ಕಳೆದ ಎರಡು ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದೆ. ರೈತರ ಮುಖದಲ್ಲಿ ಸ್ವಲ್ಪ ಮಟ್ಟಿಗೆ ಕಳೆ ಆವರಿಸಿದೆ.

ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಬರದ ಛಾಯೆ ಆವರಿಸಿ ಇನ್ನೇನು ಬೆಳೆಯ ಕಥೆ ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ ಕಳೆದ ಎರಡು ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದೆ. ರೈತರ ಮುಖದಲ್ಲಿ ಸ್ವಲ್ಪ ಮಟ್ಟಿಗೆ ಕಳೆ ಆವರಿಸಿದೆ. ಇದರಿಂದ ಬಿತ್ತನೆ ಚುರುಕುಗೊಳಿಸಿದ್ದಾರೆ.

ರೈತರು ಮೆಕ್ಕೆಜೋಳ ಹಾಗೂ ರಾಗಿ ಬಿತ್ತನೆಯಲ್ಲಿ ಹೆಚ್ಚು ತೊಡಗಿದ್ದಾರೆ. 86309 ಹೆಕ್ಟೇರ್ ಬಿತ್ತನೆ ಗುರಿ ಇದ್ದರೆ ಈವರೆಗೂ ಕೇವಲ 18232 ಹೆಕ್ಟೇರ್‌ ಬಿತ್ತನೆಯಾಗಿದೆ. ಅದು ಸಹ ಕೆಲವು ಕಡೆ ಬೀಜ ಹುಟ್ಟಿಲ್ಲ. ಹುಟ್ಚಿದ ಬೆಳೆ ಬಾಡಿ ಹೋಗಿತ್ತು. ಅದರಲ್ಲೂ 16 ಸಾವಿರ ಹೆಕ್ಟೇರ್‌ ಮೆಕ್ಕೆಜೋಳ ಬಿತ್ತನೆಯಾಗಿದೆ. ಒಟ್ಟಾರೆ ಶೇ.21ರಷ್ಟು ಬಿತ್ತನೆಯಾಗಿದೆ.ರೈತ ಸಂಪರ್ಕ ಕೇಂದ್ರ ಹಾಗೂ ಖಾಸಗಿ ಅಂಗಡಿಗಳಲ್ಲಿ ಬೀಜ, ರಸಗೊಬ್ಬರದ ಕೊರತೆ ಇಲ್ಲ. ಸಾಕಷ್ಟು ದಾಸ್ತಾನು ಇದೆ. ಈವರೆಗೂ ಯೂರಿಯಾ ಗೊಬ್ಬರ ಕೇಳುವವರಿದ್ದಿಲ್ಲ. ಹೀಗೆ ಮಳೆ ಮುಂದುವರೆದರೆ ಯೂರಿಯಾಕ್ಕೆ ರೈತರು ಮುಗಿ ಬೀಳಬಹುದು. ಆ.15ರವರೆಗೆ ಮುಂಗಾರು ಮಳೆ ಇದೆ. ಮಳೆಗಾಗಿ ಹಂಪಾಪುರದಲ್ಲಿ ದೇವರ ಪೂಜೆ, ಕೆಲವೊಂದು ಕಡೆ ಕತ್ತೆಗಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸಿದ್ದರು. ಸಣ್ಣದಾಗಿ ಮಳೆ ಪ್ರಾರಂಭವಾಗಿ ರೈತರ ಮುಖದಲ್ಲಿ ಕಳೆ ಬಂದಿದೆ.

ಹಳ್ಳ, ಕೊಳ್ಳ ತುಂಬಿ, ಚರಂಡಿಗಳು ತುಂಬಿ ರಸ್ತೆಯಲ್ಲಿ ಹರಿದಾಡುವಷ್ಟು ಮಳೆ ಇನ್ನೂ ಬಂದಿಲ್ಲ. ಆದರೂ ರೈತರಿಗೆ ಈ ಜಿಟಿಜಿಟಿ ಮಳೆ ಆಶಾ ಭಾವನೆ ಮೂಡಿಸಿದೆ. ಮೋಡ ಕವಿದ ವಾತಾವರಣ ಮುಂದುವರೆದಿದೆ.

ಪುನರ್ವಸು ಮಳೆ ಆರಂಭವಾಗಿದೆ. ಈ ಮಳೆ ಹಾಗೂ ಮುಂದಿನ ಮಳೆಗಳು ಕಾಲ ಕಾಲಕ್ಕೆ ಬಂದರೆ ರೈತರು ಸ್ವಲ್ಪ ಮಟ್ಟಿಗೆ ಸಮಾಧಾನ ಪಟ್ಟುಕೊಳ್ಳುತ್ತಾರೆ. ಇಲ್ಲದಿದ್ದರೆ ರೈತರ ಬದುಕು ಕಷ್ಟವಾಗುತ್ತದೆ.

ಜು.6ರಂದು ಅರಸೀಕೆರೆ -3.10 ಮಿ.ಮೀ., ಚಿಗಟೇರಿ -8.40 ಮಿಮೀ, ಹಿರೇಮೇಗಳಗೇರಿ -11.2 ಮಿ.ಮೀ., ಹರಪನಹಳ್ಳಿ -9.60 ಮಿ.ಮೀ., ಉಚ್ಚಂಗಿದುರ್ಗ -10 ಮಿ.ಮೀ., ತೆಲಿಗಿ -3.20 ಮಿ.ಮೀ., ಹಲುವಾಗಲು -10.20 ಮಿ.ಮೀ., ಒಟ್ಟು 55.70 ಮಿ.ಮೀ. ಮಳೆ ಬಿದ್ದಿದ್ದು, ಸರಾಸರಿ 7.95 ಮಿ.ಮೀ. ಮಳೆ ಸುರಿದಿದೆ.

ಸ್ವಲ್ಪ ಮಟ್ಟಿನ ಮಳೆ ಬಂದಿದೆ. ಎಲ್ಲ ಕಡೆ ಆಗಿಲ್ಲ. ಮೆಕ್ಕೆಜೋಳ, ರಾಗಿ ಬಿತ್ತನೆ ಕಾರ್ಯ ಬಿರುಸುಗೊಂಡಿದೆ. ಬೀಜ, ಗೊಬ್ಬರಕ್ಕೇನು ಕೊರತೆ ಇಲ್ಲ. ಆದರೂ ರೈತರು ತೇವಾಂಶ ನೋಡಿಕೊಂಡು ಬಿತ್ತನೆಗೆ ಮುಂದಾಗಬೇಕು ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಮುಹಮ್ಮದ್‌ ಆಶ್ರಫ್‌.