ಸಾರಾಂಶ
ರಾಘು ಕಾಕರಮಠ
ಕನ್ನಡಪ್ರಭ ವಾರ್ತೆ ಅಂಕೋಲಾತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ಜೋರಾಗಿದೆ. ಅರಣ್ಯ ಇಲಾಖೆಯ ಅಂಕಿ-ಅಂಶದ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ 51 ಜಾನುವಾರುಗಳನ್ನು ಚಿರತೆ ಬೇಟೆಯಾಡಿ ತಿಂದು ತೇಗಿದೆ. ಈ ಕಾರಣಕ್ಕೆ ನಾಗರಿಕರಲ್ಲಿ ಆತಂಕದ ಛಾಯೆ ಮನೆ ಮಾಡಿದೆ.ಅಂಕೋಲಾದ ತಳಗದ್ದೆ, ಬೆಳಸೆ, ಸಕಲಬೇಣ, ಶಿರೂರು, ಶೆಟಗೇರಿ ಬಾಗಗಳಲ್ಲಿ ಚಿರತೆಗಳ ಆರ್ಭಟ ಜೋರಾಗಿದೆ. ಜಾನುವಾರಗಳನ್ನು ಬೇಟೆಯಾಡಿ ತಿಂದು ಮುಗಿಸುವ ಈ ಚಿರತೆಗಳು ಅರಣ್ಯ ಇಲಾಖೆಗೂ ಸವಾಲಾಗಿ ಪರಿಣಮಿಸಿದೆ. ಚಿರತೆಗಳನ್ನು ಹಿಡಿಯಲು ಬೋನ್ (ಪಂಜರ)ಗಳನ್ನು ಅಳವಡಿಸಿದರೆ ಅದಕ್ಕೂ ಬೀಳದೆ, ಚಾಲಾಕಿತನದಿಂದ ತಪ್ಪಿಸಿಕೊಳ್ಳುತ್ತಿದೆ.
ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ:ಚಿರತೆ ಉಪಟಳದಿಂದ ಜನತೆಗೆ ಹೈರಾಣಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ವಿಶೇಷ ಕ್ರಮ ವಹಿಸಿ ಚಿರತೆಗಳ ಹಾವಳಿಯನ್ನು ನಿಯಂತ್ರಿಸಲು ಯೋಜನೆಯನ್ನು ರೂಪಿಸಿದೆ. ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ಕೃಷ್ಣಯ್ಯ ಅಣ್ಣಯ್ಯ ಗೌಡ ಅವರು ಈ ಬಗ್ಗೆ ವಿಶೇಷ ಗಮನ ಹರಿಸಿ ತಾಲೂಕಿನಲ್ಲಿ ವನ್ಯ ಜೀವಿಗಳ ಬಗ್ಗೆ ಜಾಗೃತಿ ಅಭಿಯಾನ, ಗ್ರಾಮ ಅರಣ್ಯ ಸಮಿತಿಯಿಂದ ವಿಶೇಷ ಸಭೆ, ಜಾನುವಾರುಗಳನ್ನು ಕಾಡಿಗೆ ಬಿಡದಂತೆ ಮನವೊಲಿಕೆ ಹಾಗೂ ಅರಣ್ಯಕ್ಕೆ ಸಾಗುವ ರಸ್ತೆಗಳಲ್ಲಿ ಬೇಲಿ ನಿರ್ಮಾಣ ಸೇರಿದಂತೆ ಹತ್ತಾರು ಕ್ರಮಗಳನ್ನು ಕೈಗೊಳ್ಳುವ ಮೂಲಕ ಚಿರತೆಗಳ ಚಿಂತೆಯಿಂದ ನಾಗರಿಕರು ದೂರವಾಗಲು ಶ್ರಮವಹಿಸಿದ್ದಾರೆ.ಕಾಡಿನ ಅವಲಂಬನೆ:
ಇಲ್ಲಿನ ಕೆಲವು ಹಳ್ಳಿ ಸಮುದಾಯಗಳು ತಮ್ಮ ಜೀವನ ನಿರ್ವಹಣೆಗೆ ಕಾಡುಗಳನ್ನು ಪರ್ಯಾಯವಾಗಿ ಅವಲಂಬಿಸಿದ್ದಾರೆ. ಹೀಗಾಗಿ ಅವರು ಅರಣ್ಯಕ್ಕೆ ಹತ್ತಿರದ ಗ್ರಾಮಗಳಲ್ಲಿ ವಾಸ ಮಾಡುತ್ತಾರೆ. ಹಾಗೆ ತಮ್ಮ ಜಾನುವಾರುಗಳನ್ನು ಹತ್ತಿರದ ಅರಣ್ಯ ಪ್ರದೇಶದಲ್ಲಿ ಮೇಯಲು ಬಿಡುತ್ತಾರೆ. ಕಾಡುಪ್ರಾಣಿಗಳು ಕೆಲವೊಮ್ಮೆ ತಮ್ಮ ಆಹಾರ ಶೋಧಕ್ಕಾಗಿಯೋ ಅಥವಾ ದಾರಿ ತಪ್ಪಿಯೋ ಗ್ರಾಮಗಳಿಗೆ ಲಗ್ಗೆ ಇಡುತ್ತವೆ. ಆಗ ಗ್ರಾಮಗಳಲ್ಲಿ ರೈತರು ಸಾಕಿದ ಹಸು, ನಾಯಿ, ಬೆಕ್ಕು, ಕೋಳಿ ಮುಂತಾದ ಸಾಕುಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತಿವೆ. ಅದರಿಂದ ರೈತರು ತೀವ್ರ ನಷ್ಟಕ್ಕೆ ಒಳಗಾಗುತ್ತಿದ್ದಾರೆ.ದಾಖಲಾಗದ ಸಾವು: ಕಳೆದ ಮೂರು ವರ್ಷಗಳಲ್ಲಿ ಚಿರತೆಗಳು 51 ಜಾನುವಾರುಗಳನ್ನು, 800ಕ್ಕೂ ಹೆಚ್ಚು ನಾಯಿ, 7 ಕುರಿ, 1700ಕ್ಕೂ ಹೆಚ್ಚು ಕೋಳಿಗಳನ್ನು ತಿಂದು ನಾಲಿಗೆ ಚಪ್ಪರಿಸಿದೆ. ಜಾನುವಾರುಗಳಿಗೆ ಮಾತ್ರ ಪರಿಹಾರ ದೊರೆಯುತ್ತ ಇರುವುದರಿಂದ ಸರ್ಕಾರಿ ದಾಖಲೆಯಲ್ಲಿ ಜಾನುವಾರ ಸಾವು ಮಾತ್ರ ದಾಖಲಾಗಿರುವುದು ಗಮನಾರ್ಹವಾಗಿದೆ.
ಚಿರತೆ ಹಾವಳಿ ನಿಯಂತ್ರಿಸಲು ವಿಶೇಷ ಕ್ರಮ ಕೈಗೊಳ್ಳಲಾಗಿದೆ. ನಾಗರಿಕರು ಸಹ ಈ ಬಗ್ಗೆ ಜಾಗೃತರಾಗಿ ಸಹಕಾರ ನೀಡಬೇಕಿದೆ. ಚಿರತೆಗಳ ಆಹಾರವಾಗಿ ಬಲಿಯಾದ 51 ಜಾನುವಾರ ಸಮಗ್ರ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ನೀಡಲಾಗಿದೆ ಎಂದು ಅಂಕೋಲಾ ವಲಯ ಅರಣ್ಯಾಧಿಕಾರಿ ಗಣಪತಿ ನಾಯಕ ಹೇಳುತ್ತಾರೆ.ಜಾನುವಾರು ಇಲ್ಲಿನ ಜನತೆಯ ಉಪಜೀವನಕ್ಕೆ ಆಧಾರವಾಗಿದೆ. ಇದನ್ನು ಚಿರತೆಗಳು ತಿನ್ನುವುದರಿಂದ ರೈತರು ತೀವ್ರ ಆತಂತಕ್ಕೆ ಒಳಗಾಗಿದ್ದಾರೆ. ಮೃತಪಟ್ಟ ಜಾನುವಾರುಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಹಾಗೆ ಚಿರತೆ ಹಾವಳಿಯ ನಿಗ್ರಹಕ್ಕೆ ವಿಶೇಷ ಕ್ರಮವನ್ನು ಅರಣ್ಯ ಇಲಾಖೆ ಕೈಗೊಳ್ಳಬೇಕಿದೆ ಎಂದು ಕಣಗಿಲ ರೈತ ವೆಂಕಟೇಶ ಕೆ. ನಾಯ್ಕ ಹೇಳುತ್ತಾರೆ.