ರಸ್ತೆ ಅಭಿವೃದ್ಧಿಗೆ 585 ಕೋಟಿ ಅನುಮೋದನೆ: ಜಯಚಂದ್ರ

| Published : Mar 17 2025, 12:32 AM IST

ಸಾರಾಂಶ

ಶಿರಾ-ಮಧುಗಿರಿ-ಬೈರೆನಹಳ್ಳಿ ಭಾಗದ 52.00 ಕಿ.ಮೀ. ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡೆಸಲು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ರೂ.1000 ಕೋಟಿಗಳಿಗೆ ಅನೂಮೋದನೆ ನೀಡಿದ್ದು, ಮೊದಲನೇ ಹಂತದಲ್ಲಿ ಶಿರಾ-ಬಡವನಹಲ್ಲಿ ಭಾಗದ 20.20ಕಿ.ಮೀ. ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ರು. 585.00 ಕೋಟಿಗೆ ಅನೂಮೋದನೆಗೊಂಡಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಶಿರಾ-ಮಧುಗಿರಿ-ಬೈರೆನಹಳ್ಳಿ ಭಾಗದ 52.00 ಕಿ.ಮೀ. ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡೆಸಲು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ರೂ.1000 ಕೋಟಿಗಳಿಗೆ ಅನೂಮೋದನೆ ನೀಡಿದ್ದು, ಮೊದಲನೇ ಹಂತದಲ್ಲಿ ಶಿರಾ-ಬಡವನಹಲ್ಲಿ ಭಾಗದ 20.20ಕಿ.ಮೀ. ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ರು. 585.00 ಕೋಟಿಗೆ ಅನೂಮೋದನೆಗೊಂಡಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಶಿರಾ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದೇ ನನ್ನ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ತಾಲೂಕಿಗೆ ಬೇಕಾದ ರಸ್ತೆ, ರೈಲ್ವೆ, ಕುಡಿಯುವ ನೀರು ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತೇನೆ. ಶಿರಾ ನಗರದಲ್ಲಿ ವಾಹನದಟ್ಟಣೆಯನ್ನು ನೀಗಿಸಲು ಹುಳಿಯಾರು ರಸ್ತೆಯಿಂದ ಮಧುಗಿರಿ ರಸ್ತೆ ಸಂಪರ್ಕಿಸಲು ಶಿರಾ ನಗರಕ್ಕೆ 3.70ಕಿ.ಮೀ ಉದ್ದದ ಬೈಪಾಸ್ ಪ್ರಸ್ತಾಪಿಸಲಾಗಿದ್ದು, ಎರಡನೇ ಹಂತದಲ್ಲಿ ಬಡವನಹಳ್ಳಿ-ಮಧುಗಿರಿ-ಬೈರೆನಹಳ್ಳಿ ಭಾಗದ 32.30 ಕೀ.ಮಿ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಡಿ.ಪಿ.ಆರ್ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲಿ ಸಲ್ಲಿಸಿ ಅನುಮೋದನೆ ಪಡೆಯಲಾಗುವುದು. ಈ ರಸ್ತೆ ಅಭಿವೃದ್ಧಿಯಿಂದಾಗಿ ದೇಶದ ಎರಡು ಮುಖ್ಯ ಹೆದ್ದಾರಿಗಳಾದ ರಾಹೆ.-48 ಮತ್ತು ರಾಹೆ 44ಗೆ ಉತ್ತಮ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಉತ್ತರ ಮತ್ತು ಮಧ್ಯ ಕರ್ನಾಟಕ ಭಾಗದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉತ್ತಮ ಹಾಗೂ ಪರ್ಯಾಯ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಉತ್ತರ ಮತ್ತು ಮಧ್ಯ ಕರ್ನಾಟಕ ಭಾಗದಿಂದ ಆಂಧ್ರಪ್ರದೇಶದ ತಿರುಪತಿಗೆ ಅತಿ ಸಮೀಪ ಹಾಗೂ ಉತ್ತಮ ಸಂಪರ್ಕ ದೊರಕಲಿದೆ. ಈ ಕಾಮಗಾರಿಯ ಅನುಮೋದನೆಗಾಗಿ ಸಹಕರಿಸಿದ ಲೋಕೋಪಯೋಗಿ ಸಚಿವರು ಸತೀಶ್ ಜಾರಕಿಹೊಳಿ, ತುಮಕೂರು ಸಂಸದರು ಹಾಗೂ ಕೇಂದ್ರ ಸಚಿವರಾದ ವಿ. ಸೋಮಣ್ಣ, ಚಿತ್ರದುರ್ಗ ಲೋಕಸಭಾ ಸದಸ್ಯರಾದ ಗೋವಿಂದ ಕಾರಜೋಳ ಹಾಗೂ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. ಈ ಬಾರಿ ಶಿರಾ ತಾಲೂಕಿನಲ್ಲಿ ಸರಿಯಾಗಿ ಮಳೆಯಾಗಿಲ್ಲ. ಸತತ ಆರು ತಿಂಗಳು ಹೇಮಾವತಿ ನೀರು ಹರಿಸಿದ ಪರಿಣಾಮ 45 ಬ್ಯಾರೇಜ್ ಹಾಗೂ 35 ಕೆರೆಗಳು ತುಂಬಿವೆ. ಮಲೆನಾಡಿನಲ್ಲಿಯೇ ಕುಡಿಯಲು ನೀರಿಲ್ಲ. ಇಂತಹ ಸಮಯದಲ್ಲಿ ಶಿರಾ ತಾಲೂಕಿನಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದರು. ರಾ.ಹೆ. 544ಇ ಕರ್ನಾಟಕ-ಆಂಧ್ರಪ್ರದೇಶ ಗಡಿಯಿಂದ ಶಿರಾ ನಗರದವರೆಗೆ ಆಂಧ್ರಪ್ರದೇಶದ ಕೋಡಿಕೊಂಡ, ಲೇಪಾಕ್ಷಿ, ಮಡಕಶಿರಾ, ರೊಳ್ಳ, ಅಗಳಿಯಿಂದ ಕರ್ನಾಟಕ ಗಡಿಯವರೆಗೆ ಸುಮಾರು 103.200 ಕಿ.ಮೀ. ದ್ವಿಪಥ ರಸ್ತೆಯನ್ನು ಅಭಿವೃದ್ಧಿಪಡಿಸಲು ಆಂಧ್ರ ಗಡಿಯಿಂದ ಶಿರಾ ನಗರದವರೆಗೆ 13.50 ಕಿ.ಮೀ. ಉದ್ದದ ರಸ್ತೆಯನ್ನು ಸುಮಾರು 166.58 ಕೋಟಿ ರೂಗೆ ಅನುಮೋದನೆಯಾಗಿದ್ದು, ಕಾಮಗಾರಿ ಪ್ರಾರಂಭವಾಗಿದ್ದು ಈ ವರ್ಷದ ಸೆಪ್ಟಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ಈ ಸಂದರ್ಭದಲ್ಲಿ ರಾಹೆ ಕಾಮಗಾರಿಗಳ ಅಧಿಕಾರಿಗಳಾದ ಲಕ್ಷ್ಮೀಕಾಂತ್, ಶಿವಕುಮಾರ್, ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮೂದ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್‌ ಕುಮಾರ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಅಂಜನ್ ಕುಮಾರ್, ತಾಲೂಕು ಅಧ್ಯಕ್ಷ ಮಣಿಕಂಠ ಸೇರಿದಂತೆ ಹಲವರು ಹಾಜರಿದ್ದರು.