ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 52.97 ಲಕ್ಷ ಲಾಭ

| Published : Sep 20 2024, 01:36 AM IST

ಸಾರಾಂಶ

ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2022-23 ನೇ ಸಾಲಿನಲ್ಲಿ ರು. 52,97,830 ನಿವ್ವಳ ಲಾಭ ಗಳಿಸಿದೆ. ಗುರುವಾರ ಇಲ್ಲಿನ ಗುಂಡುಗುಟ್ಟಿ ಮಂಜುನಾಥಯ್ಯ ಸಹಕಾರ ಭವನದಲ್ಲಿ ಅಧ್ಯಕ್ಷ ಕೆ.ಎಸ್. ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಮಾಹಿತಿ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2022-23 ನೇ ಸಾಲಿನಲ್ಲಿ ರು. 52,97,830 ನಿವ್ವಳ ಲಾಭ ಗಳಿಸಿದೆ.

ಗುರುವಾರ ಇಲ್ಲಿನ ಗುಂಡುಗುಟ್ಟಿ ಮಂಜುನಾಥಯ್ಯ ಸಹಕಾರ ಭವನದಲ್ಲಿ ಅಧ್ಯಕ್ಷ ಕೆ.ಎಸ್. ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಮಾಹಿತಿ ನೀಡಲಾಯಿತು.

ಸಂಘದಲ್ಲಿ 1961 ಮಂದಿ ಸದಸ್ಯರಿದ್ದು, ಇದರಲ್ಲಿ ಎ ಸದಸ್ಯರ ಪಾಲು ಹಣ 1,58,64,000 ಸಿ ತರಗತಿ ಪಾಲು ಹಣ 2,49,000 ಸರ್ಕಾರದ ಪಾಲು ಹಣ ರು.78,000 ಕಳೆದ ಸಾಲಿನಲ್ಲಿ ಒಟ್ಟು ವ್ಯಾಪಾರ ವಹಿವಾಟು ರು.123 ಕೋಟಿಗಳಾಗಿದ್ದು, ಒಟ್ಟು ರು. 21,59,78,000 ಕೃಷಿ ಮತ್ತು ಕೃಷಿಯೇತರ ಸಾಲಗಳನ್ನು ವಿತರಿಸಲಾಗಿದೆ.

ಈಗಾಗಲೇ ವರದಿಯಾಗಿರುವಂತೆ ಸಂಘದಲ್ಲಿ ಆಗಿರುವ ಹಣ ದುರುಪಯೋಗದ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಹಿರಿಯ ಸದಸ್ಯ ಎಂ.ಎ.ವಸಂತ ಪ್ರಶ್ನಿಸಿದಾಗ ಅಧ್ಯಕ್ಷ ಕೆ.ಎಸ್.ಮಂಜುನಾಥ್ ಪ್ರತಿಕ್ರಿಯಿಸಿ ಈಗಾಗಲೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದ್ದು, ಕಾಲ ಕಾಲಕ್ಕೆ ವಿಚಾರಣೆ ನಡೆಯುತ್ತಿದ್ದು, ಸಂಘದ ವತಿಯಿಂದ ಕ್ರಮವಹಿಸಲಾಗಿದ್ದು, ಹೆಚ್ಚು ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರು.

ಕಳೆದ ಮಹಾಸಭೆಯಲ್ಲೂ ಕೂಡ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಖಾಲಿ ಇದ್ದು, ಇದರ ಬಗ್ಗೆ ಪ್ರಗತಿ ಏನಾಗಿದೆ ಎಂದು ಹಿರಿಯ ಸದಸ್ಯ ಕೆ.ಡಿ.ರಾಮಯ್ಯ ಮತ್ತು ಎಂ.ಎ.ವಸಂತ ಪ್ರಶ್ನಿಸಿದಾಗ ಈಗಾಗಲೇ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಇನ್ನೂ 2 ಹುದ್ದೆಗಳು ಖಾಲಿಯಿದ್ದು, ಸರ್ಕಾರದ ಮಟ್ಟದಲ್ಲಿ ಹುದ್ದೆ ಭರ್ತಿಗೆ ಪ್ರಕ್ರಿಯೆಗಳು ನಡೆದಿದೆ ಎಂದು ಮಂಜುನಾಥ್ ಮಾಹಿತಿ ನೀಡಿದರು.

ಮಹಾಸಭೆಯಲ್ಲಿ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.

ಉಪಾಧ್ಯಕ್ಷ ಕೆ.ವಿ.ರಮ್ಯ, ಸದಸ್ಯರಾದ ಎಂ.ಎನ್.ಕುಮಾರಪ್ಪ, ಎನ್.ಸಿಪೊನ್ನಪ್ಪ, ಡಿ.ಬಿ.ರಮೇಶ್ ಚಂಗಪ್ಪ, ಜೆರ್ಮಿ ಡಿಸೋಜ, ಡಿ.ಕೆ.ಗಂಗಾಧರ, ಡಾ.ಶಶಿಕಾಂತ ರೈ, ಕೆ.ಪಿ.ಜಗನ್ನಾಥ್, ಪಿ.ಪಿ.ಉದಯಕುಮಾರ್, ಕೆ.ಆರ್.ಮಂಜುನಾಥ, ಬಿ.ಕೆ.ದಯಾನಂದ, ಪಿ.ಪಿ.ಲೀಲಾವತಿ ಮತ್ತು ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮಿತ್ರ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ವಿಕ್ಷಕರಾಗಿ ರತ್ನ ಆಗಮಿಸಿದ್ದರು.