ಸಾರಾಂಶ
ಬೆಂಗಳೂರು : ‘ರಾಜ್ಯದಲ್ಲಿನ ಒಟ್ಟು ಡೆಂಘೀ ಪ್ರಕರಣದಲ್ಲಿ ಬೆಂಗಳೂರು ನಗರದಲ್ಲೇ ಶೇ.50 ರಷ್ಟು ಪ್ರಕರಣ ಇವೆ. ಹೀಗಾಗಿ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸಬೇಕು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರು ಯಲಹಂಕದಲ್ಲಿನ ಡೆಂಘೀ ಹಾಟ್‌ಸ್ಪಾಟ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಈಡಿಸ್ ಸೊಳ್ಳೆಯ ಲಾರ್ವಾ ನಾಶಪಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಬಳಿಕ ಮಾತನಾಡಿದ ಅವರು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಡೆಂಘೀ ಪ್ರಕರಣಗಳು ಇಳಿಮುಖ ಆಗಿವೆ. ರಾಜ್ಯದ ಒಟ್ಟಾರೆ ಪ್ರಕರಣದಲ್ಲಿ ಶೇ.50 ರಷ್ಟು ಪ್ರಕರಣ ಬೆಂಗಳೂರಿನಲ್ಲೇ ಇವೆ. ಹೀಗಾಗಿ ಅಧಿಕಾರಿಗಳು ಎಚ್ಚರವಹಿಸಿ ಡೆಂಘೀ ಹತೋಟಿಗೆ ತರಬೇಕು ಎಂದು ಸಲಹೆ ನೀಡಿದರು.14 ದಿನ ನಿಗಾ ವಹಿಸಿ:
ಡೆಂಘೀ ತುತ್ತಾದ ಪ್ರತಿಯೊಬ್ಬರ ಮೇಲೆ 14 ದಿನಗಳವರೆಗೆ ನಿಗಾ ವಹಿಸಬೇಕು. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು. ಇನ್ನು ಡೆಂಘೀ ನಿಯಂತ್ರಣಕ್ಕಾಗಿ ಇಲಾಖೆ ಸತತ ಪ್ರಯತ್ನ ಮುಂದುವರಿಸಿದೆ. ಮುಂದಿನ ತಿಂಗಳಿನಿಂದ ಡೆಂಗ್ಯೂ ಪ್ರಕರಣಗಳಲ್ಲಿ ಇಳಮುಖ ಕಾಣುವ ನಿರೀಕ್ಷೆ ಹೊಂದಿದ್ದೇವೆ ಎಂದು ಹೇಳಿದರು.
ಎರಡಕ್ಕಿಂತ ಹೆಚ್ಚು ಡೆಂಘೀ ವರದಿಯಾದ ಸ್ಥಳವನ್ನು ಡೆಂಘೀ ಹಾಟ್‌ಸ್ಪಾಟ್ ಎಂದು ಗುರುತಿಸಲಾಗುತ್ತಿದೆ. 10 ಜಿಲ್ಲೆಗಳ ಡೆಂಘೀ ಹಾಟ್‌ಸ್ಪಾಟ್‌ಗಳಿಗೆ ಉಪನಿರ್ದೇಶಕರ ಮಟ್ಟದ ಅಧಿಕಾರಿಗಳನ್ನು ಪರಿಶೀಲನೆಗೆ ಕಳುಹಿಸುತ್ತಿದ್ದೇವೆ. ಸೋಮವಾರ ಹಾಗೂ ಮಂಗಳವಾರ ಅಧಿಕಾರಿಗಳು ಹಾಟ್ ಸ್ಪಾಟ್‌ಗಳಿಗೆ ಭೇಟಿ ನೀಡಿ ಡೆಂಘೀ ನಿಯಂತ್ರಣ ಕ್ರಮಗಳ ಅನುಷ್ಠಾನ ಆಗಿರುವ ಬಗ್ಗೆ ವಿಶೇಷ ಗಮನ ಹರಿಸಲಿದ್ದಾರೆ ಎಂದರು.
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್ ಹಾಜರಿದ್ದರು.