ಮತಕ್ಷೇತ್ರಕ್ಕೆ ₹500 ಕೋಟಿ ಅಭಿವೃದ್ಧಿ ಕಾಮಗಾರಿ

| Published : Jul 30 2025, 01:03 AM IST / Updated: Jul 30 2025, 01:22 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಸುಮಾರು ₹500 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಪ್ರಗತಿ ಹಂತದಲ್ಲಿವೆ ಎಂದು ಶಾಸಕ ಹಾಗೂ ಕೆಎಸ್‌ಡಿಎಲ್‌ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಸುಮಾರು ₹500 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ಪ್ರಗತಿ ಹಂತದಲ್ಲಿವೆ ಎಂದು ಶಾಸಕ ಹಾಗೂ ಕೆಎಸ್‌ಡಿಎಲ್‌ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

ಪಟ್ಟಣದ ಹುಡ್ಕೋ ಬಡಾವಣೆಯ ತಮ್ಮ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನಪರ ಆಡಳಿತ ನಡೆಸುತ್ತಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಮುದ್ದೇಬಿಹಾಳದಲ್ಲಿ ಅಭಿವೃದ್ಧಿ ಶೂನ್ಯವಾಗಿದೆಂದು ಆರೋಪ ಮಾಡುತ್ತಿರುವವರು ಹಿಂದಿನ ಸರ್ಕಾರ 4 ವರ್ಷಗಳ ಅಧಿಕಾರಾವಧಿಯಲ್ಲಿ ಯಾವೊಂದು ಅಭಿವೃದ್ಧಿ ಮಾಡದೇ ಸುಮಾರು ₹1.20 ಲಕ್ಷ ಕೋಟಿ ಬಾಕಿ ಉಳಿಸಿ ಹೋಗಿದ್ದರು. ಕೆಲವೇ ಕೆಲವು ಕಾಮಗಾರಿಗಳನ್ನು ಮಾಡಿ ನಾನು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುತ್ತಿದ್ದಾರೆ. ವಿರೋಧ ಪಕ್ಷದವರಿಗೆ ಮಾಡಲು ಬೇರೆ ಕೆಲಸವಿಲ್ಲದ ಕಾರಣ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲವೆಂದು ಹೇಳಿ ಜನರ ದಾರಿತಪ್ಪಿಸುತ್ತಿದ್ದಾರೆ. ಅಭಿವೃದ್ಧಿಯಾಗಿಲ್ಲವೆಂದು ಸುಳ್ಳು ಆರೋಪ ಸರಿಯಲ್ಲ ಎಂದರು.

ಬೂದಿಹಾಳ-ಫೀರಾಪೂರ ಯೋಜನೆ ಬಗ್ಗೆ ಹಲವಾರು ಹೋರಾಟಗಾರರ ಪರಿಶ್ರಮವಿದೆ. ಈ ಯೋಜನೆಯೂ ಕಾಂಗ್ರೆಸ್‌ ಪಕ್ಷದ ಕೊಡುಗೆ. ಮತಕ್ಷೇತ್ರ ಸೇರಿ ಜಿಲ್ಲೆಯಲ್ಲಿ ನೀರಾವರಿಗೊಳಿಸುವ ಮೂಲಕ ಕೆರೆ ತುಂಬಬೇಕು ಎನ್ನುವುದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕನಸಾಗಿತ್ತು. ಹಿಂದೆ ಸಚಿವ ಎಂ.ಬಿ.ಪಾಟೀಲರು ನೀರಾವರಿ ಸಚಿವರಾಗಿ ಕೆರೆ ತುಂಬಿಸುವ ಯೋಜನೆ ಯಶಸ್ವಿಗೊಳಿಸಿದರು ಎಂದು ತಿಳಿಸಿದರು.

ಒಂದು ಮೊರಾರ್ಜಿ ಶಾಲೆ ತರಲು ಹಿಂದಿನ ಸರ್ಕಾರದಲ್ಲಿ ಸಾಧ್ಯವಾಗಲಿಲ್ಲ. ಆದರೆ, ನಮ್ಮ ಸರ್ಕಾರದಲ್ಲಿ ಶಾಲಾ ಕಾಲೇಜುಗಳ ಜೀರ್ಣೋದ್ಧಾರಕ್ಕಾಗಿ ಸುಮಾರು ₹1.70 ಕೋಟಿ ಖರ್ಚು ಮಾಡಲಾಗಿದೆ. ಕೆಆರ್‌ಐಡಿಎಲ್ ಇಲಾಖೆಯಿಂದ ಸುಮಾರು ₹54.50 ಕೋಟಿ ಕಾಮಗಾರಿ ಕೈಗೆತ್ತಿ ಕೊಳ್ಳಲಾಗಿದೆ. ಆರ್‌ಡಬ್ಲೂಎಸ್ ಇಲಾಖೆಯಿಂದ ₹90.76 ಕೋಟಿ, ಎಂ.ಐ ಇಲಾಖೆಯಿಂದ ₹38.55 ಕೋಟಿ, ಯುಎಫ್‌ಐಡಿಎಫ್‌ಸಿ ಇಲಾಖೆ ವತಿಯಿಂದ ₹34.77 ಕೋಟಿಯಲ್ಲಿ ಯುಜಿಡಿ ಕಾಮಗಾರಿ, ಅಮೃತ ಯೋಜನೆಯಲ್ಲಿ ಪಟ್ಟಣದಲ್ಲಿ ದಿನದ 24 ಗಂಟೆ ನೀರು ಸರಬರಾಜುಗೆ ₹14 ಕೋಟಿ ವೆಚ್ಚದಲ್ಲಿ ಕಾಮಗಾರಿ, ಮುದ್ದೇಬಿಹಾಳ ಪಟ್ಟಣದಲ್ಲಿ ನೂತನ ಮೆಗಾ ಮಾರ್ಕೆಟ್‌ ನಿರ್ಮಾಣ ಹೀಗೆ ಹಲವಾರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ವಿವರಿಸಿದರು.

ನಾಗರಬೆಟ್ಟ ಏತ ನೀರಾವರಿ ಯೋಜನೆ ಕಾಮಗಾರಿ ಸದ್ಯ ಸಂಪೂರ್ಣ ಮುಗಿದಿದ್ದು, ಇನ್ನು ಕೆಲ ಖಾಸಗಿ ಹೊಲಗಳ ಮಾಲೀಕರಿಗೆ ಪರಿಹಾರ ಬಂದಿಲ್ಲವೆಂದು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಕಾರಣ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ಬೇಗ ಇತ್ಯರ್ಥಗೊಳಿಸಿ ಸಂಪೂರ್ಣ ಕಾಮಗಾರಿ ಮುಗಿಸಿ ಮುಂಬರುವ 2 ತಿಂಗಳೊಳಗಾಗಿ ಮುಖ್ಯಮಂತ್ರಿಗಳನ್ನು ಕರೆಸಿ ಉದ್ಘಾಟನೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಗುರು ತಾರನಾಳ, ಮುಖಂಡರಾದ ವೈ.ಎಚ್.ವಿಜಯಕರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ಅಶೋಕ ಇರಕಲ್ಲ, ಬಹಾದ್ದೂರ ರಾಠೋಡ, ಮಲ್ಲು ಅಪರಾಧಿ ಸೇರಿದಂತೆ ಹಲವರು ಇದ್ದರು.--------------

ಕೋಟ್‌...

ಬರಿ ಸುಳ್ಳು ಹೇಳಿ ರಾಜಕಾರಣ ಮಾಡುವುದಲ್ಲ, ಸತ್ಯ ಹೇಳಿದರೇ ಜನರು ನಂಬುತ್ತಾರೆ. ಸುಳ್ಳು ಹೇಳಿದರೆ ಜನರ ಅಪನಂಬಿಕೆಗೆ ಗುರಿಯಾಗಬೇಕಾಗುತ್ತದೆ. ಬರಿ ವಿರೋಧಿಸುವುದಲ್ಲ, ಶಿಕ್ಷಣ ಕ್ಷೇತ್ರ, ನೀರಾವರಿ, ಕಂದಾಯ ಇಲಾಖೆ, ಆಸ್ಪತ್ರೆಗಳ ಸುಧಾರಣೆ, ಹೀಗೆ ಅಭಿವೃದ್ಧಿಪಡಿಸಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಮಾಡಿದಂತೆ. ಕೇವಲ ಒಂದು ಸಿಸಿ ರಸ್ತೆ ಮಾಡಿ ಅಭಿವೃದ್ಧಿ ಮಾಡಿದ್ದೇನೆಂದರೇ ಹೇಗೆ ಸಾಧ್ಯ?. ಮುಂದೆ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಿದೆ.

-ಸಿ.ಎಸ್‌.ನಾಡಗೌಡ(ಅಪ್ಪಾಜಿ), ಶಾಸಕ ಮತ್ತು ಕೆಎಸ್‌ಡಿಎಲ್‌ ಅಧ್ಯಕ್ಷರು.