ಶೇ. 50ರ ವಿಶೇಷ ರಿಯಾಯಿತಿ ಯೋಜನೆಗೆ ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಅವಧಿಯಲ್ಲಿ 26,855 ಸಂಚಾರ ಪ್ರಕರಣ ಇತ್ಯರ್ಥಗೊಂಡಿದ್ದು, ಒಟ್ಟು ₹ 70,61,075 ದಂಡ ವಸೂಲಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಜೂನ್‌ 21ರಿಂದ ಜುಲೈ 10ರ ವರೆಗೆ ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡಕ್ಕೆ ಘೋಷಿಸಿದ್ದ ಶೇ. 50ರ ವಿಶೇಷ ರಿಯಾಯಿತಿ ಯೋಜನೆಗೆ ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಅವಧಿಯಲ್ಲಿ 26,855 ಸಂಚಾರ ಪ್ರಕರಣ ಇತ್ಯರ್ಥಗೊಂಡಿದ್ದು, ಒಟ್ಟು ₹ 70,61,075 ದಂಡ ವಸೂಲಾಗಿದೆ.

ಹುಬ್ಬಳ್ಳಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಬೈಕ್‌ ಸವಾರನೊಬ್ಬ 69 ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ₹ 36 ಸಾವಿರ ದಂಡ ವಿಧಿಸಲಾಗಿತ್ತು. ಸರ್ಕಾರದ ಶೇ. 50ರ ರಿಯಾಯಿತಿಯಿಂದ ₹ 18 ಸಾವಿರ ಪಾವತಿಸಿ ಎಲ್ಲ ಪ್ರಕರಣ ಇತ್ಯರ್ಥಪಡಿಸಿದ್ದಾನೆ. ಇದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಓರ್ವ ಸವಾರ ಒಂದೇ ಬಾರಿಗೆ ಇಷ್ಟೊಂದು ಪ್ರಕರಣಗಳ ದಂಡ ಪಾವತಿಸಿರುವುದು ಇದೇ ಮೊದಲು ಎಂಬುದು ವಿಶೇಷ.

ಇದಷ್ಟೇ ಅಲ್ಲದೆ, ಉತ್ತರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಕ್ರಮವಾಗಿ 60 ಹಾಗೂ 59 ಪ್ರಕರಣಗಳ ದಂಡ ಪಾವತಿಸಿದ್ದಾರೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೊಬ್ಬ ವಾಹನ ಸವಾರ 43 ಪ್ರಕರಣಗಳ ದಂಡ ಇತ್ಯರ್ಥಪಡಿಸಿರುವುದು ದಾಖಲಾಗಿದೆ. ಧಾರವಾಡ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯಲ್ಲಿ ಕ್ರಮವಾಗಿ 39, 36, 34, 29, 25, ಪೂರ್ವ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 39, 35 ಹಾಗೂ 32 ಪ್ರಕರಣಗಳ ದಂಡವನ್ನು ಒಂದೇ ಬಾರಿ ಪಾವತಿಸಿದ್ದಾರೆ.

ಸವಾರರಿಗೆ ಅನುಕೂಲ

ಹೆಲ್ಮೆಟ್‌ ಧರಿಸದೆ, ಸಿಗ್ನಲ್‌ ಜಂಪ್‌, ತ್ರಿಬಲ್‌ ರೈಡಿಂಗ್‌ ಸೇರಿದಂತೆ ಸಂಚಾರಿ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ವಿಧಿಸಿದ್ದ ದಂಡವನ್ನು ಪಾವತಿಸದೆ ಸವಾರರು ಪೊಲೀಸರಿಂದ ತಪ್ಪಿಸಿಕೊಂಡಿದ್ದರು. ಇದೀಗ ಸರ್ಕಾರವೇ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ ನೀಡಿದ್ದರಿಂದ ಸವಾರರೇ ಆನ್‌ಲೈನ್‌, ಆಪ್‌ಲೈನ್‌ ಮೂಲಕ ಸಂಚಾರ ದಂಡ ಪಾವತಿಸಿ ತಮ್ಮ ವಾಹನದ ಮೇಲಿದ್ದ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ.

ಜನರಲ್ಲಿ ಜಾಗೃತಿ

ಒಂದೆಡೆ ಪೊಲೀಸ್‌ ಇಲಾಖೆಗೆ ಆದಾಯವಾದರೂ ಮತ್ತೊಂದೆಡೆ ಸಂಚಾರಿ ನಿಯಮಗಳ ಉಲ್ಲಂಘನೆ ಕುರಿತು ಜನರಲ್ಲಿ ಜಾಗೃತಿ ಮೂಡಿದೆ. ದಂಡ ಕಟ್ಟಿದ ಹಣದಲ್ಲಿಯೇ ಹತ್ತಾರು ಹೆಲ್ಮೆಟ್‌ ಬರುತ್ತಿದ್ದವು. ಇನ್ನಾದರೂ ನಾವು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುತ್ತೇವೆ ಎಂದು ಪೊಲೀಸರ ಎದುರು ಹೇಳುತ್ತಿದ್ದಾರೆ. ಈ ರೀತಿ ಸಂಚಾರಿ ನಿಯಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿದರೆ ಉತ್ತಮ ಸಾಧನೆ ಎಂದು ಪೊಲೀಸ್‌ ಇಲಾಖೆಯೂ ಸಂತಸ ಪಟ್ಟಿದೆ.

6 ಲಕ್ಷಕ್ಕೂ ಅಧಿಕ ಪ್ರಕರಣಗಳು ಬಾಕಿ

2019ರಿಂದ ಈ ವರೆಗೆ ಒಟ್ಟು 6.50 ಲಕ್ಷಕ್ಕೂ ಅಧಿಕ ಪ್ರಕರಣ ದಾಖಲಾಗಿದ್ದು 20 ದಿನದಲ್ಲಿ 26,855 ಪ್ರಕರಣ ಇತ್ಯರ್ಥವಾಗಿವೆ. ಇನ್ನುಳಿದ 6.23 ಲಕ್ಷಕ್ಕೂ ಹೆಚ್ಚು ಪ್ರಕರಣಕ್ಕೆ ಸವಾರರು ಪೂರ್ಣ ಪ್ರಮಾಣದಲ್ಲಿ ದಂಡ ಪಾವತಿಸಬೇಕಿದೆ. ಬಾಕಿ ಉಳಿದಿರುವ ವಾಹನದ ಮಾಲಿಕರಿಗೆ ಜ್ಞಾಪನಾ ನೋಟಿಸ್, ನಂತರ ವಾರಂಟ್ ಹೊರಡಿಸಲು ಸಹ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದ ದಂಡ ಪಾವತಿಸಲು ರಾಜ್ಯ ಸರ್ಕಾರ ಹೊರಡಿಸಿದ್ದ ಶೇ. 50 ರಿಯಾಯಿತಿಗೆ ಹು-ಧಾ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಉತ್ತಮ ಸ್ಪಂದನೆ ದೊರತಿದೆ. ದಂಡ ಕಟ್ಟದೆ ಇರುವ ವಾಹನ ಮಾಲಿಕರಿಗೆ ಕೆಲವೇ ದಿನಗಳಲ್ಲಿ ನೋಟಿಸ್‌ ಹೊರಡಿಸಲಾಗುವುದು ಎಂದು ಹು-ಧಾ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ರವೀಶ್ ಸಿ.ಆರ್‌. ತಿಳಿಸಿದ್ದಾರೆ.