2026ರ ಜನವರಿ 1 ರಿಂದ ಸೆಪ್ಟೆಂಬರ್ 28 ರವರೆಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಒಟ್ಟು 143 ಸಂತ್ರಸ್ತರಿಗೆ ₹114.98 ಲಕ್ಷ ಪರಿಹಾರ ಧನ ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.

- 143 ಸಂತ್ರಸ್ತರಿಗೆ ₹114.98 ಲಕ್ಷ ಪರಿಹಾರ ವಿತರಣೆ: ಡಿಸಿ ಗಂಗಾಧರ ಸ್ವಾಮಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

2026ರ ಜನವರಿ 1 ರಿಂದ ಸೆಪ್ಟೆಂಬರ್ 28 ರವರೆಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಒಟ್ಟು 143 ಸಂತ್ರಸ್ತರಿಗೆ ₹114.98 ಲಕ್ಷ ಪರಿಹಾರ ಧನ ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಮೂರನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೌರ್ಜನ್ಯ ತಡೆ ಕಾಯ್ದೆಯಡಿ 8 ಪೋಕ್ಸೋ ಹಾಗೂ 47 ಇತರೆ ದೌರ್ಜನ್ಯ ಪ್ರಕರಣಗಳು ಸೇರಿದಂತೆ ಒಟ್ಟು 55 ಪ್ರಕರಣಗಳಲ್ಲಿ ಪರಿಹಾರ ಧನ ಬಿಡುಗಡೆ ಮಾಡಲಾಗಿದ್ದು, (ಕೊಲೆ ಪ್ರಕರಣಗಳು -0), 27 ಪ್ರಕರಣಗಳಲ್ಲಿ ಚಾರ್ಜ್‌ ಶೀಟ್ ಸಲ್ಲಿಸಲಾಗಿದೆ. ಮಂಜೂರಾದ ಒಟ್ಟು ಪರಿಹಾರ ಮೊತ್ತದಲ್ಲಿ ಎಫ್‌ಐಆರ್ ಹಂತದಲ್ಲಿ ₹57.98 ಲಕ್ಷ ಹಾಗೂ ಚಾರ್ಜ್‌ ಶೀಟ್ ಹಂತದಲ್ಲಿ ₹57.00 ಲಕ್ಷ ಬಿಡುಗಡೆಯಾಗಿದ್ದು, ಒಟ್ಟು 101 ಪರಿಶಿಷ್ಟ ಜಾತಿ ಹಾಗೂ 42 ಪರಿಶಿಷ್ಟ ಪಂಗಡದ ಫಲಾನುಭವಿ ಸಂತ್ರಸ್ತರು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 2026ರ ಜನವರಿ 1ರಿಂದ ಸೆಪ್ಟೆಂಬರ್ 25 ರವರೆಗಿನ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಒಟ್ಟು 54 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಜೂನ್ ಅಂತ್ಯದವರೆಗೆ 41, ಜುಲೈನಲ್ಲಿ 4, ಆಗಸ್ಟ್ನಲ್ಲಿ 6 ಹಾಗೂ ಸೆಪ್ಟೆಂಬರ್‌ನಲ್ಲಿ 3 ಪ್ರಕರಣಗಳು ದಾಖಲಾಗಿದ್ದು, ನಿಯಮಾವಳಿಯಂತೆ ನಿಗದಿತ 60 ದಿನಗಳ ಕಾಲಮಿತಿಯೊಳಗೆ ಒಟ್ಟು 31 ಪ್ರಕರಣಗಳಲ್ಲಿ ಚಾರ್ಜ್‌ ಶೀಟ್‌ (ದೋಷಾರೋಪಣೆ ಪಟ್ಟಿ) ಸಲ್ಲಿಸಲಾಗಿದೆ. ಪ್ರಸ್ತುತ 13 ಪ್ರಕರಣಗಳು ತನಿಖಾ ಹಂತದಲ್ಲಿದ್ದು, 9 ಪ್ರಕರಣಗಳಲ್ಲಿ ''''''''ಬಿ'''''''' ವರದಿ ಸಲ್ಲಿಸಲಾಗಿದೆ. ಇನ್ನು 31 ಪ್ರಕರಣಗಳು ನ್ಯಾಯಾಲಯದ ವಿಚಾರಣಾ ಹಂತದಲ್ಲಿದ್ದು, 1 ಪ್ರಕರಣವನ್ನು ಇತರೆ ರೀತಿಯಲ್ಲಿ ವಿಲೇವಾರಿ ಮಾಡಲಾಗಿದೆ.

ನ್ಯಾಯಾಲಯದಲ್ಲಿ 2026 ರ ಜೂನ್‌ನಿಂದ ಆಗಸ್ಟ್ ಅಂತ್ಯದವರೆಗಿನ ಅವಧಿಯಲ್ಲಿ ಒಟ್ಟು 7 ಮೊಕದ್ದಮೆಗಳನ್ನು ವಿಲೇವಾರಿ ಮಾಡಲಾಗಿದ್ದು, ಆಗಸ್ಟ್ ಅಂತ್ಯದ ವೇಳೆಗೆ 161 ಪ್ರಕರಣಗಳು ಬಾಕಿ ಉಳಿದಿವೆ ಎಂದು ಸರ್ಕಾರಿ ಅಭಿಯೋಜಕರಾದ ಕೆ. ಜಯಮ್ಮ ತಿಳಿಸಿದ್ದಾರೆ.

ಆಗಸ್ಟ್‌ನಲ್ಲಿ ಪ್ರಾರಂಭದಲ್ಲಿದ್ದ 151 ಪ್ರಕರಣಗಳ ಜೊತೆಗೆ 13 ಹೊಸ ಮೊಕದ್ದಮೆಗಳು ಸ್ವೀಕೃತಗೊಂಡು ಒಟ್ಟು 164 ಪ್ರಕರಣಗಳು ವಿಲೇವಾರಿಗೆ ಲಭ್ಯವಿದ್ದವು. ಇವುಗಳಲ್ಲಿ 3 ಪ್ರಕರಣಗಳು (ಆರೋಪಿಗಳ ಬಿಡುಗಡೆ) ವಿಲೇವಾರಿಯಾಗಿದ್ದು, ಆಗಸ್ಟ್ ಅಂತ್ಯದ ವೇಳೆಗೆ ಒಟ್ಟು 161 ಪ್ರಕರಣಗಳು ಬಾಕಿ ಉಳಿದಿವೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಸಿದ್ದಲಿಂಗೇಶ್, ಮಹಾನಗರ ಪಾಲಿಕೆ ಆಯುಕ್ತ ಡಾ.ಎನ್.ಮಹಾಂತೇಶ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಡಿಎಚ್‌ಒ ಡಾ.ಕೃಷ್ಣ, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಯೋಗೇಂದ್ರ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

- - -

-28ಕೆಡಿವಿಜಿ37:

ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಮೂರನೇ ತ್ರೈಮಾಸಿಕ ಸಭೆ ನಡೆಯಿತು.