ಲೋಕ್ ಅದಾಲತ್‌ನಲ್ಲಿ 5340 ಪ್ರಕರಣಗಳ ಇತ್ಯರ್ಥ: ನ್ಯಾ. ಮಹಾಂತೇಶ ದರಗದ

| Published : Dec 17 2024, 01:00 AM IST

ಲೋಕ್ ಅದಾಲತ್‌ನಲ್ಲಿ 5340 ಪ್ರಕರಣಗಳ ಇತ್ಯರ್ಥ: ನ್ಯಾ. ಮಹಾಂತೇಶ ದರಗದ
Share this Article
  • FB
  • TW
  • Linkdin
  • Email

ಸಾರಾಂಶ

ಡಿ. 14ರಂದು ಜಿಲ್ಲೆಯಾದ್ಯಂತ ಆಯೋಜಿಸಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ರಾಜಿ ಸಂಧಾನದ ಮೂಲಕ ಒಟ್ಟು 5340 ಪ್ರಕರಣ ಇತ್ಯರ್ಥಪಡಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮಾಹಿತಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಡಿ. 14ರಂದು ಜಿಲ್ಲೆಯಾದ್ಯಂತ ಆಯೋಜಿಸಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ರಾಜಿ ಸಂಧಾನದ ಮೂಲಕ ಒಟ್ಟು 5340 ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ ಹೇಳಿದರು.

ಸೋಮವಾರ ನಗರದ ಜಿಲ್ಲಾ ನ್ಯಾಯಾಲಯದ ಆವರಣದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಈ ಮಾಹಿತಿ ನೀಡಿದರು.

ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ ಸಿ. ಅವರ ವಿಶೇಷ ಮುತುವರ್ಜಿಯಿಂದಾಗಿ ಜಿಲ್ಲೆಯಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ ವಿಮೆ, ನೀರಿನ ಬಿಲ್, ಬ್ಯಾಂಕ್ ಸಾಲ, ಮನೆ ಕರ, ಕೌಟುಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ್ ಪ್ರಕರಣಗಳು, ಜನನ ಮರಣ, ಸಿವಿಲ್ ಕೇಸ್, ಕ್ರಿಮಿನಲ್ ಕೇಸ್, ಮೋಟಾರ್ ವಾಹನ ಅಪಘಾತ, ಎಂ.ಎ.ಔ.ಆರ್.ಡಿ ಪ್ರಕರಣಗಳು ಸೇರಿದಂತೆ ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ನ್ಯಾಯಾಲಯಗಳಲ್ಲಿನ 7006 ಪ್ರಕರಣಗಳ ಪೈಕಿ 5340 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದರು.

ದಾಖಲೆ ಮೊತ್ತದ ಹಣ ವಸೂಲಾತಿ:ವಿಮೆ, ನೀರಿನ ಬಿಲ್, ಮೋಟಾರ್ ವಾಹನ ಅಪಘಾತ ಸೇರಿದಂತೆ ವಿವಿಧ ಪ್ರಕರಣಗಳ ಇತ್ಯರ್ಥ ಮಾಡಲಾದ ಒಟ್ಟು ಮೌಲ್ಯ ₹37,85,04,906 ಆಗಿರುತ್ತದೆ ಹಾಗೂ ಪೂರ್ವ ದಾವೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 48,637 ಪ್ರಕರಣಗಳ ಪೈಕಿ 41,801 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಇತ್ಯರ್ಥ ಪಡಿಸಲಾದ ಒಟ್ಟು ಮೌಲ್ಯ ₹ 2,05,86,528 ಆಗಿದೆ. ಒಟ್ಟಾರೆ ಒಂದೇ ದಿನದಲ್ಲಿ ಒಟ್ಟು 55,643 ಪ್ರಕರಣಗಳ ಪೈಕಿ 47,141 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇತ್ಯರ್ಥಪಡಿಸಲಾದ ಒಟ್ಟು ಮೌಲ್ಯ ₹39,92,01,241 ಇರುತ್ತದೆ ಎಂದು ಹೇಳಿದರು.

ರಾಜೀ ಸಂಧಾನದ ಮೂಲಕ ಇಬ್ಬರೂ ಪಕ್ಷಗಾರರಿಗೂ ನ್ಯಾಯ ಸಿಕ್ಕಿದೆ. ಇದರ ಜೊತೆಗೆ ಇಬ್ಬರ ಮಧ್ಯದಲ್ಲಿ ಬಾಂಧವ್ಯ ಮುಂದುವರೆಯುತ್ತದೆ. ಸಿವಿಲ್ ಪ್ರಕರಣಗಳಲ್ಲಿ ನ್ಯಾಯಾಲಯದ ಶುಲ್ಕ ವಾಪಸ್ ಸಿಗುತ್ತಿದೆ. ರಾಜಿ ಆಗದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಬಹುದು. ಲೋಕ್ ಅದಾಲತ್ ಮೂಲಕ ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾಗುವುದರಿಂದ ಜನರ ಸಮಯ ಮತ್ತು ಹಣದ ಉಳಿತಾಯವಾಗುವುದರ ಜೊತೆಗೆ ಪರಸ್ಪರ ಸ್ನೇಹ ಭಾವನೆಯಿಂದಿರುತ್ತಾರೆ ಎಂದರು.ನ್ಯಾಯಾಧೀಶರ ವಿಶೇಷ ಕಾಳಜಿ:

ಕೊಪ್ಪಳ ಜಿಲ್ಲೆಯಲ್ಲಿ ಬಾಕಿಯಿದ್ದ ಜೀವನಾಂಶ ಪ್ರಕರಣಗಳ ಪೈಕಿ ಕೌಟುಂಬಿಕ ಭಿನ್ನಾಭಿಪ್ರಾಯ, ವಿವಿಧ ಕಾರಣಕ್ಕೆ ಕೌಟುಂಬಿಕ ಸಮಸ್ಯೆಯಿಂದ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲು ಏರಿದ್ದ ಏಳು ಜೋಡಿಗಳನ್ನು ರಾಜಿ ಸಂಧಾನದ ಮೂಲಕ ಮತ್ತೆ ಒಂದಾಗಿಸಲಾಗಿದೆ. ಇದರ ಜೊತೆಗೆ ದಾಖಲಾದ ಜೀವನಾಂಶ ಪ್ರಕರಣಗಳಲ್ಲಿ ನ್ಯಾಯಾಧೀಶರ ವಿಶೇಷ ಕಾಳಜಿಯಿಂದಾಗಿ ತಾಯಿ- ಮಕ್ಕಳ ಮತ್ತು ತಂದೆ-ಮಗನ ವೈಮನಸ್ಸುಗಳನ್ನು ಸಹ ದೂರ ಮಾಡಲಾಗಿದೆ ಎಂದು ತಿಳಿಸಿದರು.

ಈ ಬಾರಿ ಅತಿ ಹೆಚ್ಚು ಸಂಖ್ಯೆಯ ಪ್ರಕರಣಗಳು ಇತ್ಯರ್ಥವಾಗಿದ್ದು, ಇದಕ್ಕೆ ಕಾರಣ ಲೋಕ್ ಅದಾಲತ್ ಬಗ್ಗೆ ನಮ್ಮ ಜನರಿಗೆ ಅರಿವಾಗುತ್ತಿದೆ. ಜನರು ಪ್ರಕರಣಗಳ ಇತ್ಯರ್ಥಕ್ಕೆ ಮುಂದೆ ಬರುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆಯ ಜೊತೆಗೆ ಜಿಲ್ಲೆಯ ಜನರಿಗೆ ಲೋಕ್ ಅದಾಲತ್‌ದಿಂದ ಅನುಕೂಲವಾಗುತ್ತಿದೆ ಎಂದರು.

ಈ ಸಂದರ್ಭ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯ ಸಿಬ್ಬಂದಿ ಸೇರಿದಂತೆ ಇತರರಿದ್ದರು.