ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮಾಜಿ ಸಂಸದ, ಬಿಇಟಿ ಟ್ರಸ್ಟ್ ಸಂಸ್ಥಾಪಕ ದಿ.ಡಾ.ಜಿ.ಮಾದೇಗೌಡರ 5ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸಮೀಪದ ಹನುಮಂತನಗರ ಶಾಂತಿ ವನದ ಸಮಾಧಿಯಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು.

ದಿ.ಡಾ.ಜಿ.ಮಾದೇಗೌಡ ಮತ್ತು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅಭಿಮಾನಿಗಳು ಹಾಗೂ ಭಾರತೀ ಎಜುಕೇಷನ್ ಟ್ರಸ್ಟ್‌ನ ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದ ವತಿಯಿಂದ ಗೌಡರ ಸಮಾಧಿ ಮತ್ತು ಭಾವಚಿತ್ರಕ್ಕೆ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು.

ಈ ವೇಳೆ ಗೌಡರ ಸಮಾಧಿಗೆ ಪೂಜೆ ಸಲ್ಲಿಸಿದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ನನ್ನ ತಂದೆ ರೈತ ಪರ ಹೋರಾಟಗಳನ್ನು ಮಾಡುತ್ತಲೇ ಜೀವ ಸವೆಸಿದರು. ಅನ್ಯಾಯದ ವಿರುದ್ಧ ಆಳುವ ಸರ್ಕಾರಗಳನ್ನು ಎಚ್ಚರಿಸಲು ಸಿಡಿದೇಳುತ್ತ ರೈತ, ಬಡವರ ಪರ ಧ್ವನಿ ಎತ್ತಿ ನ್ಯಾಯ ಕೊಡಿಸುತ್ತಿದ್ದರು. ಹೋರಾಟಗಳನ್ನು ಮಾಡುತ್ತಾ ಕೊನೆಯುಸಿರೆಳೆದಿದ್ದು ಅವರು ಮಾಡಿರುವ ಸತ್ಕಾರ್ಯಗಳು ಇನ್ನೂ ಜೀವಂತವಾಗಿ ಉಳಿದಿವೆ ಎಂದು ಸ್ಮರಿಸಿದರು.

ಹಿರಿಯ ಗಾಂಧಿವಾದಿಯಾಗಿ ಗಾಂಧಿ ತತ್ವಗಳನ್ನು ಅನುಸರಿಸುತ್ತ ಎಚ್.ಮಲ್ಲಿಗೆರೆ ಗ್ರಾಮದಲ್ಲಿ ಗಾಂಧಿ ಗ್ರಾಮ ಮಾಡಲು ಯೋಜನೆ ರೂಪಿಸಿದರು. ಅವರ ಕನಸು ಈಡೇರಿಸುವ ಹೊಣೆ ನನ್ನ ಹೆಗಲ ಮೇಲಿದೆ. ಅದಕ್ಕಾಗಿ ತಂಡ ಕಟ್ಟಿ ಕೊಂಡು ಸಹಜ ಬೇಸಾಯ ಸೇರಿದಂತೆ ಹಲವು ರೈತ ಉಪಯೋಗಿ ಕೆಲಸಗಳನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.


ಗೌಡರು ಸಾತ್ವಿಕ ಸ್ವಭಾವದ ವ್ಯಕ್ತಿ. ಯಾರನ್ನು ಗದರಿಸಿದರೂ ಸಹ ಅದರ ಹಿಂದೆ ಪ್ರೀತಿ ಇರುತ್ತಿತ್ತು. ಅಧಿಕಾರದ ಆಸೆಗೆ ಸಿಲುಕದೆ ಹೋರಾಟದ ಕಿಚ್ಚನ್ನು ಇಳಿವಯಸ್ಸಿನವರೆಗೂ ರೂಢಿಸಿಕೊಂಡು ಬಂದವರು. ತಂದೆಯ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದು, ಅವರೇ ನನ್ನ ಕೆಲಸಗಳಿಗೆ ಸ್ಫೂರ್ತಿಯಾಗಿದ್ದಾರೆ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾನು ಮತ್ತು ನನ್ನ ಪುತ್ರ ಆಶಯ್ ನಡೆಯುತ್ತಿದ್ದೇವೆ ಎಂದು ಭಾವುಕರಾದರು.

ಹಳ್ಳಿಗಾಡಿನ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಸ್ಥಾಪಿಸಿದ ಭಾರತೀ ವಿದ್ಯಾಸಂಸ್ಥೆ ಶರವೇಗದಲ್ಲಿ ಬೆಳೆಯುತ್ತಿದೆ. ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ಸಂಸ್ಥೆಯನ್ನು ತಂದೆಯ ಆಶಯದಂತೆ ಸಮರ್ಥವಾಗಿ ಮುನ್ನಡೆಸುತ್ತ ಮತ್ತಷ್ಟು ಹೊಸ ಕೋರ್ಸ್‌ಗಳನ್ನು ತಂದು ಅವರ ಕನಸು ನನಸು ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಜಿ.ಮಾದೇಗೌಡ ಪುಣ್ಯಸ್ಮರಣೆಯ ಅಂಗವಾಗಿ ಹನುಮಂತನಗರದಲ್ಲಿ ಶಾಂತಿ ವನದ ಸ್ಮಾರಕಕ್ಕೆ ಆಗಮಿಸಿದ ಕುಟುಂಬಸ್ಥರು ಹಾಗೂ ನೂರಾರು ಅಭಿಮಾನಿಗಳು ಗೌಡರ ಪುಣ್ಯಸ್ಮರಣೆಯನ್ನು ನೆರವೇರಿಸಿದರು. ಸ್ಮಾರಕದ ಸ್ಥಳಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ, ಬಿಇಟಿ ಟ್ರಸ್ಟ್ ಚೇರ್‍ಮನ್ ಮಧು ಜಿ.ಮಾದೇಗೌಡ, ಪತ್ನಿ ಬಿಂದು ಮಧು ಮಾದೇಗೌಡ, ಮಿಮ್ಸ್ ಮಾಜಿ ನಿರ್ದೇಶಕ ಜಿ.ಎಂ.ಪ್ರಕಾಶ್, ಮೊಮ್ಮಗ ಆಶಯ್ ಮಧು ಸೇರಿದಂತೆ ಕುಟುಂಬಸ್ಥರು ಪುಷ್ಪಾರ್ಚನೆ ನೆರವೇರಿಸಿ ಪೂಜೆ ಸಲ್ಲಿಸಿದರು.

ಹಲವು ಮುಖಂಡರು, ಅಭಿಮಾನಿಗಳು ಮತ್ತು ಭಾರತೀ ಎಜುಕೇಷನ್ ಟ್ರಸ್ಟ್‌ನ ಸಿಬ್ಬಂದಿ ಆಗಮಿಸಿ ಗೌಡರಿಗೆ ವಿಶೇಷ ನಮನ ಸಲ್ಲಿಸಿದರು. ಭಾರತೀ ಎಜುಕೇಷನ್ ಟ್ರಸ್ಟ್‌ ಅಂಗ ಸಂಸ್ಥೆಯಾದ ಭಾರತೀ ವಸತಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಗೌಡರ ಸಮಾಧಿಗೆ ನಮಿಸಿದರು.

ಈ ವೇಳೆ ಭಾರತೀ ಎಜುಕೇಷನ್ ಟ್ರಸ್ಟ್ ಸಿಇಒ ಆಶಯ್‌ಮಧು, ಕಾರ್ಯದರ್ಶಿಗಳಾದ ಬಿ.ಎಂ.ನಂಜೇಗೌಡ, ಗುರುದೇವರಹಳ್ಳಿ ಸಿದ್ದೇಗೌಡ, ಟ್ರಸ್ಟಿ ಕಾರಕಹಳ್ಳಿ ಬಸವೇಗೌಡ, ತಾಪಂ ಮಾಜಿ ಸದಸ್ಯರಾದ ವೈ.ಎಂ.ಬೋರೇಗೌಡ, ಬಿ. ಗಿರೀಶ್, ಛತ್ರದಹೊಸಹಳ್ಳಿ ಭರತೇಶ್, ಗ್ರಾಪಂ ಮಾಜಿ ಸದಸ್ಯರಾದ ಕೆ.ಟಿ.ಶ್ರೀನಿವಾಸ್, ಕೆ.ವಿ.ಶ್ರೀನಿವಾಸ್, ಪುಟ್ಟರಾಮು, ವಿನಯ್ ಹೊನ್ನೇಗೌಡ, ಮಿಥುನ್, ಮುಖಂಡರಾದ ಕರಡಕೆರೆ ಹನುಮಂತೇಗೌಡ, ಕೆ.ಎಸ್.ಗೌಡ, ಮದ್ದೂರು ಅವಿನಾಶ್, ಕರಡಕೆರೆ ಮೊಳ್ಳೇಲಿಂಗೇಗೌಡ, ಅಣ್ಣೂರು ರವೀಂದ್ರಬಾಬು, ಮಾದರಹಳ್ಳಿ ಕೃಷ್ಣ, ಹಳ್ಳಿಕೆರೆ ರಾಮಲಿಂಗೇಗೌಡ, ಕಾರಕಹಳ್ಳಿ ಸ್ವರೂಪ್, ಅಣ್ಣೂರು ಸಿದ್ದಪ್ಪ, ಪ್ರಸನ್ನ ಕಳ್ಳಿಮೆಳ್ಳೆದೊಡ್ಡಿ, ಕೆ.ಕಬ್ಬಾಳಯ್ಯ ಸೇರಿ ಭಾರತೀ ಶಿಕ್ಷಣ ಸಂಸ್ಥೆ ಮುಖ್ಯಸ್ಥರು ಹಲವರಿದ್ದರು.

--

ನನ್ನ ತಾತ ಜಿ.ಮಾದೇಗೌಡರ ನೆಚ್ಚಿನ ತಾಣವಾಗಿದ್ದ ಹನುಮಂತನಗರದ ಪುಣ್ಯಭೂಮಿಯಲ್ಲಿ ಲೀನವಾಗಿರುವ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಅವರ ಹೋರಾಟ ಮತ್ತು ರಾಜಕೀಯ ಸೇರಿದಂತೆ ಗೌಡರ ಬದುಕಿನ ಚಿತ್ರಣಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಮ್ಯೂಸಿಯಂ ನಿರ್ಮಾಣಕ್ಕೆ ಕಾರ್ಯಯೋಜನೆ ರೂಪಿಸಲಾಗಿದೆ.

ಆಶಯ್‌ ಮಧು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಬಿಇಟಿ ಟ್ರಸ್ಟ್, ಕೆ.ಎಂ.ದೊಡ್ಡಿ