ಸಾರಾಂಶ
ಜಲ ಜೀವನ ಮಿಷನ್ ಯೋಜನೆಯಡಿ ಕೇಂದ್ರ, ರಾಜ್ಯ, ಸಾರ್ವಜನಿಕರ ಸಹಭಾಗಿತ್ವದ ಯೋಜನೆಯಾಗಿದೆ. ಪ್ರತಿ ಮನೆಗೂ ನೀರು ನೀಡುವ ಯೋಜನೆಯಾಗಿದೆ. ಜಿಲ್ಲೆಯಲ್ಲಿ ಇದರ ಜಾರಿಗೆ ₹938 ಕೋಟಿ ಯೋಜನೆ ಜಾರಿ ಮಾಡಿ, ಕಾರ್ಯಗತ ಮಾಡಲಾಗುತ್ತಿದೆ. ಇದುವೇ ಪೂರ್ಣಗೊಂಡಿಲ್ಲ.
ಕೊಪ್ಪಳ: ಜಲ ಜೀವನ್ ಮಿಷನ್ ಯೋಜನೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಬಹುದೊಡ್ಡ ಹಗರಣ ನಡೆದಿದ್ದು, ಸುಮಾರು ₹500 ಕೋಟಿ ಬೋಗಸ್ ಬಿಲ್ ತಯಾರಿಸಲಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಮುಕುಂದರಾವ್ ಭವಾನಿಮಠ ಆರೋಪಿಸಿದ್ದಾರೆ.
ನಗರದ ಮೀಡಿಯಾ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಸಮಗ್ರ ದಾಖಲೆಯೊಂದಿಗೆ ಲೋಕಾಯುಕ್ತಕ್ಕೆ ದೂರು ಸಹ ಸಲ್ಲಿಸಿದ್ದೇನೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಕೇಂದ್ರ, ರಾಜ್ಯ, ಸಾರ್ವಜನಿಕರ ಸಹಭಾಗಿತ್ವದ ಯೋಜನೆಯಾಗಿದೆ. ಪ್ರತಿ ಮನೆಗೂ ನೀರು ನೀಡುವ ಯೋಜನೆಯಾಗಿದೆ. ಜಿಲ್ಲೆಯಲ್ಲಿ ಇದರ ಜಾರಿಗೆ ₹938 ಕೋಟಿ ಯೋಜನೆ ಜಾರಿ ಮಾಡಿ, ಕಾರ್ಯಗತ ಮಾಡಲಾಗುತ್ತಿದೆ. ಇದುವೇ ಪೂರ್ಣಗೊಂಡಿಲ್ಲ. ಬಹುತೇಕ ಗ್ರಾಮಗಳಲ್ಲಿ ಕಾಮಗಾರಿಯೇ ಆಗಿಲ್ಲ. ಇದರಲ್ಲಿಯೇ ಕೋಟ್ಯಂತರ ರುಪಾಯಿ ಲೂಟಿಯಾಗಿದೆ ಎನ್ನುವ ಆರೋಪ ಇದೆ. ಆದರೆ, ಈಗ ಕಳೆದ ಸರ್ಕಾರ ಅವಧಿ ಮುಗಿಯುವ ವೇಳೆಯಲ್ಲಿ ಸುಮಾರು ₹500 ಕೋಟಿ ಹೆಚ್ಚುವರಿಯಾಗಿ ಇದೇ ಯೋಜನೆಗೆ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಇದು ಕಾನೂನು ಪ್ರಕಾರ ಬರುವುದಿಲ್ಲ. ಮೊದಲು ಜಾರಿಗೊಂಡ ಯೋಜನೆಯ ಕಾಮಗಾರಿ ಪೂರ್ಣಗೊಂಡಿಲ್ಲ ಮತ್ತು ಅದರ ವಿವರ ಸಲ್ಲಿಸಿಲ್ಲ. ಈ ನಡುವೆ ಹೆಚ್ಚುವರಿಯಾಗಿ ₹500 ಕೋಟಿ ಬಿಡುಗಡೆ ಮಾಡಿದ್ದು, ಅದನ್ನು ಬೋಗಸ್ ಬಿಲ್ ಮಾಡಿ ಎತ್ತಿ ಹಾಕಲಾಗುತ್ತಿದೆ ಎಂದು ಆರೋಪಿಸಿದರು.ಸಮಗ್ರ ತನಿಖೆಗೆ ಆಗ್ರಹ: ಇಡೀ ಪ್ರಕರಣದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗಿಯಾಗಿದ್ದಾರೆ. ಹೀಗಾಗಿ, ಇದರ ಸಮಗ್ರ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.ಪ್ರಕರಣದ ಕುರಿತು ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ. ಸರ್ಕಾರದ ವಿರುದ್ಧವೂ ಪ್ರಕರಣ ದಾಖಲು ಮಾಡಿದ್ದೇನೆ. ಹಾಗೆಯೇ ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ ಖರ್ಗೆ ಅವರಿಗೂ ದೂರು ಸಲ್ಲಿಸಿದ್ದೇನೆ ಎಂದರು.ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆಗೆ ನೀಡಿದರೆ ಸರಿ, ಇಲ್ಲದಿದ್ದರೆ ಸಮಗ್ರ ದಾಖಲೆಗಳೊಂದಿಗೆ ನ್ಯಾಯಾಲಯದ ಮೆಟ್ಟಿಲು ಏರುತ್ತೇನೆ. ಇದರಲ್ಲಿ ಶಾಮೀಲಾದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಕ್ರಮವಾಗುವವರೆಗೂ ಹೋರಾಟ ಮುಂದುವರೆಸುತ್ತೇನೆ ಎಂದರು.ನೀರಿನ ಮೂಲವೇ ಇಲ್ಲ, ಪೈಪ್‌ಲೈಲ್ ಮಾಡಿದ್ದಾರೆ. ಈ ಮೊದಲೇ ಮಾಡಿದ ಪೈಪ್‌ಲೈನನ್ನೇ ಪುನಃ ಬಳಕೆ ಮಾಡಿಕೊಂಡು, ಬೋಗಸ್ ಖರ್ಚು ಹಾಕಿದ್ದಾರೆ. ನಿರ್ಮಾಣವೂ ಸಂಪೂರ್ಣ ಕಳಪೆಯಾಗಿದೆ ಎಂದು ದೂರಿದರು.ಸುದ್ದಿಗೋಷ್ಠಿಯಲ್ಲಿ ಎಂ.ಡಿ. ಜಹೀರ್ ಅಲಿ ಇದ್ದರು.