ಮಾರ್ಚ್‌ ಅಂತ್ಯದೊಳಗೆ ಸಾರಿಗೆ ನಿಗಮಕ್ಕೆ 5800 ನೂತನ ಬಸ್‌

| Published : Jan 09 2024, 02:00 AM IST / Updated: Jan 09 2024, 05:49 PM IST

ಮಾರ್ಚ್‌ ಅಂತ್ಯದೊಳಗೆ ಸಾರಿಗೆ ನಿಗಮಕ್ಕೆ 5800 ನೂತನ ಬಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರ ಹುಬ್ಬಳ್ಳಿಯ ಗೋಕುಲ್ ರಸ್ತೆಯ ಬಸ್ ನಿಲ್ದಾಣದಲ್ಲಿ ಬಸ್ ನಿಲ್ದಾಣ ನಿರ್ಮಾಣ, ಶಂಕು ಸ್ಥಾಪನೆ, ಹುಬ್ಬಳ್ಳಿ ಗೋಕುಲ್ ರಸ್ತೆಯ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ಶಂಕುಸ್ಥಾಪನೆ ಹಾಗೂ ಪಲ್ಲಕ್ಕಿ ಬಸ್‌ಗಳನ್ನು ಲೋಕಾರ್ಪಣೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರಾಜ್ಯಾದ್ಯಂತ ಶಕ್ತಿ ಯೋಜನೆಗೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸಾರಿಗೆ ಸಂಸ್ಥೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಮುಂಬರುವ ಮಾರ್ಚ್‌ ಅಂತ್ಯದೊಳಗೆ ಎಲ್ಲ ಸಾರಿಗೆ ಸಂಸ್ಥೆ ಸೇರಿ 5800 ಹೊಸ ಬಸ್‌ ನೀಡಲಾಗುತ್ತದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಸೋಮವಾರ ಇಲ್ಲಿನ ಗೋಕುಲ್ ರಸ್ತೆಯ ಬಸ್ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಧಾರವಾಡ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ, ಶಂಕು ಸ್ಥಾಪನೆ, ಹುಬ್ಬಳ್ಳಿ ಗೋಕುಲ್ ರಸ್ತೆಯ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಪಲ್ಲಕ್ಕಿ ಬಸ್‌ಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಶಕ್ತಿ ‌ಯೋಜನೆಯಿಂದ ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗಿದೆ. ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ 884 ಹೊಸ ಬಸ್ ಖರೀದಿಸಲಾಗುವುದು. ಈಗಾಗಲೇ 375 ಬಸ್‌ಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದರು.

ಬೇರೆ ಸಾರಿಗೆ ನಿಗಮಗಳಲ್ಲಿ ನೀಡಲಾಗುವ ಅಪಘಾತ ಪರಿಹಾರ ವಿಮೆಯಂತೆ ಈ ಸಂಸ್ಥೆಯಲ್ಲಿಯೂ ₹1 ಕೋಟಿ ಅಪಘಾತ ಪರಿಹಾರವಿಮೆ ಹೆಚ್ಚಿಸಬೇಕಾಗಿದೆ. 9 ಸಾವಿರ ಜನರಿಗೆ ಉದ್ಯೋಗ ನೀಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಕೋವಿಡ್‌ ಸಮಯದಲ್ಲಿ 3800 ಬಸ್‌ ಸಂಚಾರ ನಿಲ್ಲಿಸಿತ್ತು. ಇದರಿಂದಾಗಿ ಕೊಂಚ ತೊಂದರೆಯಾಗಿತ್ತು. ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಲಾಗಿದೆ ಎಂದರು.

ಹಳೆ ಬಸ್‌ ನೀಡಲ್ಲ: ಈ ಹಿಂದೆ ನಾನು ಸಾರಿಗೆ ಸಚಿವನಾಗಿದ್ದ ವೇಳೆಯೂ ಸಂಸ್ಥೆಗೆ ಹೊಸ ಬಸ್‌ಗಳನ್ನು ನೀಡಿದ್ದೇನೆಯೇ ಹೊರತು ಹಳೆ ಬಸ್‌ಗಳನ್ನು ನೀಡಿಲ್ಲ. ಆದರೆ, ಕಳೆದ ಬಾರಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಈ ಭಾಗಕ್ಕೆ ಹಳೆಯ ಬಸ್‌ಗಳನ್ನು ನೀಡಿದ್ದರು. 

ನಮ್ಮ ಸರ್ಕಾರವಿದ್ದಾಗ ಈ ರೀತಿಯ ಯಾವುದೇ ಘಟನೆಗಳು ನಡೆದಿಲ್ಲ. ಈ ಬಾರಿಯೂ ಇಲ್ಲಿನ ಜನರಿಗೆ ಗುಣಮಟ್ಟದ ಹೊಸ ಬಸ್ ಗಳನ್ನು ನೀಡುತ್ತೇನೆ. ಬೆಂಗಳೂರು ಹೊರತು ಪಡಿಸಿದರೆ ಹುಬ್ಬಳ್ಳಿಯ ಬಸ್ ನಿಲ್ದಾಣ ದೊಡ್ಡದಾಗಿದೆ. ಈ ಜಾಗವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದು ಭರವಸೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮಾತನಾಡಿ, ₹13 ಕೋಟಿ ವೆಚ್ಚದಲ್ಲಿ ಧಾರವಾಡ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ. ₹23 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣ ನವೀಕರಣಗೊಳಿಸಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.

ಇದೇ ವೇಳೆ ಸಾರಿಗೆ ಸ್ಪಂದನ ತಂತ್ರಾಂಶಕ್ಕೆ ಸಚಿವರು ಚಾಲನೆ ನೀಡಿದರು. ಅನುಕಂಪದ ಆಧಾರದ ಮೇಲೆ ನೇಮಕಮಾಡಿಕೊಳ್ಳಲಾದ 35 ಜನರಿಗೆ ನೇಮಕಾತಿ ಆದೇಶ ಪ್ರತಿ ನೀಡಲಾಯಿತು. ಸಂಸ್ಥೆಯಲ್ಲಿ 15 ವರ್ಷಗಳ ಅಪಘಾತ ರಹಿತ ಸೇವೆಗಾಗಿ ಅರ್ಹ ಚಾಲಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ವಿತರಿಸಿ ಗೌರವಿಸಲಾಯಿತು.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್.ಎಸ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಾಜಿ ಸಂಸದ ಐ.ಜಿ. ಸನದಿ, ಪಾಲಿಕೆಯ ಮೇಯರ್‌ ವೀಣಾ ಭರದ್ವಾಡ, ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಇದ್ದರು.

ಕಾಂಗ್ರೆಸ್‌-ಬಿಜೆಪಿ ಶಾಸಕರ ಜಟಾಪಟಿ: ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಕಾಂಗ್ರೆಸ್‌ ಶಾಸಕ ಎನ್.ಎಚ್. ಕೋನರೆಡ್ಡಿ ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ನಡುವೆ ಮಾತಿನ ಜಟಾಪಟಿಯಾದ ಘಟನೆ ನಡೆಯಿತು.

ಶಾಸಕರ ಎನ್‌.ಎಚ್‌. ಕೋನರಡ್ಡಿ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಸಾರಿಗೆ ಇಲಾಖೆಯನ್ನು ಯಾವುದೇ ರೀತಿಯಲ್ಲೂ ಅಭಿವೃದ್ಧಿ ಮಾಡಲಿಲ್ಲ. ಒಂದೇ ಒಂದು ಬಸ್ ಖರೀದಿಸಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆಗೆ ಸಮಸ್ಯೆಯಾಗಿದೆ. ́

ಬಿಜೆಪಿ ತನ್ನ ಅಧಿಕಾರದ ಅವಧಿಯಲ್ಲಿ ಕೆಲಸ ಮಾಡಿಲ್ಲ ಹಾಗಾಗಿ ಈಗ ವಿಪಕ್ಷದಲ್ಲಿದೆ. ಈ ಹಿಂದೆ ನಾವು ಕೈಗೊಂಡ ಅಭಿವೃದ್ಧಿ ಕೆಲಸ ನೆನಪಿನಲ್ಲಿಟ್ಟಿಕೊಂಡು ಮತದಾರರು ಈ ಬಾರಿ ನಮಗೆ ಆಡಳಿತ ನೀಡಿದ್ದಾರೆ ಎಂದರು.

ಬಳಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ವೇದಿಕೆಯ ಮೇಲೆಯೇ ಕೋನರಡ್ಡಿಗೆ ಟಾಂಗ್‌ ನೀಡಿದರು. ಇಡೀ ರಾಜ್ಯದಲ್ಲಿ ಜನ ನಿಮ್ಮನ್ನು ಕೈ ಹಿಡಿದಿರಬಹುದು, ಆಡಳಿತದಲ್ಲಿಯೂ ಕೂರಿಸಿರಬಹುದು. ಆದರೆ, ಸೆಂಟ್ರಲ್ ಕ್ಷೇತ್ರದಲ್ಲಿ ಜನ ಯಾರ ಕೈಹಿಡಿದ್ದಾರೆ, ಯಾರನ್ನು ಕೂರಿಸಿದ್ದಾರೆ ಎಂಬುದನ್ನು ನೆನಪಿಟ್ಟುಕೊಳ್ಳಿ ಸಾಕು. 

ಶಕ್ತಿ ಯೋಜನೆ ಜಾರಿಗೊಳಿಸಿರುವುದು ಅಭಿನಂದನಾರ್ಹ. ಆದರೆ, ಸರಿಯಾದ ಸಿದ್ಧತೆ ಇಲ್ಲದೆ ಜಾರಿಗೆ ತಂದಿರುವುದರಿಂದ ಸಮಸ್ಯೆಗೆ ಕಾರಣವಾಗಿದೆ. ಹಾಗಾಗಿ ಅದಕ್ಕೆ ಬೇಕಾದ ಸಮಸ್ಯೆ ಇತ್ಯರ್ಥಪಡಿಸಿ ಜನರಿಗೆ ಅನಕೂಲವಾಗುವಂತೆ ನೋಡಿಕೊಳ್ಳಿ ಎಂದರು.