ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ವಿವಿಧೆಡೆ ನಡೆದಿದ್ದ ೨೧ ಕಳ್ಳತನ ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿ ೫೫೩ ಗ್ರಾಂ ಚಿನ್ನ, ೧.೩ ಕೆಜಿ ಬೆಳ್ಳಿ, ಪ್ಯಾಸೆಂಜರ್ ಆಟೋ, ಒಂದು ಬೈಕ್, ₹೨೦ ಸಾವಿರ ನಗದು ಸೇರಿ ₹೮೬ ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಆರಕ್ಷಕ ಪೊಲೀಸ್ ಅಧೀಕ್ಷಕ ಡಾ.ವಿ.ಜೆ.ಶೋಭಾರಾಣಿ ತಿಳಿಸಿದರು.ಮೈಸೂರು ತಾಲೂಕು ಹಾರೋಹಳ್ಳಿಯಲ್ಲಿ ಹಂದಿ ಸಾಕಾಣೆ ಮಾಡುತ್ತಿದ್ದ ಪಿ.ಗಣೇಶ (೩೦), ಟಿ.ನರಸೀಪುರ ತಾಲೂಕು ಚಾಮನಹಳ್ಳಿಯ ಸಿ.ಎನ್.ಮಂಜುನಾಥ (ಮಂಜ), ಮೈಸೂರು ತಾಲೂಕು ರಮ್ಮನಹಳ್ಳಿಯ ಸಾಗರ್, ದರ್ಶನ್, ಬೆಂಗಳೂರು ಸುಂಕದ ಕಟ್ಟೆ ಚಂದನ ಬಡಾವಣೆ ನಿವಾಸಿ ಕಾಂತರಾಜು ಅಲಿಯಾಸ್ ಮೋರಿ ಕಾಂತ ಬಂಧಿತ ಆರೋಪಿಗಳು.
ಪಾಂಡವಪುರ ತಾಲೂಕಿನ ಶಂಭೂನಹಳ್ಳಿ ರಸ್ತೆಯ ಅರಣ್ಯ ಇಲಾಖೆ ಕಚೇರಿ ಬಳಿ ದ್ವಿಚಕ್ರ ವಾಹನವನ್ನು ನಿಲ್ಲಿಸಿಕೊಂಡು ಅನುಮಾನಾಸ್ಪದವಾಗಿ ನಿಂತಿದ್ದಾಗ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ಶ್ರೀರಂಗಪಟ್ಟಣ ತಾಲೂಕು ಅರಕೆರೆ, ಕಗ್ಗಲೀಪುರ, ಗ್ರಾಮಾಂತರ ಪೊಲೀಸ್ ಠಾಣೆ, ಜಯಪುರ ಪೊಲೀಸ್ ಠಾಣೆ ಹಾಗೂ ಪಾಂಡವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ೯ ಪ್ರಕರಣಗಳಲ್ಲಿ ೨೭೪.೦೮ ಗ್ರಾಂ ತೂಕದ ಚಿನ್ನದ ಒಡವೆಗಳು, ೮೪೩ ಬೆಳ್ಳಿ ಸಾಮಾನುಗಳು, ₹೨೦ ಸಾವಿರ ನಗದು, ೧ ಆಟೋರಿಕ್ಷಾ, ಒಂದು ಬೈಕ್ ಸೇರಿ ₹೪೪.೮೫ ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದರು.ಮೈಸೂರು ತಾಲೂಕು ಹಾರೋಹಳ್ಳಿಯ ಪಿ.ಗಣೇಶ ತನ್ನ ಸ್ನೇಹಿತರಾದ ಮಂಜುನಾಥ, ಸಾಗರ, ದರ್ಶನ್ ಜೊತೆ ಸೇರಿಕೊಂಡು ಅರಕೆರೆ, ಮದ್ದೂರು, ಶ್ರೀರಂಗಪಟ್ಟಣ, ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಒಟ್ಟು ೨೧೨ ಗ್ರಾಂ ತೂಕದ ಚಿನ್ನದ ಆಭರಣಗಳು, ೭೮ ಗ್ರಾಂ ತೂಕದ ಬೆಳ್ಳಿಯ ಪದಾರ್ಥಗಳು ಸೇರಿ ₹೩೧.೧೩ ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅದೇ ರೀತಿ ಮೇಲುಕೋಟೆ, ಮದ್ದೂರು, ಪಾಂಡವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವೆಸಗಿದ್ದ ಕಾಂತರಾಜು ಅಲಿಯಾಸ್ ಮೋರಿ ಕಾಂತ (೫೦) ಎಂಬಾತನನ್ನು ಬಂಧಿಸಿ ೬೫.೮ ಗ್ರಾಂ ತೂಕದ ಚಿನ್ನದ ಒಡವೆಗಳು ಮತ್ತು ೩೭೯.೬ ಗ್ರಾಂ ಬೆಳ್ಳಿ ಸಾಮಗ್ರಿಗಳು ₹೯.೯೫ ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದರು.
ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಶ್ರೀರಂಗಪಟ್ಟಣ ಉಪವಿಭಾಗದ ಡಿವೈಎಸ್ಪಿ ಯು.ಡಿ.ಕೃಷ್ಣಕುಮಾರ್, ಉಪವಿಭಾಗದ ಅಪರಾಧ ಪತ್ತೆ ದಳದ ಉಸ್ತುವಾರಿ ಅಧಿಕಾರಿ ಎಚ್.ಪಿ.ಶರತ್‌ಕುಮಾರ್, ಪಿಎಸ್‌ಐ ಆರ್.ಬಿ.ಉಮೇಶ್ ಇದ್ದರು.
---೧೦೦ ಮೊಬೈಲ್ ಫೋನ್‌ಗಳ ವಶ
ಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯ ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಜಿಲ್ಲೆಯಾದ್ಯಂತ ಕಳ್ಳತನ ನಡೆಸಿದ್ದ ೧೦೦ ವಿವಿಧ ಮಾದರಿಯ ಮೊಬೈಲ್ ಫೋನ್‌ಗಳನ್ನು ಸಿಇಐಆರ್ ಪೋರ್ಟಲ್ ಮುಖಾಂತರ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಸೆಂಟ್ರಲ್ ಎಕ್ಯುಪ್‌ಮೆಂಟ್ ಐಡೆಂಟಿಟಿ ರಿಜಿಸ್ಟ್ರಾರ್ ತಂತ್ರಾಂಶದ ಸಹಾಯದಿಂದ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಜಿಲ್ಲಾದ್ಯಂತ ಕಳ್ಳತನ ಮತ್ತು ಕಾಣೆಯಾದ ಮೊಬೈಲ್‌ಗಳ ಪೈಕಿ ಬೆಂಗಳೂರಿನಿಂದ ೧೦, ಶಿವಮೊಗ್ಗ-೨, ಮೈಸೂರು ಜಿಲ್ಲೆ-೧೩, ಹಾಸನ ಜಿಲ್ಲೆ-೦೫, ಕೇರಳ ರಾಜ್ಯದ-೮, ಆಂಧ್ರ, ತಮಿಳುನಾಡು ರಾಜ್ಯಗಳಿಂದ ತಲಾ ೩ ಮೊಬೈಲ್ ಫೋನ್‌ಗಳು ಹಾಗೂ ಮಂಡ್ಯ ಜಿಲ್ಲೆಯಾದ್ಯಂತ ೫೯ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು ₹೨೩.೩೨ ಲಕ್ಷ ಮೌಲ್ಯದ ಮೊಬೈಲ್‌ಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಹಿಂದಿರುಗಿಸಲಾಯಿತು ಎಂದು ಹೇಳಿದರು.
ಸಾರ್ವಜನಿಕರು ಮೊಬೈಲ್ ಕಳೆದುಕೊಂಡರೆ ನಿಮ್ಮ ಮೊಬೈಲ್ ಕಳೆದುಕೊಂಡಲ್ಲಿ ಮೊಬೈಲ್‌ಗೆ ಸಂಬಂಧಪಟ್ಟ ದಾಖಲಾತಿ, ಪೊಲೀಸ್ ದೂರಿನ ಇ-ಲಾಸ್ಟ್ ಪ್ರತಿ ಪಡೆದು ಇ-ಲಾಗಿನ್‌ನಲ್ಲಿ ದೂರನ್ನು ದಾಖಲಿಸಬಹುದು.