ಕನ್ನಡಪ್ರಭ ವಾರ್ತೆ ಬೆಳಗಾವಿ

ಕಳೆದ ಹಣಕಾಸು ವರ್ಷದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ, ಪಿಎಂ ಪೋಷಣ್ (ಬಿಸಿಯೂಟ), ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಾಗೂ ವಿದ್ಯಾರ್ಥಿ ನಿಲಯಗಳು ಸೇರಿದಂತೆ ವಿವಿಧ ಯೋಜನೆಗಳಡಿ ರಾಜ್ಯದಲ್ಲಿ ಒಟ್ಟು 52,91 ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ ಎಂದು ರಾಜ್ಯಮಟ್ಟದ ಸಲಹಾ ಸಮಿತಿ (ಎಸ್.ಎಲ್.ಸಿ) ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ನಗರದ ಫೇರ್ ಫೀಲ್ಡ್ ಮ್ಯಾರಿಯೊಟ್ ಹೋಟೆಲ್‌ನಲ್ಲಿ ಗುರುವಾರ ನಡೆದ ಭಾರತೀಯ ಆಹಾರ ನಿಗಮದ ರಾಜ್ಯಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಕರ್ನಾಟಕ ಪ್ರದೇಶದ 2025-26ನೇ ಸಾಲಿನ ಕಾರ್ಯಚಟುವಟಿಕೆಗಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ರಾಜ್ಯದ ಅಗತ್ಯತೆಗಳನ್ನು ಪೂರೈಸಲು ಹೆಚ್ಚುವರಿ ಉತ್ಪಾದನಾ ರಾಜ್ಯಗಳಿಂದ 54,53,948 ಮೆಟ್ರಿಕ್ ಟನ್ ಅಕ್ಕಿ ಮತ್ತು ಗೋಧಿಯನ್ನು ರೈಲ್ವೆ ಮೂಲಕ ಕರ್ನಾಟಕಕ್ಕೆ ಸುರಕ್ಷಿತವಾಗಿ ತರಿಸಲಾಗಿದೆ. ಸದ್ಯ ರಾಜ್ಯದಲ್ಲಿ ಎಫ್ ಸಿಐಯು 61 ಗೋದಾಮುಗಳ ಮೂಲಕ 10.68 ಲಕ್ಷ ಮೆಟ್ರಿಕ್ ಟನ್ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಹೆಚ್ಚುವರಿಯಾಗಿ 2.45 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ನೂತನ ಗೋದಾಮುಗಳನ್ನು ನಿರ್ಮಿಸಲಾಗುತ್ತಿದೆ ಎಂದರು.5 ವರ್ಷರ್ಗಳಿಂದ ಶೂನ್ಯ ಹಾನಿ ಸಾಧನೆ:

ಬೃಹತ್ ಪ್ರಮಾಣದ ಆಹಾರ ಧಾನ್ಯಗಳನ್ನು ನಿರ್ವಹಿಸುತ್ತಿದ್ದರೂ ಕಳೆದ 5 ವರ್ಷಗಳಲ್ಲಿ ಧಾನ್ಯಗಳ ಗುಣಮಟ್ಟದಲ್ಲಿ ಯಾವುದೇ ರೀತಿಯ ಹಾನಿ ಅಥವಾ ಕೊರತೆ ದಾಖಲಾಗಿಲ್ಲ. ವೈಜ್ಞಾನಿಕ ಸಂಗ್ರಹಣೆ ಮತ್ತು ಕಟ್ಟುನಿಟ್ಟಿನ ಮೇಲ್ವಿಚಾರಣೆಯಿಂದಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ನಿರಂತರ ಹಾಗೂ ವಿಶ್ವಾಸಾರ್ಹ ಪೂರೈಕೆ ಸಾಧ್ಯವಾಗಿದೆ. ಸಂಗ್ರಹಣೆ ಹಾಗೂ ಸಾಗಾಣಿಕೆ ಹಂತಗಳಲ್ಲಿ ನಷ್ಟವನ್ನು ಗಣನೀಯವಾಗಿ ತಗ್ಗಿಸಿರುವುದು ಕರ್ನಾಟಕ ಪ್ರದೇಶದ ದಕ್ಷತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.


ಬೆನಕನಹಳ್ಳಿ ಗೋದಾಮಿಗೆ ಭೇಟಿ, ಪರಿಶೀಲನೆ:

ಸಭೆಯ ಬಳಿಕ ಇದೇ ಸಂದರ್ಭದಲ್ಲಿ ಸಂಸದ ಈರಣ್ಣ ಕಡಾಡಿ ಅವರು ಬೆಳಗಾವಿ ತಾಲೂಕಿನ ಬೆನಕನಹಳ್ಳಿಯಲ್ಲಿರುವ ಭಾರತೀಯ ಆಹಾರ ನಿಗಮದ (ಎಫ್ ಸಿಐ) ಬೃಹತ್ ಗೋದಾಮಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋದಾಮಿನಲ್ಲಿ ಆಹಾರ ಧಾನ್ಯಗಳ ಸಂಗ್ರಹಣೆ, ಅವುಗಳ ಸುರಕ್ಷತೆ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಧಾನ್ಯಗಳನ್ನು ವಿತರಿಸುವ ನಿಖರವಾದ ನಿರ್ವಹಣಾ ಪದ್ಧತಿಯನ್ನು ಹತ್ತಿರದಿಂದ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಧಾನ್ಯಗಳ ಗುಣಮಟ್ಟ ಕಾಯ್ದುಕೊಳ್ಳಲು ಕೈಗೊಂಡಿರುವ ವೈಜ್ಞಾನಿಕ ಕ್ರಮಗಳ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು.ಸಭೆಯಲ್ಲಿ ಭಾರತೀಯ ಆಹಾರ ನಿಗಮದ ಜನರಲ್ ಮ್ಯಾನೇಜರ್ ಬಿ.ಒ.ಮಹೇಶ್ವರಪ್ಪ, ಸಹಾಯಕ ಜನರಲ್ ಮ್ಯಾನೇಜರ್ ರಮೇಶ ನಾಯಕ, ಬೆಳಗಾವಿ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ನಾಯಕ, ಸಲಹಾ ಸಮಿತಿ ಸದಸ್ಯರಾದ ಶ್ರೀಕಾಂತ ಕೌಜಲಗಿ, ಬಸವರಾಜ ಗಾಡವಿ, ಸುನಿತಾ ಜಗದೀಶ್, ಶಂಕರಣ್ಣ ಮುನ್ನೋಳಿ, ಶಶಿಧರ, ಮಂಜುನಾಥ ಸೇರಿದಂತೆ ನಿಗಮದ ಹಿರಿಯ ಅಧಿಕಾರಿಗಳು, ರಾಜ್ಯ ಸರ್ಕಾರದ ಆಹಾರ ಇಲಾಖೆಯ ಪ್ರತಿನಿಧಿಗಳು ಹಾಗೂ ಕೇಂದ್ರ ಉಗ್ರಾಣ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.ಸುರಕ್ಷಿತ ಸಾಗಣೆ, ಶೂನ್ಯ ಹಾನಿ ಹಾಗೂ ಕನಿಷ್ಠ ಸಂಗ್ರಹಣಾ ಮತ್ತು ಸಾಗಾಣಿಕೆ ನಷ್ಟ ದಾಖಲಿಸುವ ಮೂಲಕ ಗುಣಮಟ್ಟ ನಿರ್ವಹಣೆಯಲ್ಲಿ ಭಾರತೀಯ ಆಹಾರ ನಿಗಮದ (ಎಫ್.ಸಿ.ಐ) ಕರ್ನಾಟಕ ಪ್ರದೇಶವು ಅತ್ಯುತ್ತಮ ಸಾಧನೆ ಮಾಡಿದೆ. ಆಹಾರ ಧಾನ್ಯಗಳ ಸಂಗ್ರಹಣೆ, ಸಾಗಣೆ ಮತ್ತು ಗುಣಮಟ್ಟದ ನಿರ್ವಹಣೆಯಲ್ಲಿ ಕರ್ನಾಟಕ ವಿಭಾಗವು ಕೇಂದ್ರ ಕಚೇರಿ ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ಕಟ್ಟುನಿಟ್ಟಿನ ಮಾನದಂಡಗಳನ್ನು ಸಮರ್ಪಕವಾಗಿ ಪಾಲಿಸಿದೆ.

-ಈರಣ್ಣ ಕಡಾಡಿ, ರಾಜ್ಯಮಟ್ಟದ ಸಲಹಾ ಸಮಿತಿ (ಎಸ್.ಎಲ್.ಸಿ) ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯರು.