ಡಿಮ್ಹಾನ್ಸ್‌ ಟೆಲಿ ಮಾನಸಕ್ಕೆ ವರ್ಷದಲ್ಲಿ 57 ಸಾವಿರ ಕರೆಗಳು!

| Published : May 18 2025, 01:10 AM IST

ಡಿಮ್ಹಾನ್ಸ್‌ ಟೆಲಿ ಮಾನಸಕ್ಕೆ ವರ್ಷದಲ್ಲಿ 57 ಸಾವಿರ ಕರೆಗಳು!
Share this Article
  • FB
  • TW
  • Linkdin
  • Email

ಸಾರಾಂಶ

ದೊಂದು ಟೆಲಿಫೋನ್‌ ಮೂಲಕವೇ ತಮ್ಮ ಮಾನಸಿಕ ಸಮಸ್ಯೆ ಹೇಳಿಕೊಂಡು ಕೌನ್ಸೆಲಿಂಗ್‌ ಪಡೆದುಕೊಳ್ಳುವ ವ್ಯವಸ್ಥೆ. ಧಾರವಾಡದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ದಿನದ 24 ಗಂಟೆಯೂ ಸಾರ್ವಜನಿಕರು, ಮಕ್ಕಳು ಯಾರೇ ಆದರೂ ಕರೆ ಮಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದು.

ಶಿವಾನಂದ ಗೊಂಬಿ

ಹುಬ್ಬಳ್ಳಿ: "ಟೆಲಿಮಾನಸ " ಮೂಲಕ ಕೌನ್ಸೆಲಿಂಗ್‌ ಮಾಡುವಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ನ್ನು ಧಾರವಾಡದ ಡಿಮ್ಹಾನ್ಸ್‌ ಹಿಂದಕ್ಕೆ ತಳ್ಳಿದೆ. ನಿಮ್ಹಾನ್ಸ್‌ಗೆ ವರ್ಷಕ್ಕೆ 54 ಸಾವಿರಕ್ಕೂ ಅಧಿಕ ಕರೆಗಳು ಬರುತ್ತಿದ್ದರೆ, ಡಿಮ್ಹಾನ್ಸ್‌ಗೆ ಕರೆಗಳ ಸಂಖ್ಯೆ 57 ಸಾವಿರದ ಗಡಿ ದಾಟಿದೆ. ಪ್ರತಿದಿನಕ್ಕೆ ಸುಮಾರು 156ಕ್ಕೂ ಅಧಿಕ ಕರೆಗಳು ಡಿಮ್ಹಾನ್ಸ್‌ನ ಟೆಲಿಮಾನಸಕ್ಕೆ ಬರುತ್ತಿವೆ.

ಏನಿದು ಟೆಲಿಮಾನಸ?: ಇದೊಂದು ಟೆಲಿಫೋನ್‌ ಮೂಲಕವೇ ತಮ್ಮ ಮಾನಸಿಕ ಸಮಸ್ಯೆ ಹೇಳಿಕೊಂಡು ಕೌನ್ಸೆಲಿಂಗ್‌ ಪಡೆದುಕೊಳ್ಳುವ ವ್ಯವಸ್ಥೆ. ಧಾರವಾಡದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ದಿನದ 24 ಗಂಟೆಯೂ ಸಾರ್ವಜನಿಕರು, ಮಕ್ಕಳು ಯಾರೇ ಆದರೂ ಕರೆ ಮಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದು. ಅದಕ್ಕೆ ಅಲ್ಲಿರುವ ಮಾನಸಿಕ ರೋಗ ತಜ್ಞರು, ಕೌನ್ಸೆಲರ್ಸ್‌ ಫೋನ್‌ ಮೂಲಕವೇ ಕೌನ್ಸೆಲಿಂಗ್‌ ಮಾಡುತ್ತಾರೆ. ಜತೆಗೆ ಅಗತ್ಯಬಿದ್ದರೆ ಭೌತಿಕವಾಗಿಯೂ ಆ ರೋಗಿಯನ್ನು ಕರೆಸಿ ಚಿಕಿತ್ಸೆ ನೀಡಲಾಗುತ್ತದೆ. ಅಗತ್ಯವಿಲ್ಲದಿದ್ದರೆ ಫೋನ್‌ ಮೂಲಕವೇ ಅವರ ಸಮಸ್ಯೆಯನ್ನು ಬಗೆಹರಿಸುತ್ತಾರೆ.

ಮಾನಸಿಕ ರೋಗ ಹೋಗಲಾಡಿಸುವ ಉದ್ದೇಶದಿಂದ ಟೆಲಿ ಮಾನಸ ಎಂಬುದನ್ನು ತೆರೆದಿದೆ. ಇದು ದಿನದ 24 ತಾಸುಗಳ ಕಾಲ ಕಾರ್ಯನಿರ್ವಹಿಸುತ್ತದೆ. 14461ಕ್ಕೆ ಡೈಲ್‌ ಮಾಡಿ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದಾಗಿದೆ. ಇದು ಉಚಿತ ಕರೆಯಾಗಿದೆ. ಧಾರವಾಡ ಡಿಮ್ಹಾನ್ಸ್‌ನಲ್ಲಿ ಇದಕ್ಕಾಗಿ ಪ್ರತ್ಯೇಕ ಕೊಠಡಿಯಿದೆ. 10 ಜನ ಕೌನ್ಸೆಲರ್ಸ್‌, 3 ಜನ ಮಾನಸಿಕ ರೋಗ ತಜ್ಞರು, ಉಳಿದಂತೆ ಕೆಲವೊಂದಿಷ್ಟು ಜನ ಡಾಟಾ ಆಪರೇಟರ್ಸ್‌ ಕೆಲಸ ಮಾಡುತ್ತಾರೆ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಟೆಲಿ ಮಾನಸಕ್ಕೆ ಕರೆಗಳು ಬರುತ್ತವೆ. ಬೆಂಗಳೂರಿನ ನಿಮ್ಹಾನ್ಸ್‌ನಲ್ಲೂ ಇದೇ ರೀತಿ ವ್ಯವಸ್ಥೆಯಿದೆ.

ಕಳೆದ ಒಂದು ವರ್ಷದಲ್ಲಿ (2024ರ ಏಪ್ರಿಲ್‌ 1ರಿಂದ 2025ರ ಮಾರ್ಚ್‌ 31) ನಿಮ್ಹಾನ್ಸ್‌ಗೆ 54,852 ಕರೆಗಳು ಬಂದಿದ್ದರೆ, ಧಾರವಾಡದ ಡಿಮ್ಹಾನ್ಸ್‌ ಸೆಂಟರ್‌ಗೆ 57,123 ಜನರು ಕರೆ ಮಾಡಿ ತಮ್ಮ ಮಾನಸಿಕ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಡಿಮ್ಹಾನ್ಸ್‌ ಉತ್ತರ ಕರ್ನಾಟಕದ ಜಿಲ್ಲೆಗಳು ಬರುತ್ತಿದ್ದರೆ, ನಿಮ್ಹಾನ್ಸ್‌ಗೆ ದಕ್ಷಿಣ ಕರ್ನಾಟಕ ಜಿಲ್ಲೆಗಳಿಂದ ಕರೆಗಳು ಬರುತ್ತವೆ.

ಹಾಗಂತ ಧಾರವಾಡ ಡಿಮ್ಹಾನ್ಸ್‌ಗೆ ಹೆಚ್ಚಿನ ಕರೆಗಳು ಬರುತ್ತಿರುವುದಕ್ಕೆ ಕಾರಣವೂ ಇದೆ. ಡಿಮ್ಹಾನ್ಸ್‌ ನ ಪ್ರಚಾರ, ಕೌನ್ಸೆಲಿಂಗ್‌ ಪಡೆದುಕೊಳ್ಳುವ ಸಲಹೆಯ ಭಿತ್ತಿಪತ್ರ, ಅಲ್ಲಲ್ಲಿ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಡಿಮ್ಹಾನ್ಸ್‌ ಹೆಚ್ಚೆಚ್ಚು ಮಾಡುತ್ತಿದೆ. ಈ ಕಾರಣದಿಂದ ಸಮಸ್ಯೆ ಹೇಳಿಕೊಂಡು ಇಲ್ಲಿಗೆ ಹೆಚ್ಚಿನ ಕರೆಗಳು ಬರುತ್ತಿವೆ. ಸಾಲ ಮಾಡಿ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಿದ್ದ ಸಾಕಷ್ಟು ಜನ, ರೈತರ ಮನಪರಿವರ್ತನೆ ಮಾಡಿದ ಕೀರ್ತಿ ಡಿಮ್ಹಾನ್ಸ್‌ಗೆ ಸಲ್ಲುತ್ತದೆ.

ಎಂತೆಂಥ ಕರೆಗಳು: ಆತ್ಮಹತ್ಯೆ ಮಾಡಿಕೊಳ್ಳಬೇಕೆಂದೆನಿಸುವುದು. ಕೌಟುಂಬಿಕ ಕಲಹ, ಪರೀಕ್ಷಾ ಭಯ, ಅಲ್ಕೋಹಾಲ್‌, ತಂಬಾಕು ಸೇರಿದಂತೆ ದುಶ್ಚಟ ಬಿಡಬೇಕೆಂದರೆ ಏನು ಮಾಡಬೇಕು. ಇಂತಹ ಹತ್ತಾರು ಪ್ರಶ್ನೆಗಳನ್ನು ಕೇಳಿಕೊಂಡು ಪರಿಹಾರ ಬಯಸಿ ಕರೆಗಳು ಬರುತ್ತಿರುತ್ತವೆ. ಅವುಗಳನ್ನು ನಿವಾರಿಸಲಾಗಿದೆ ಎಂದು ಡಿಮ್ಹಾನ್ಸ್‌ ಹೇಳುತ್ತದೆ.

ಒಟ್ಟಿನಲ್ಲಿ ಡಿಮ್ಹಾನ್ಸ್‌ನಲ್ಲಿನ ಟೆಲಿ ಮಾನಸದಿಂದ ಸಾಕಷ್ಟು ಜನ ಮಾನಸಿಕ ರೋಗದಿಂದ ಹೊರಬಂದಿರುವುದು ವಿಶೇಷ.

ಕಳೆದ ಒಂದು ವರ್ಷದಲ್ಲಿ ಟೆಲಿಮಾನಸ ನಿಮ್ಹಾನ್ಸ್‌ 54,852 ಕರೆಗಳು ಬಂದಿದ್ದರೆ, ಡಿಮ್ಹಾನ್ಸ್‌ನಲ್ಲಿನ ಸೆಂಟರ್‌ಗೆ 57,123 ಕರೆಗಳು ಬಂದಿವೆ. ಎಷ್ಟೋ ಜನರ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯಿಂದ ಹೊರಗೆ ತಂದಿದ್ದೇವೆ. ಮಕ್ಕಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸಿದ್ದೇವೆ ಎಂದು ಧಾರವಾಡ ಡಿಮ್ಹಾನ್ಸ್‌ ನಿರ್ದೇಶಕ ಡಾ. ಅರುಣಕುಮಾರ ಹೇಳಿದರು.