ಕನ್ನಡಪ್ರಭ ವಾರ್ತೆ ಬೆಂಗಳೂರು
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಪ್ರಮಾಣ ಸಂಬಂಧ ಇತ್ತೀಚೆಗೆ ಸಚಿವ ಸಂಪುಟದಲ್ಲಿ ಕೈಗೊಂಡ ತೀರ್ಮಾನದಂತೆ, 400 ಬಿಂದುಗಳ ರೋಸ್ಟರ್ ಬಿಂದುಗಳನ್ನು ಅಂತಿಮಗೊಳಿಸಲಾಗಿದೆ. ಈ ಮೂಲಕ 56,432 ಹುದ್ದೆಗಳ ನೇಮಕಕ್ಕೆ ಹಾದಿ ಸುಗಮವಾಗಿದೆ.ರೋಸ್ಟರ್ ಬಿಂದುಗಳ ಕುರಿತ ವಿವರವಾದ ಪಟ್ಟಿಯನ್ನು ರಾಜ್ಯ ಸರ್ಕಾರ ಬುಧವಾರ ಬಿಡುಗಡೆ ಮಾಡಿದ್ದು, ಜತೆಗೆ ಎಸ್ಸಿ ಪ್ರವರ್ಗ ಎ, ಬಿ ಮತ್ತು ಸಿಗಳ ಒಳಮೀಸಲಾತಿ ಬಿಂದುಗಳನ್ನೂ ಗುರುತಿದೆ.
ಹೈಕೋರ್ಟ್ ಮಧ್ಯಂತರ ಆದೇಶದನ್ವಯ ಎಸ್ಸಿ ಮೀಸಲಾತಿಯನ್ನು ತಾತ್ಕಾಲಿವಾಗಿ ಶೇ.17ರಿಂದ 15ಕ್ಕೆ ಮೀಸಲಿರಿಸಿ ಒಳಮೀಸಲಾತಿ ಜಾರಿಗೊಳಿಸಲು ನಿರ್ಧರಿಸಿರುವ ಸರ್ಕಾರ, ಎಸ್ಸಿ ಮೀಸಲಾತಿಯನ್ನು ಮೂರು ಭಾಗಗಳಾಗಿ ವಿಭಾಗಿಸಿ ಪ್ರವರ್ಗ ‘ಎ’ಗೆ ಶೇ. 5.25, ‘ಬಿ’ಗೆ ಶೇ. 5.25 ಮತ್ತು ‘ಸಿ’ಗೆ ಶೇ. 4.5ರಷ್ಟು ಪಾಲನ್ನು ಈಗಾಗಲೇ ಮೀಸಲಿರಿಸಿ ಆದೇಶ ಮಾಡಿತ್ತು.ಜೊತೆಗೆ ಪ್ರವರ್ಗ ‘ಸಿ’ನಲ್ಲಿ ಸ್ಪೃಶ್ಯ ಸಮುದಾಯಗಳೊಂದಿಗೆ ಅಲೆಮಾರಿಗಳನ್ನೂ ಸೇರಿಸಿರುವುದರಿಂದ ಅಲೆಮಾರಿಗಳ ಪ್ರತಿರೋಧ ಶಮನ ಮಾಡಲು ಶೇ.4.5ರೊಳಗೆ ಶೇ.20ರಷ್ಟು ಪ್ರಾತಿನಿಧ್ಯ ಕೊಡುವುದಾಗಿ ಸರ್ಕಾರ ಹೇಳಿತ್ತು. ಇದೀಗ ರೋಸ್ಟರ್ ಬಿಂದು ಮತ್ತು ಒಳಮೀಸಲು ಬಿಂದುಗಳನ್ನು ಗುರುತಿಸಿ ಆದೇಶ ಮಾಡಿದೆ.
ಆದೇಶದ ಪ್ರಕಾರ, ‘ಪ್ರವರ್ಗ ‘ಎ’ಗೆ 1, 23, 41, 59, 81, 101, 115, 133, 153, 175, 193, 215, 227, 249, 267, 289, 309, 327, 341, 359, 381 ಬಿಂದುಗಳನ್ನು ಮೀಸಲಿರಿಸಲಾಗಿದೆ. ಅದೇ ರೀತಿ ‘ಪ್ರವರ್ಗ ಬಿ’ಗೆ 9, 27, 49, 67, 89, 109, 123, 141, 159, 181, 201, 223, 233, 253, 275, 293, 315, 333, 349, 367, 389 ಮತ್ತು ‘ಪ್ರವರ್ಗ ಸಿ’ಗೆ 15, 33, 53, 75, 93, 127, 149, 167, 189, 209, 241, 259, 281, 301, 323, 353, 375, 393 ಬಿಂದುಗಳನ್ನು ಮೀಸಲಿರಿಸಲಾಗಿದೆ. ಈ ಪೈಕಿ ಅಲೆಮಾರಿಗಳ ರೋಸ್ಟರ್ ಬಿಂದುಗಳು- 15, 127, 241, 353 ಆಗಿರುತ್ತವೆ.
ಅಲೆಮಾರಿಗಳಿಗೆ 4 ಬಿಂದುಗಳು:
ಸರ್ಕಾರ ಬಿಡುಗಡೆ ಮಾಡಿರುವ ಆದೇಶದ ‘ಅನುಬಂಧ-1’ರಲ್ಲಿ 400 ಬಿಂದುಗಳ ಸಾಮಾನ್ಯ ರೋಸ್ಟರ್ ಪಟ್ಟಿ ತೋರಿಸಲಾಗಿದ್ದು, ‘ಅನುಬಂಧ-2’ರಲ್ಲಿ ಬೃಹತ್ ನೇಮಕಾತಿಗೆ ಅನ್ವಯವಾಗುವಂತೆ ಎಸ್ಸಿ ಒಳಮೀಸಲು ಸ್ಥಾನಗಳನ್ನು ಗುರುತಿಸಲಾಗಿದೆ. ಪರಿಶಿಷ್ಟರಲ್ಲಿನ ಮೂರು ವರ್ಗಗಳಿಗೂ ಏಕಕಾಲದಲ್ಲಿ ಹುದ್ದೆಗಳು ಸಿಗದೆ ಹೋದಲ್ಲಿ, ಅಂಥ ನೇಮಕಾತಿ ಪ್ರಕ್ರಿಯೆ ವೇಳೆ ಪರಿಶಿಷ್ಟ ಜಾತಿ ಮೀಸಲಾತಿಯನ್ನು ‘ಎಸ್ಸಿ ಜನರಲ್’ ಎಂದು ಪರಿಗಣಿಸಲು ಸರ್ಕಾರ ನಿರ್ಧರಿಸಿದೆ.400 ಬಿಂದುಗಳ ರೋಸ್ಟರ್‌ನಲ್ಲಿ ಒಟ್ಟು 60 ಹುದ್ದೆಗಳು(ಶೇ.15) ಎಸ್ಸಿಗೆ ಮೀಸಲಾಗಿದ್ದು, ಅದರಲ್ಲಿ ಎ, ಬಿ, ಸಿ ಪ್ರವರ್ಗಗಳಿಗೆ ಸ್ಥಾನಗಳನ್ನು ಅನುಬಂಧ-2ರಲ್ಲಿ ಗುರುತು ಹಾಕಲಾಗಿದೆ. ಪ್ರವರ್ಗ ‘ಸಿ’ನಲ್ಲಿ 59 ಅಲೆಮಾರಿಗಳಿಗೆ ಶೇ.20ರಷ್ಟು ಹುದ್ದೆಗಳನ್ನು ಕಡ್ಡಾಯವಾಗಿ ನೀಡಬೇಕಿದೆ. ಆದ್ದರಿಂದ ಅಲೆಮಾರಿಗಳಿಗೆ ಮೀಸಲಾದ ಬಿಂದುಗಳನ್ನು ಚುಕ್ಕಿ (ಸ್ಟಾರ್) ಮೂಲಕ ಗುರುತಿಸಲಾಗಿದೆ. ಒಂದು ವೇಳೆ ಅಲೆಮಾರಿ ಅಭ್ಯರ್ಥಿಗಳು ಈ ಬಿಂದುಗಳಲ್ಲಿ ತುಂಬದೆ ಹೋದಲ್ಲಿ, ಈ ಸ್ಥಾನಗಳನ್ನು ‘ಸಿ’ ಗುಂಪಿನ ಇತರೆ ಜಾತಿಗಳಿಗೆ ವರ್ಗಾಯಿಸಲಾಗುತ್ತದೆ.
