ದ್ವಿತೀಯಾರ್ಧದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಎರಡು ಬಾರಿ ಪೆನಾಲ್ಟಿ ಶೂಟೌಟ್‌ ನೀಡಲಾಯಿತು. ಆದರೂ ಗೋಲು ದಾಖಲಾಗಲಿಲ್ಲ.

ಕೊನೆ ಹಂತವಾಗಿ ತೀರ್ಪುಗಾರರು ಮತ್ತು ಅಯೋಜಕರ ಮನವಿ ಮೇರೆಗೆ ಟಾಸ್ ಹಾಕಲಾಯಿತು. ನಾಣ್ಯ ಚಿಮ್ಮುವಿಕೆಯಲ್ಲಿ ಶಿವಾಜಿ ತಂಡ ವಿಜಯಿಯಾಗಿ ಫೈನಲ್ ಪ್ರವೇಶ ಮಾಡಿತು.

ಫೈನಲ್ ಪಂದ್ಯಾಟವು ಟೀಮ್ ಶಿವಾಜಿ ಮತ್ತು ಸ್ನೇಹಿತರ ಬಳಗ ತಂಡಗಳ ಮಧ್ಯೆ ನಡೆಯಿತು. ಉಭಯ ತಂಡಗಳು ಸಮಬಲ ಸಾಧಿಸಿದವು. ಪೆನಾಲ್ಟಿ ಶೂಟೌಟ್‌ನಲ್ಲೂ ಗೋಲು ದಾಖಲಾಗಲಿಲ್ಲ. ಕೊನೆಯಲ್ಲಿ ಆಯೋಜಕರು ನಾಣ್ಯ ಚಿಮ್ಮುಸುವಿಕೆ ಅಂಗೀಕರಿಸಿ, ಟೀಮ್ ಶಿವಾಜಿ ತಂಡವು ವಿಜಯಿಯಾಯಿತು.

ಸ್ನೇಹಿತರ ಬಳಗ ದ್ವಿತೀಯ, ಉತ್ತಮ ಪ್ರದರ್ಶನ ನೀಡಿದ ಬ್ಲಾಕ್ ಅಂಡ್ ವೈಟ್ ತಂಡ ತೃತೀಯ ಸ್ಥಾನ ಪಡೆದುಕೊಂಡಿತ್ತು.

ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ನೀಡಿ ಗೌರವಿಸಲಾಯಿತು. ಅತಿ ಹೆಚ್ಚುಗೋಲು ದಾಖಲಿಸಿದ ಪ್ರಶಸ್ತಿಯನ್ನು ಮರ್ವೀನ್ ಲೋಬೊ, ಉತ್ತಮ ಗೋಲಿ ಪ್ರಶಸ್ತಿಯನ್ನು ಲವೀನ್ ಉತ್ತಪ್ಪ, ಸ್ನೇಹಿತರ ಬಳಗ ತಂಡದ ಜಾನ್ಸನ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.