ಸಂಡೂರು ಗಣಿಯಿಂದ 500 ಹೆಕ್ಟೇರ್ ಅರಣ್ಯ ನಾಶ: ಲಕ್ಷ್ಮಣ್‌ ಆತಂಕ

| Published : Jun 26 2024, 12:38 AM IST

ಸಾರಾಂಶ

ರಾಜ್ಯದವರೇ ಆದ ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಬೃಹತ್ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವರಾಗಿದ್ದು, ಸಂಡೂರಿನಲ್ಲಿ ದೇವದಾರಿ ಅರಣ್ಯದಲ್ಲಿ ಗಣಿಗಾರಿಕೆಗೆ ಸಹಿ ಮಾಡಿದ್ದಾರೆ. ಇದರಿಂದ 500 ಹೆಕ್ಟೇರ್ ಪ್ರದೇಶದ ಅರಣ್ಯ ನಾಶವಾಗಲಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಜ್ಯದವರೇ ಆದ ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಬೃಹತ್ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವರಾಗಿದ್ದು, ಸಂಡೂರಿನಲ್ಲಿ ದೇವದಾರಿ ಅರಣ್ಯದಲ್ಲಿ ಗಣಿಗಾರಿಕೆಗೆ ಸಹಿ ಮಾಡಿದ್ದಾರೆ. ಇದರಿಂದ 500 ಹೆಕ್ಟೇರ್ ಪ್ರದೇಶದ ಅರಣ್ಯ ನಾಶವಾಗಲಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಡೂರಿನಲ್ಲಿ ದೇವದಾರಿಯಿಂದ ಕುದುರೆಮುಖ ಉಕ್ಕು ಕಾರ್ಖಾನೆಗೆ ಸರಬರಾಜು ಮಾಡುವುದಕ್ಕೆ ಸಹಿ ಮಾಡಿದ್ದಾರೆ. ನಿಮಗೆ ಪರಿಸರದ ಬಗ್ಗೆ ಕಾಳಜಿ ಇದೆಯಾ ಕುಮಾರಸ್ವಾಮಿಯವರೇ ಎಂದು ಪ್ರಶ್ನಿಸಿದರು.

ಬಳ್ಳಾರಿಯನ್ನು ಗಣಿಧಣಿಗಳು ಈಗಾಗಲೇ ಹಾಳು ಮಾಡಿದ್ದಾರೆ. ಸುಪ್ರೀಂಕೋರ್ಟ್ ಇಲ್ಲಿ ಯಾವುದೇ ಗಣಿ ನಡೆದಂತೆ ಹೇಳಿದೆ. ಆದರೆ ದೇವದಾರಿಯಲ್ಲಿ ಗಣಿ ನಡೆಸಲು ಸಹಿ ಮಾಡಿದ್ದೇಕೆ. ಈಗಾಗಲೇ ಛತ್ತೀಸಘಡದಿಂದ ಕುದುರೆಮುಖಕ್ಕೆ ಸರಬರಾಜು ಆಗುತ್ತಿದೆ. ಇದರಿಂದ ನಿಮಗೆ ಸಮಸ್ಯೆ ಏನು ಎಂದು ಹೇಳಿದರು.

ರಾಜ್ಯದಲ್ಲಿ ಹಾಲಿನ ದರ 2 ರು. ಏರಿಕೆಯನ್ನು ಲಕ್ಷ್ಮಣ್ ಸಮರ್ಥಿಸಿಕೊಂಡರು. ಬೆಲೆ ಏರಿಕೆಯನ್ನು ಬಿಜೆಪಿಯವರು ಹೇಳ್ತಾರೋ, ಸೃಷ್ಟಿ ಮಾಡ್ತಾರೋ ಗೊತ್ತಿಲ್ಲ. ಹಾಲಿನ ದರ ಜಾಸ್ತಿ ಮಾಡಿ ಯಾರಿಗೆ ಕೊಡ್ತೀವಿ? ರೈತರಿಗೆ ಅಲ್ವಾ? ಬೆಲೆ ಏರಿಕೆಯಿಂದ ನಮಗೆ ಹೊರೆ ಆಗ್ತಿದೆ ಅಂತ ಜನ ಸಾಮಾನ್ಯರು ಹೇಳ್ತಿದ್ದಾರಾ ಎಂದು ಪ್ರಶ್ನಿಸಿದರು.

ಏನು 20 ರು. ಜಾಸ್ತಿ ಮಾಡಿದ್ದೀವಾ, 2 ರುಪಾಯಿ ಅಲ್ವಾ, ಅನಿವಾರ್ಯತೆ ಇದ್ದ ಸಂಧರ್ಭದಲ್ಲಿ ಬೆಲೆ ಏರಿಕೆ ಮಾಡಬೇಕಾಗುತ್ತೆ. ಹಿಂದೆ 10, 30,40 ರೂಪಾಯಿ ಜಾಸ್ತಿಯಾದಾಗ ಯಾರೂ ಮಾತನಾಡಿಲ್ಲ ಎಂದರು.

ಗ್ಯಾರಂಟಿ ಯೋಜನೆಗಳಿಗೆ ಮೀಸಲು:

ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕವಾಗಿ 57 ಸಾವಿರ ಕೋಟಿ ರು. ಮೀಸಲಿಡಲಾಗಿದೆ.

3 ರು. ಏರಿಕೆ ಮಾಡಿರೋದ್ರಿಂದ ವಾರ್ಷಿಕವಾಗಿ 500 ಕೋಟಿ ಅಷ್ಟೇ ಬರೋದು‌. 500 ಕೋಟಿಯನ್ನು 57 ಸಾವಿರ ಕೋಟಿಗೆ ಸರಿದೂಗಿಸಲು ಆಗುತ್ತಾ? ಬಿಜೆಪಿಯವರು ತಲೆ ಬುಡ ಏನು ಇಲ್ಲದೆ ಮಾತನಾಡುತ್ತಾರೆ‌. ಬಾಯಿತೆಗೆದರೆ ಸುಳ್ಳುಹೇಳುವ ಜಾಯಮಾನವೇ ಬಿಜೆಪಿಯವರದ್ದು, ಬಿಜೆಪಿಯವರ ಮನೆ ದೇವರೆ ಸುಳ್ಳು ಎಂದು ವಾಗ್ದಾಳಿ ನಡೆಸಿದರು.