ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 55 ಕೋಟಿ ರು. ಆಸ್ತಿ ನಷ್ಟ, 5 ಪ್ರಾಣಹಾನಿ: ಡಿಸಿ ವಿದ್ಯಾಕುಮಾರಿ

| Published : Jul 21 2024, 01:17 AM IST

ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 55 ಕೋಟಿ ರು. ಆಸ್ತಿ ನಷ್ಟ, 5 ಪ್ರಾಣಹಾನಿ: ಡಿಸಿ ವಿದ್ಯಾಕುಮಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಈ ಮಳೆಗಾಲದಲ್ಲಿ 9 ಮನೆಗಳು ಸಂಪೂರ್ಣ ನಾಶವಾಗಿದ್ದರೆ, 552 ಮನೆಗಳು ಮತ್ತು 67 ದನದ ಕೊಟ್ಟಿಗೆಗಳು, 39 ಶಾಲಾ ಕಟ್ಟಗಳು ಹಾಗೂ 20 ಅಂಗನವಾಡಿಗಳು ಭಾಗಶಃ ಹಾನಿಗೊಂಡಿವೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲೆಯಲ್ಲಿ ಮೇ ತಿಂಗಳಿಂದ ಇದುವರೆಗೆ ಮಳೆಯಿಂದ 55 ಕೋಟಿ ರು.ಗಳಷ್ಟು ಆಸ್ತಿಪಾಸ್ತಿ ಹಾನಿ ಮತ್ತು 5 ಜೀವಹಾನಿ ಸಂ‍ಭವಿಸಿದೆ. ಈ ನಷ್ಟವನ್ನು ಭರಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈ ಮಳೆಗಾಲದಲ್ಲಿ 9 ಮನೆಗಳು ಸಂಪೂರ್ಣ ನಾಶವಾಗಿದ್ದರೆ, 552 ಮನೆಗಳು ಮತ್ತು 67 ದನದ ಕೊಟ್ಟಿಗೆಗಳು, 39 ಶಾಲಾ ಕಟ್ಟಗಳು ಹಾಗೂ 20 ಅಂಗನವಾಡಿಗಳು ಭಾಗಶಃ ಹಾನಿಗೊಂಡಿವೆ. 270 ಹೆಕ್ಟೇರ್‌ ತೋಟಗಾರಿಕಾ ಬೆಳೆ ಮತ್ತು 52.94 ಹೆಕ್ಟೇರ್‌ ಕೃಷಿ ಬೆಳೆ ಹಾನಿಯಾಗಿದೆ. 712.929 ಕಿ.ಮೀ. ಗ್ರಾಮೀಣ ರಸ್ತೆಗಳು ಮಳೆಯಿಂದ ಹಾನಿಗೊಳಗಾಗಿವೆ. 3024 ವಿದ್ಯುತ್ ಕಂಬಗಳು, 57.86 ಕಿ.ಮೀ, ವಿದ್ಯುತ್ ತಂತಿ ಹಾಗೂ 20 ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೀಡಾಗಿವೆ ಎಂದು ಡಿಸಿ ವಿವರಗಳನ್ನು ನೀಡಿದರು.

5 ಲಕ್ಷ ರು. ಪರಿಹಾರ:

ಈ ಬಾರಿಯ ಮಳೆಗಾಲದಲ್ಲಿ 5 ಮಂದಿ ಬಲಿಯಾಗಿದ್ದಾರೆ. ಮೇ ತಿಂಗಳಲ್ಲಿ ಸಿಡಿಲಿನಿಂದ 3 ಮಂದಿ ಮೃತಪಟ್ಟಿದ್ದರೆ, ಜೂನ್ ತಿಂಗಳಲ್ಲಿ ಆವರಣ ಗೋಡೆ ಕುಸಿದು ಒಬ್ಬ ಮಹಿಳೆ ಮೃತಪಟ್ಟಿದ್ದಾರೆ ಮತ್ತು ಈ ತಿಂಗಳಲ್ಲಿ ನೆರೆ ನೀರಿನಲ್ಲಿ ಒಬ್ಬ ಕಾರ್ಮಿಕ ಕೊಚ್ಚಿ ಹೋಗಿದ್ದಾನೆ. ಅವರ ಕುಟುಂಬಕ್ಕೆ ತಲಾ 5 ಲಕ್ಷ ರು.ಗಳ ಪರಿಹಾರವನ್ನು ತಕ್ಷಣ ನೀಡಲಾಗಿದೆ ಎಂದರು.

ಕಾಪು ತಾಲೂಕಿನ ನಡಿಪಟ್ಣ ಪ್ರದೇಶದಲ್ಲಿ ಸುಮಾರು 100 ಮೀ., ಉಡುಪಿ ತಾಲೂಕಿನ ಹೂಡೆಯಲ್ಲಿ 60 ಮೀ., ಕುಂದಾಪುರ ತಾಲೂಕಿನ ಮಣೂರು ಪಡುಕರೆಯಲ್ಲಿ 100 ಮೀ., ಬೈಂದೂರು ತಾಲೂಕಿನ ಮರವಂತೆಯಲ್ಲಿ 100 ಮೀ. ಸೇರಿ ಒಟ್ಟು 360 ಮೀ.ನಷ್ಟು ಕಡಲುಕೊರೆತ ಸಂಭವಿಸಿದೆ. ಈ ಭಾಗದಲ್ಲಿ ಇನ್ನೂ ಹೆಚ್ಚಿನ ಕೊರೆತ ತಡೆಯಲು ಕಲ್ಲು ಹಾಕಲು ಸೂಚಿಸಲಾಗಿದೆ. ಹೆಚ್ಚಿನ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ಮತ್ತು ಜಿಪಂ ಸಿಇಓ ಪ್ರತೀಕ್ ಬಾಯಲ್ ಉಪಸ್ಥಿತರಿದ್ದರು.

ವಾಡಿಕೆಗಿಂತ ಶೇ.21ರಷ್ಟು ಹೆಚ್ಚು ಮಳೆಜಿಲ್ಲೆಯಲ್ಲಿ ಒಟ್ಟಾರೆ ಇದುವರೆಗೆ ಮಳೆ ಪ್ರಮಾಣ ಹೆಚ್ಚಾಗಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ವಾಡಿಕೆಗಿಂತ ಶೇ.21ರಷ್ಟು ಹೆಚ್ಚುವರಿ ಮಳೆಯಾಗಿದೆ. ಈ ಎರಡು ತಿಂಗಳಲ್ಲಿ ವಾಡಿಕೆ ಮಳೆ 2251 ಮಿ.ಮೀ. ಆಗಿದ್ದು, ಈ ಬಾರಿ 2369 ಮಿ.ಮೀ. ಮಳೆಯಾಗಿದೆ.

ಜುಲೈ ತಿಂಗಳ 20 ದಿನಗಳಲ್ಲಿ ವಾಡಿಕೆ ಮಳೆ 864 ಮಿ.ಮೀ. ಗಿಂತ ಹೆಚ್ಚು 1440 ಮಿ.ಮೀ. ನಷ್ಟು ಅಂದರೆ ಶೇ.60ರಷ್ಟು ಹೆಚ್ಚುವರಿ ಮಳೆಯಾಗಿದೆ. ಕಳೆದ 7 ದಿನಗಳಲ್ಲಿ (ಜು.14-19)ಯೇ ಜಿಲ್ಲೆಯಲ್ಲಿ 807 ಮಿ.ಮೀ. ಮಳೆ ದಾಖಲಾಗಿದೆ.ಅಪಾಯದಂಚಿನಲ್ಲಿ 86 ಗ್ರಾಮಗಳುಜಿಲ್ಲೆಯಲ್ಲಿ ಪ್ರವಾಹದ ಅಪಾಯದಂಚಿನಲ್ಲಿರುವ 63 ಗ್ರಾ.ಪಂ.ಗಳ 86 ಗ್ರಾಮಗಳನ್ನು ಗುರುತಿಸಲಾಗಿದೆ. ಈ ಗ್ರಾಮಗಳಲ್ಲಿ 4000 ಕುಟುಂಬಗಳಿದ್ದು, 16,000 ಜನಸಂಖ್ಯೆ ಇದೆ. ಸಂತ್ರಸ್ತರ ಆಶ್ರಯಕ್ಕಾಗಿ ಒಟ್ಟು 116 ಕಾಳಜಿ ಕೇಂದ್ರಗಳನ್ನು ಸಿದ್ಧವಾಗಿಡಲಾಗಿದೆ.

ಈ ಬಾರಿ ಮಳೆಯ ಅಪಾಯಕ್ಕೆ ಸಿಲುಕಿದ 169 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಅವರಲ್ಲಿ 47 ಮಂದಿ ಕಾಳಜಿ ಕೇಂದ್ರಗಳಲ್ಲಿ ರಕ್ಷಣೆ ಪಡೆದಿದ್ದರೆ ಉಳಿದವರು ತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದು, ಈಗ ಎಲ್ಲರೂ ತಂತಮ್ಮ ಮನೆಗಳಿಗೆ ಮರಳಿದ್ದಾರೆ.