ಯುದ್ಧ ಆರಂಭವಾದ ಮೇಲೆ ಕೇಂದ್ರ ಸರ್ಕಾರ ದೇಶದಲ್ಲಿ 60-70 ದಿನ ಬೇಕಾಗುವ ಅಡುಗೆ ಅನಿಲದ ಸಂಗ್ರಹವಿದ್ದು ಸಮಸ್ಯೆಯಾಗುವುದಿಲ್ಲ ಎಂದಿದ್ದರು. ಆದರೆ, ಈಗ ಯುದ್ಧ ನಡೆದು 10 ದಿನದ ಬಳಿಕ ಅಡುಗೆ ಅನಿಲದ ಕೊರತೆಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ಮಧ್ಯಪ್ರಾಚ್ಯ ಯುದ್ಧದ ಬಿಸಿ ಹುಬ್ಬಳ್ಳಿಗೂ ತಟ್ಟಿ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸರಬರಾಜು ಸ್ಥಗಿತಗೊಳಿಸಲಾಗಿದೆ. ಇದರಿಂದ ನಗರದ ಹೋಟೆಲ್‌ಗಳೆಲ್ಲ ಬುಧವಾರ (ಮಾ. 11) ಬಂದ್ ಆಗುವ ಆತಂಕ ಎದುರಿಸುತ್ತಿವೆ.
ಯುದ್ಧದ ಪರಿಣಾಮ ದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೆ ರಾಜ್ಯದಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಹಾಗೂ ಗೃಹಬಳಕೆಯ ಎಲ್‌ಪಿಜಿ ಸರಬರಾಜಿನ ಮೇಲೆ ಗಣನೀಯ ಪರಿಣಾಮ ಬೀರಿದೆ. ಹುಬ್ಬಳ್ಳಿ-ಧಾರವಾಡದಲ್ಲೂ ಅಡುಗೆ ಅನಿಲ ಸಿಲಿಂಡರ್ ಕೊರತೆ ಕಂಡುಬರುತ್ತಿದೆ.5000 ಹೋಟೆಲ್:
ಹುಬ್ಬಳ್ಳಿಯಲ್ಲಿ ಸಸ್ಯಾಹಾರ, ಮಾಂಸಹಾರ, ಬಾರ್ ಆ್ಯಂಡ್ ರೆಸ್ಟೊರೆಂಟ್, ಸಣ್ಣ ಪುಟ್ಟ ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಒಂದೊಂದು ಹೋಟೆಲ್‌ಗೆ ದಿನಕ್ಕೆ ಕನಿಷ್ಠ ಒಂದು ಅಥವಾ ಎರಡು ಸಿಲಿಂಡರ್ ಬೇಕಾಗುತ್ತದೆ. ಆದರೆ, ಕಳೆದ ಸೋಮವಾರದಿಂದಲೇ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಇದರಿಂದ ಹೋಟೆಲ್ ಮಾಲೀಕರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಕೆಲವು ಹೋಟೆಲ್‌ಗಳಲ್ಲಿ ಅಲ್ಪ ಪ್ರಮಾಣದ ಸಿಲಿಂಡರ್ ಸಂಗ್ರಹವಿದ್ದು, ಮಂಗಳವಾರದ ವರೆಗೆ ಅದರಲ್ಲೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ಬುಧವಾರ ಸಿಲಿಂಡರ್ ಪೂರೈಕೆಯಾಗದಿದ್ದರೆ ಹೋಟೆಲ್ ಬಂದ್ ಮಾಡಬೇಕು. ಇಲ್ಲವೇ ಇದಕ್ಕೆ ಪರ‍್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ದಿಢೀರನೇ ಈ ಸಮಸ್ಯೆ ಉದ್ಭವಿಸಿದ ಹಿನ್ನೆಲೆಯಲ್ಲಿ ಹೋಟೆಲ್ ಬಂದ್ ಮಾಡುವುದೊಂದೇ ಪರಿಹಾರ ಎಂಬ ಅನಿವಾರ್ಯತೆ ಎದುರಾಗಿದೆ.60-70 ದಿನದ ಸಂಗ್ರಹ?:
ಯುದ್ಧ ಆರಂಭವಾದ ಮೇಲೆ ಕೇಂದ್ರ ಸರ್ಕಾರ ದೇಶದಲ್ಲಿ 60-70 ದಿನ ಬೇಕಾಗುವ ಅಡುಗೆ ಅನಿಲದ ಸಂಗ್ರಹವಿದ್ದು ಸಮಸ್ಯೆಯಾಗುವುದಿಲ್ಲ ಎಂದಿದ್ದರು. ಆದರೆ, ಈಗ ಯುದ್ಧ ನಡೆದು 10 ದಿನದ ಬಳಿಕ ಅಡುಗೆ ಅನಿಲದ ಕೊರತೆಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಸಿಗುತ್ತಿಲ್ಲ ಸಿಲಿಂಡರ್:
ಬುಕ್ ಮಾಡಿ ವಾರ ಕಳೆದರೂ ಸಿಲಿಂಡರ್ ದೊರೆಯುತ್ತಿಲ್ಲ. ಈ ಕುರಿತು ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವ ಏಜೆನ್ಸಿ ಕೇಳಿದರೆ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ಉತ್ತರಿಸುತ್ತಿದ್ದಾರೆ.ಇಂದು ಜಿಲ್ಲಾಧಿಕಾರಿ ಸಭೆ
ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ಆಗುತ್ತಿರುವ ತೊಂದರೆ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಗ್ಯಾಸ್ ಏಜೆನ್ಸಿಗಳೊಂದಿಗೆ ಮಾ.11ರಂದು ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಚರ್ಚಿಸಿದ ಬಳಿಕ ಏನು ಸಮಸ್ಯೆಯಾಗಿದೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಹೊರಬೀಳಲಿದೆ ಎಂದು ಗ್ಯಾಸ್ ಏಜೆನ್ಸಿ ಮಾಲೀಕರೋರ್ವರು "ಕನ್ನಡಪ್ರಭ "ಕ್ಕೆ ತಿಳಿಸಿದರು.ವಾಣಿಜ್ಯ ಬಳಕೆಯ ಅಡುಗೆ ಅನಿಲ ಪೂರೈಕೆ ಸ್ಥಗಿತ ಮಾಡುವುದಾಗಿ ಆಹಾರ ಇಲಾಖೆ ಸೂಚಿಸಿದೆ. ಹೀಗಾಗಿ ಸಂಗ್ರಹವಿರುವ ಅಡುಗೆ ಅನಿಲದಿಂದ ಮಂಗಳವಾರ ಸಂಜೆ ಅಥವಾ ರಾತ್ರಿ ವರೆಗೆ ಹೋಟೆಲ್ ನಡೆಸಬಹುದು. ನಂತರ ಅನಿವಾರ್ಯವಾಗಿ ಬಂದ್ ಮಾಡುವ ಪರಿಸ್ಥಿತಿ ಎದುರಾಗಿದೆ.
ರವೀಂದ್ರ ಗಾಯತೊಂಡೆ, ಹುಬ್ಬಳ್ಳಿ ಹೋಟೆಲ್ ಸಂಘದ ಕಾರ್ಯದರ್ಶಿ