ಸಾರಾಂಶ
ಪ್ರತಿ ವರ್ಷದಂತೆ ರಾಜ್ಯದ ಮೂಲೆ ಮೂಲೆಯಿಂದ 50 ಸಾವಿರಕ್ಕೂ ಹೆಚ್ಚಿನ ಭಕ್ತರು ಇಡಗುಂಜಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ಧ ಇಡಗುಂಜಿ ಮಹಾಗಣಪತಿ ಸನ್ನಿಧಿಯಲ್ಲಿ ಶನಿವಾರ ಸಾವಿರಾರು ಸಂಖ್ಯೆಯ ಭಕ್ತಸಾಗರದ ನಡುವೆ ವಿಜೃಂಭಣೆಯಿಂದ ಗಣೇಶ ಚತುರ್ಥಿ ಆಚರಿಸಲಾಯಿತು.ಪ್ರತಿ ವರ್ಷದಂತೆ ರಾಜ್ಯದ ಮೂಲೆ ಮೂಲೆಯಿಂದ 50 ಸಾವಿರಕ್ಕೂ ಹೆಚ್ಚಿನ ಭಕ್ತರು ಇಡಗುಂಜಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಗಣಹೋಮ, ಮಂಗಳಾರತಿ, ಸತ್ಯಗಣಪತಿ ವ್ರತ, ಅಭಿಷೇಕ ಹಾಗೂ ಪಂಚಕಜ್ಜಾಯ ಸೇವೆಗಳು ಜರುಗಿದವು. ಬೆಳಗ್ಗೆ ಶ್ರೀ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ ಕಾರಣ ಎರಡು ಕಿಲೋಮೀಟರ್‌ವರೆಗೂ ಸರದಿಯಲ್ಲಿ ನಿಂತು ಭಕ್ತರು ದರ್ಶನ ಪಡೆದರು.ಗಣೇಶನ ದೇಗುಲದಲ್ಲೂ ಪೂಜೆಗೋಕರ್ಣ: ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.ಪರಶಿವನ ಆತ್ಮಲಿಂಗ ಸ್ಥಾಪಿಸಿ ನೆಲೆನಿಂತ ಪ್ರಥಮ ಪೂಜಿತ ಗಣೇಶನ ದೇವಾಲಯದಲ್ಲಿ ಶನಿವಾರ ಬೆಳಗ್ಗೆಯಿಂದ ಭಕ್ತರು ಆಗಮಿಸಿ ಪೂಜೆಗಳನ್ನು ನೆರವೇರಿಸಿದರು.ಕೋಟಿತೀರ್ಥದ ಕಟ್ಟೆಯಲ್ಲಿರುವ ಪಟ್ಟಿ ವಿನಾಯಕ, ತಾರಮಕ್ಕಿ ಕೇತಕಿ ವಿನಾಯಕ, ರಥಬೀದಿಯ ವನವಿನಾಯಕ ದೇವಾಲಯದಲ್ಲೂ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.
ಇಲ್ಲಿನ ವಿಜಯ ವಿನಾಯಕ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಆಹಲ್ಯಾಬಾಯಿ ಹೊಳ್ಳರ ಛತ್ರದಲ್ಲಿ ಯಂಗಸ್ಟಾರ್ ಕ್ಲಬ್, ಬಿಜೂರಿನ ಭದ್ರಕಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಆಲದಕೆರೆಯ ಸಾರ್ವಜನಿಕ ಗಣೇಶ ಸಮಿತಿ ಸೇರಿದಂತೆ ಬಂಕಿಕೊಡ್ಲ, ಕಡಮೆ, ಮಾದನಗೇರಿ, ಹಿರೇಗುತ್ತಿ ಭಾಗದ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಆಕರ್ಷಕ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಿದರು.