ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಹಸುಗಳ ಬೆಲೆ ಏರಿಕೆ ಸೇರಿದಂತೆ ಹಾಲು ಉತ್ಪಾದನಾ ವೆಚ್ಚ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಡಾ.ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಪ್ರತಿ ಲೀಟರ್ ಹಾಲಿಗೆ ೫೦ ರು. ದರ ನಿಗದಿಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ಹಾಲು ಉತ್ಪಾದಕರ ರೈತರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದ ಕಾರ್ಯಕರ್ತರು, ಹಾಲು ಉತ್ಪಾದಕರಿಗೆ ಬಾಕಿ ಇರುವ ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. ೫ ರು.ಪ್ರೋತ್ಸಾಹ ಧನವನ್ನು ೧೦ ರು.ಗೆ ಏರಿಕೆ ಮಾಡಬೇಕು. ಹಾಲು ಉತ್ಪಾದಕರ ಮಕ್ಕಳಿಗೆ ಜಿಲ್ಲೆಗೊಂದು ವಿದ್ಯಾರ್ಥಿಗಳ ವಸತಿ ನಿಲಯ ಪ್ರಾರಂಭಿಸಬೇಕೆಂಬುದೂ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು.
ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‌ರಾಜ್, ಕೆಎಂಎಫ್‌ನಡಿ ೧೫ ಹಾಲು ಒಕ್ಕೂಟಗಳಿದ್ದು, ೧೪,೯೦೦ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರಿ ಸಂಘಗಳಿವೆ. ಇವುಗಳ ಮೂಲಕ ನಿತ್ಯ ೨೨.೫ ಲಕ್ಷ ಸದಸ್ಯರಿಂದ ೧ ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಮಹಿಳೆಯರ ಶ್ರಮವೇ ಪ್ರಧಾನವಾಗಿರುವ ಈ ಹೈನುಗಾರಿಕೆಯಲ್ಲಿ ಅನೇಕ ಬಿಕ್ಕಟ್ಟುಗಳು ಎದುರಾಗಿವೆ.ಲೀಟರ್ ಹಾಲಿನ ಉತ್ಪಾದನಾ ವೆಚ್ಚ ೪೫ ರು.ಗಳಾಗಿದ್ದು,. ಕೆಎಂಎಫ್ ನೀಡುತ್ತಿರುವ ಪ್ರೋತ್ಸಾಹ ಧನ ಸೇರಿದರೆ ೩೭ ರು. ಹಣವನ್ನು ಉತ್ಪಾದಕರಿಗೆ ಪಾವತಿಸಲಾಗುತ್ತಿದೆ. ಇದರಲ್ಲಿ ಪ್ರತೀ ಲೀಟರ್ ಮೇಲೆ ೬ ರಿಂದ ೭ ರು. ನಷ್ಟವಾಗುತ್ತಿದೆ. ಹೀಗಿದ್ದರೂ ಕೂಡ ಸರ್ಕಾರ ಪ್ರೋತ್ಸಾಹ ಧನವನ್ನು ಏಳೆಂಟು ತಿಂಗಳುಗಳಿಂದ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿದರು.
ತೀವ್ರ ಬರಗಾಲದ ನಡುವೆಯೂ ಸಂಕಷ್ಟದಲ್ಲಿ ಸಿಲುಕಿರುವ ಹಾಲು ಉತ್ಪಾದಕರಿಗೆ ಕೂಡಲೇ ಬೇಡಿಕೆಗಳನ್ನು ಈಡೇರಿಸಿ ನೆರವಿಗೆ ಬರಬೇಕು ಎಂದು ಒತ್ತಾಯಿಸಿದ ಅವರು, ಆನ್‌ಲೈನ್ ಮೂಲಕ ಫ್ಯಾಟ್ ಮತ್ತು ಎಸ್‌ಎನ್‌ಎಫ್ ಚೆಕ್ ಮಾಡಿ ಖರೀದಿಸಿದ ಹಾಲಿಗೆ ದರ ಮತ್ತು ಪ್ರೋತ್ಸಾಹ ಧನ ನೀಡುವ ಕ್ರಮದ ಬಗ್ಗೆ ರೈತರಿಗೆ ಮನವರಿಕೆ ಮಾಡಿ ನಂತರ ಅಂತಿಮಗೊಳಿಸಬೇಕು. ಅಲ್ಲದೇ, ಮನ್‌ಮುಲ್‌ನಲ್ಲಿ ನೇಮಕಾತಿ, ಟೆಂಡರ್‌ಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಸಂಘಟನೆಯ ಪದಾಧಿಕಾರಿಗಳಾದ ಎನ್.ಲಿಂಗರಾಜಮೂರ್ತಿ, ಟಿ.ಆರ್.ಸಿದ್ದೇಗೌಡ, ಎಸ್.ವಿಶ್ವನಾಥ್, ನಾಗಮ್ಮ, ಮಹದೇವು, ಸತೀಶ್, ಗುರುಸ್ವಾಮಿ, ಮರಿಲಿಂಗೇಗೌಡ, ಎ.ಎಲ್.ಶಿವಕುಮಾರ್, ಸಿದ್ದರಾಜು, ಇತರರಿದ್ದರು.
;Resize=(128,128))
;Resize=(128,128))