ಕನ್ನಡಪ್ರಭ ವಾರ್ತೆ ಹಾಸನ ನಗರವನ್ನು ಸುಗಮ ಸಂಚಾರಕ್ಕೆ ಅನುಕೂಲವಾಗಿಸುವ ಹಾಗೂ ಪಾದಚಾರಿಗಳ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ನಗರ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿ ನಡೆಸಲಾಗುತ್ತಿದ್ದ ಗೂಡಂಗಡಿ, ತಳ್ಳುಗಾಡಿ ಹಾಗೂ ತಾತ್ಕಾಲಿಕ ವ್ಯಾಪಾರ ಮಳಿಗೆಗಳ ತೆರವು ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲೊಂದಾದ ಎಂ.ಜಿ. ರಸ್ತೆ, ತರಬೇತಿ ಕೇಂದ್ರದ ಮುಂಭಾಗ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅತಿಕ್ರಮಣ ತೆರವುಗೊಳಿಸಲಾಗಿದ್ದು, ಸಾರ್ವಜನಿಕರಿಂದ ಈ ಕ್ರಮಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕಳೆದ ಹಲವು ವರ್ಷಗಳಿಂದ ಪಾದಚಾರಿ ಮಾರ್ಗಗಳು ವ್ಯಾಪಾರ ಮಳಿಗೆಗಳು, ಜಾಹೀರಾತು ಫಲಕಗಳು ಮತ್ತು ವಿವಿಧ ತಾತ್ಕಾಲಿಕ ನಿರ್ಮಾಣಗಳಿಂದ ಸಂಪೂರ್ಣ ಆವರಿಸಿಕೊಂಡಿದ್ದವು. ಇದರಿಂದ ಪಾದಚಾರಿಗಳು ರಸ್ತೆ ಮೇಲೆಯೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ವಾಹನ ದಟ್ಟಣೆ ಹಾಗೂ ಅಪಘಾತಗಳ ಅಪಾಯ ಹೆಚ್ಚಾಗಿತ್ತು. ಶಾಲಾ ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ವಿಶೇಷ ಚೇತನರು ಸಂಚಾರ ನಡೆಸಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಯೋಜಿತ ರೀತಿಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ಕೈಗೊಂಡಿದ್ದು, ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುತ್ತಿದ್ದಾರೆ.ಈ ಕಾರ್ಯಾಚರಣೆಯಿಂದ ನಗರದಲ್ಲಿ ವಾಹನ ಸಂಚಾರ ಸುಗಮವಾಗುವ ಜೊತೆಗೆ ಪಾದಚಾರಿಗಳಿಗೂ ಸುರಕ್ಷಿತವಾಗಿ ಓಡಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ, ಈ ಕ್ರಮದಿಂದ ದಿನನಿತ್ಯದ ವ್ಯಾಪಾರವನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿರುವ ಸಣ್ಣ ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿರುವುದು ಸಹ ಸತ್ಯ. ಅನೇಕ ಕುಟುಂಬಗಳು ರಸ್ತೆ ಬದಿ ವ್ಯಾಪಾರವನ್ನೇ ನಂಬಿಕೊಂಡಿದ್ದು, ಏಕಾಏಕಿ ತೆರವು ಕಾರ್ಯಾಚರಣೆ ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ಸ್ಥಳದಲ್ಲಿ ಪರ್ಯಾಯ ವ್ಯಾಪಾರ ವಲಯವನ್ನು ಗುರುತಿಸಿ ಮೂಲಸೌಕರ್ಯಗಳೊಂದಿಗೆ ಅವಕಾಶ ಕಲ್ಪಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಈಗಾಗಲೇ ಜಿಲ್ಲಾಡಳಿತ ಪರ್ಯಾಯ ಸ್ಥಳ ಕಲ್ಪಿಸುವ ಭರವಸೆ ನೀಡಿದ್ದು, ಅದನ್ನು ಶೀಘ್ರದಲ್ಲೇ ಜಾರಿಗೆ ತರಬೇಕೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ನಗರದ ಸೌಂದರ್ಯ ಹಾಳುಮಾಡುವ ಹಾಗೂ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸುವ ಜಾಹೀರಾತು ಫಲಕಗಳು, ಅನಧಿಕೃತ ನಾಮಫಲಕಗಳು ಮತ್ತು ದೊಡ್ಡ ಗಾತ್ರದ ಬೋರ್ಡ್ಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಕೆಲವು ಕಡೆ ಅಂಗಡಿಗಳ ಮುಂದೆ ಅಳವಡಿಸಿರುವ ಬೃಹತ್ ಫಲಕಗಳು ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದರಿಂದ ಅವುಗಳನ್ನು ತೆರವುಗೊಳಿಸುವ ಅಗತ್ಯವಿದೆ ಎಂದು ನಾಗರಿಕರು ತಿಳಿಸಿದ್ದಾರೆ.ಇದೇ ವೇಳೆ ಸಾರ್ವಜನಿಕರೂ ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದನ್ನು ತಪ್ಪಿಸಬೇಕು. ಪಾರ್ಕಿಂಗ್ ನಿಯಮಗಳನ್ನು ಪಾಲಿಸುವ ಮೂಲಕ ಆಡಳಿತದ ಕ್ರಮಕ್ಕೆ ಸಹಕಾರ ನೀಡಿದರೆ ಮಾತ್ರ ನಗರದಲ್ಲಿ ಶಾಶ್ವತ ಸಂಚಾರ ವ್ಯವಸ್ಥೆ ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ನಗರದ ಅಭಿವೃದ್ಧಿ ಎಂದರೆ ಕೇವಲ ರಸ್ತೆ ನಿರ್ಮಾಣವಲ್ಲ. ಸಾರ್ವಜನಿಕರಿಗೆ ಸುರಕ್ಷಿತ, ಸ್ವಚ್ಛ ಮತ್ತು ವ್ಯವಸ್ಥಿತ ವಾತಾವರಣ ಕಲ್ಪಿಸುವುದೂ ಆಗಿದೆ. ಅತಿಕ್ರಮಣ ತೆರವು ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಬೇಕು. ಅದೇ ವೇಳೆ ಜೀವನೋಪಾಯ ಕಳೆದುಕೊಳ್ಳುತ್ತಿರುವ ಸಣ್ಣ ವ್ಯಾಪಾರಿಗಳ ಹಿತವನ್ನೂ ಕಾಪಾಡುವ ಮಾನವೀಯ ದೃಷ್ಟಿಕೋನದೊಂದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ಮಾತ್ರ ಈ ಕಾರ್ಯಾಚರಣೆ ಸಂಪೂರ್ಣ ಯಶಸ್ವಿಯಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಈ ಸಣ್ಣ ವ್ಯಾಪಾರಸ್ಥರ ಗೂಡಂಗಡಿ ತೆರವುಗೊಂಡ ಹಿನ್ನೆಲೆಯಲ್ಲಿ ದೊಡ್ಡ ಅಂಗಡಿ, ಹೋಟೆಲ್ ವ್ಯಾಪಾರ ಸೇರಿದಂತೆ ಇತರೆ ವ್ಯಾಪಾರದಲ್ಲಿ ಏರಿಕೆ ಕಂಡಿದೆ. ಒಂದು ಕಡೆ ಇದಾದರೇ ಇನ್ನೊಂದು ಕಡೆ ದಿನನಿತ್ಯ ಸಣ್ಣ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದ ವ್ಯಾಪಾರಸ್ಥರ ಬಾಳು ಹೇಳ ತೀರದು. ಇವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಪಾದಚಾರಿ ಮಾರ್ಗ ಅತಿಕ್ರಮಣ ತೆರವಿಗೆ ವೇಗ
ಜಾಹೀರಾತು ಫಲಕಗಳು ಮತ್ತು ವಿವಿಧ ತಾತ್ಕಾಲಿಕ ನಿರ್ಮಾಣಗಳಿಂದ ಸಂಪೂರ್ಣ ಆವರಿಸಿಕೊಂಡಿದ್ದವು. ಇದರಿಂದ ಪಾದಚಾರಿಗಳು ರಸ್ತೆ ಮೇಲೆಯೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ವಾಹನ ದಟ್ಟಣೆ ಹಾಗೂ ಅಪಘಾತಗಳ ಅಪಾಯ ಹೆಚ್ಚಾಗಿತ್ತು. ಶಾಲಾ ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ವಿಶೇಷ ಚೇತನರು ಸಂಚಾರ ನಡೆಸಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಯೋಜಿತ ರೀತಿಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ಕೈಗೊಂಡಿದ್ದು, ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುತ್ತಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.