ಉಸ್ತುವಾರಿ ಸಚಿವರಿಂದ ತಲಾ ೫೦ ಸಾವಿರ ರು. ಪರಿಹಾರ

| Published : Jun 29 2024, 12:31 AM IST

ಸಾರಾಂಶ

ಬ್ಯಾಡಗಿ ಸಮೀಪದ ಗುಂಡೇನಹಳ್ಳಿ ಕ್ರಾಸ್ ಬಳಿ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ೧೩ ಜನರ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ವೈಯಕ್ತಿಕವಾಗಿ ತಲಾ ೫೦ ಸಾವಿರ ರು. ಪರಿಹಾರ ನೀಡಿದರು.

ಹಾವೇರಿ: ಬ್ಯಾಡಗಿ ಸಮೀಪದ ಗುಂಡೇನಹಳ್ಳಿ ಕ್ರಾಸ್ ಬಳಿ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ೧೩ ಜನರ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ವೈಯಕ್ತಿಕವಾಗಿ ತಲಾ ೫೦ ಸಾವಿರ ರು. ಪರಿಹಾರ ನೀಡಿದರು.ಈ ಭೀಕರ ಅಪಘಾತದಲ್ಲಿ ೧೩ ಜನ ದುರ್ಮರಣಕ್ಕೀಡಾಗಿರುವುದು ತೀವ್ರ ನೋವಿನ ಸಂಗತಿ. ಈ ಘಟನೆ ಬಗ್ಗೆ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದು, ಗಾಯಾಳುಗಳ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಿ ಎಂದು ನಿರ್ದೇಶನ ನೀಡಿದ್ದಾರೆ. ಘಟನೆ ಬಗ್ಗೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.ಅಪಘಾತದಲ್ಲಿ ಮೃತ ಪಟ್ಟಿರುವ ೧೩ ಜನರ ಕುಟುಂಬದವರಿಗೆ ತಲಾ ೫೦ ಸಾವಿರ ರು.ಗಳನ್ನು ಶುಕ್ರವಾರ ಸಚಿವರ ಪರವಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ಕಾಂಗ್ರೆಸ್ ಮುಖಂಡರಾದ ಕೆ.ಆರ್.ಬಸೇಗಣ್ಣಿ, ಪ್ರಭು ಬಿಷ್ಟನಗೌಡ್ರ ಇತರರು ನೀಡಿದರು.ಮೃತರ ಕುಟುಂಬಕ್ಕೆ ಪರಿಹಾರಕ್ಕೆ ಸಂಸದ ಬೊಮ್ಮಾಯಿ ಆಗ್ರಹ: ಬ್ಯಾಡಗಿ ತಾಲೂಕಿನ ಗುಂಡೇನಳ್ಳಿ ಕ್ರಾಸ್ ಬಳಿ ನಡೆದ ಭೀಕರ ಅಪಘಾತದಲ್ಲಿ ೧೩ ಜನರು ಸಾವಿಗೀಡಾಗಿರುವ ಸುದ್ದಿ ಕೇಳಿ ಆಘಾತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಸ್ಥರಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಪತಿಹಾರ ನಿಧಿಯಿಂದ ಸೂಕ್ತ ಪರಿಹಾರ ನೀಡಬೇಕು ಹಾಗೂ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.