3 ತಿಂಗಳಲ್ಲಿ 5500 ಸಾರಿಗೆ ಬಸ್‌ ಸೇರ್ಪಡೆ

| Published : Dec 14 2023, 02:00 AM IST

ಸಾರಾಂಶ

ಮುಂದಿನ ವರ್ಷದ ಫೆಬ್ರವರಿ ಒಳಗಾಗಿ ಸಾರಿಗೆ ನಿಗಮಗಳಿಗೆ ಹೊಸದಾಗಿ 5500 ಬಸ್‌ ಸೇರ್ಪಡೆ: ರಾಮಲಿಂಗಾರೆಡ್ಡಿ

ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್‌

ಮುಂದಿನ ವರ್ಷದ ಫೆಬ್ರವರಿ ಒಳಗಾಗಿ ಸಾರಿಗೆ ನಿಗಮಗಳಿಗೆ ಹೊಸದಾಗಿ 5500 ಬಸ್‌ ಸೇರ್ಪಡೆ ಮಾಡಲಾಗುವುದು, ಜತೆಗೆ 9 ಸಾವಿರ ಕಂಡಕ್ಟರ್‌, ಮೆಕ್ಯಾನಿಕ್‌ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಬಿಜೆಪಿಯ ಶಶೀಲ್‌ ನಮೋಶಿ, ಕಾಂಗ್ರೆಸ್ಸಿನ ಉಮಾಶ್ರೀ ಅವರು ಕೇಳಿದ ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಅವರು, ಈಗಿರುವ ಜನಸಂಖ್ಯೆ ಪರಿಗಣಿಸಿದರೆ 35 ಸಾವಿರ ಬಸ್‌ಗಳನ್ನು ಸಾರಿಗೆ ನಿಗಮಗಳು ಹೊಂದಿರಬೇಕಿತ್ತು, ಆದರೆ ಕೇವಲ 23 ಸಾವಿರ ಬಸ್‌ಗಳು ಮಾತ್ರ ಇವೆ. ಕಳೆದ ನಾಲ್ಕು ವರ್ಷಗಳಲ್ಲಿ ಹೊಸ ಬಸ್‌ ಖರೀದಿಸಿಲ್ಲ. 13 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿವೃತ್ತಿಯಾದರೂ 7 ವರ್ಷಗಳಲ್ಲಿ ಹೊಸ ನೇಮಕಾತಿ ನಡೆದಿಲ್ಲ. ಹೀಗಾಗಿ ಅನೇಕ ಮಾರ್ಗಗಳ ಬಸ್‌ ಸಂಚಾರ ರದ್ದು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತಾವು ಸಚಿವರಾದ ನಂತರ ಹೊಸ ಬಸ್‌ಗಳ ಖರೀದಿ, ಹೊಸ ನೇಮಕಾತಿ ಮಾಡಲಾಗುತ್ತಿದೆ. ಬರುವ ಫೆಬ್ರವರಿ ನಂತರ ವ್ಯವಸ್ಥೆಯಲ್ಲಿ ಸುಧಾರಣೆಯಾಗಲಿದೆ ಎಂದರು.ಶಕ್ತಿ ಯೋಜನೆಯಿಂದ ಪ್ರಯಾಣ ಮಾಡುವ ಜನರ ಸಂಖ್ಯೆ ಜಾಸ್ತಿಯಾಗಿರುವುದರಿಂದ ಅದಕ್ಕೆ ತಕ್ಕಂತೆ ಬಸ್‌ ನಿಲ್ದಾಣಗಳಲ್ಲಿ ಆಸನ, ಶೌಚಾಲಯ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.ಬೀದರ್‌ಗೆ ಎಸಿ ಸ್ಲೀಪರ್‌ ಬಸ್‌:ಬೀದರ್‌-ಬೆಂಗಳೂರು ನಡುವೆ ಎಸಿ ಸ್ಲೀಪರ್‌ ಬಸ್‌ ಸೇವೆ ನೀಡಲಾಗುವುದು, ಈ ಎರಡು ನಗರಗಳ ಮಧ್ಯ ಖಾಸಗಿ ಬಸ್‌ ಸೇವೆ ಸಾಕಷ್ಟು ಇದ್ದಿದ್ದರೂ ಸಹ ಸಾರಿಗೆ ನಿಗಮದಿಂದ ಹೆಚ್ಚಿನ ಬಸ್‌ ಸೇವೆ ನೀಡಲಾಗುವುದು ಎಂದು ಕಾಂಗ್ರೆಸ್‌ನ ಅರವಿಂದಕುಮಾರ್ ಅರಳಿ, ಬಿಜೆಪಿಯ ಶಶೀಲ್‌ ನಮೋಶಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.