ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ ಜನರು ಹೊಸ ವರ್ಷವನ್ನು ವಿಭಿನ್ನವಾಗಿ ಸ್ವಾಗತಿಸಿದರೇ, ಮದ್ಯ ಪ್ರಿಯರಂತೂ ದಾಖಲೆ ಬರೆಯುವ ಮೂಲಕ ವರ್ಷಾಚರಣೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ₹6.38 ಕೋಟಿ ಮೌಲ್ಯದ ಮದ್ಯ ಮಾರಾಟವಾಗುವ ಮೂಲಕ ದಾಖಲೆ ಬರೆದಿದ್ದಾರೆ.ಜಿಲ್ಲೆಯ ಜಮಖಂಡಿ, ಮುಧೋಳ, ಬಾದಾಮಿ, ತೇರದಾಳ, ಹುನಗುಂದ, ಗುಳೇದಗುಡ್ಡ, ಇಳಕಲ್ಲ, ರಬಕವಿ-ಬನಹಟ್ಟಿ ಸೇರಿದಂತೆ ಜಿಲ್ಲಾದ್ಯಂತ ಗ್ರಾಮೀಣ ಭಾಗದಲ್ಲೂ ಹೊಸ ವರ್ಷದ ಪಾರ್ಟಿ ಜೋರಾಗಿತ್ತು. ಜಿಲ್ಲೆಯಲ್ಲಿ ಡಿಸೆಂಬರ್ ಒಂದೇ ದಿನ 17,185 ಮದ್ಯದ ಬಾಕ್ಸ್ (ಐಎಂಎಲ್) ಮಾರಾಟವಾಗಿರುವುದೇ ಇದಕ್ಕೆ ಸಾಕ್ಷಿ.ಡಿ.31 ರಂದು ಲಿಕ್ಕರ್ (ಐಎಂಎಲ್) ಹಾಗೂ ಬಿಯರ್ ಮಾರಾಟಕ್ಕೆ ಎರಡು, ಮೂರು ಪಟ್ಟು ಹೆಚ್ಚಳಗೊಂಡಿದೆ. ಒಂದು ಕಡೆಗೆ ಮದ್ಯ ಹಾಗೂ ಬಿಯರ್ ಬೆಲೆ ಏರಿಕೆಯಿಂದ ಜನರು ವಿಶೇಷವಾಗಿ ಎಣ್ಣೆ ಪಾರ್ಟಿಗಳ ಮೂಲಕ ಹೊಸ ವರ್ಷಾಚಾರಣೆ ಸಂಭ್ರಮಿಸಲು ಹೋಗಲ್ಲ ಅಂತ ಭಾವಿಸಲಾಗಿತ್ತು. ಆದರೆ, ಅದರ ಪರಿಣಾಮ ಮಾತ್ರ ಎಲ್ಲೂ ಕಾಣದಂತಾಗಿದೆ.2023 ಡಿಸೆಂಬರ್ 31 ರಂದು ಮದ್ಯ 3,736 ಬಾಕ್ಸ್ ₹1.67 ಕೋಟಿ, ಹಾಗೂ ಬಿಯರ್ 2,226 ಬಾಕ್ಸ್ ₹41 ಲಕ್ಷ ಸೇರಿ ಒಟ್ಟು ₹2.08 ಕೋಟಿ ಮದ್ಯದ ವಹಿವಾಟು ನಡೆದಿತ್ತು. ಅದೇ 2024ರ ಡಿಸೆಂಬರ್ 31 ರಂದು ₹5.30 ಕೋಟಿ 11,520 ಮದ್ಯ ಹಾಗೂ ₹1.08 ಕೋಟಿ ಬೆಲೆಯ 5,665 ಬಾಕ್ಸ್ ಬಿಯರ್ ಸೇರಿ ಒಟ್ಟು ₹6.38 ಕೋಟಿ ರೂ. ಮಾರಾಟವಾಗಿದೆ. ಅಂದರೇ 2023 ಡಿಸೆಂಬರ್ ಹಾಗೂ 2024 ಡಿಸೆಂಬರ್ 31 ಕ್ಕೆ ಹೋಲಿಕೆ ಮಾಡಿದರೆ ₹4.3 ಕೋಟಿ ವಹಿವಾಟು ಹೆಚ್ಚಳಗೊಂಡಿದೆ.ಅಬಕಾರಿ ಡಿಸಿ ನೇತೃತ್ವದಲ್ಲಿ ಜಿಲ್ಲೆಯ ಅಬಕಾರಿ ತಂಡ ಕಾಲ ಕಾಲಕ್ಕೆ ಅಕ್ರಮ ಮದ್ಯ ಮಾರಾಟ ಹಾಗೂ ಕಳ್ಳ ಬಟ್ಟೆಯ ಸ್ಥಳಗಳ ಮೇಲೆ ದಾಳಿ ಮಾಡುವ ಮೂಲಕ ಅಕ್ರಮ ಮದ್ಯಕ್ಕೆ ಅವಕಾಶ ನೀಡಿಲ್ಲ. ಈ ವರ್ಷ ಇದು ಸಹ ಮದ್ಯ ಮಾರಾಟವಾಗಿ ರಾಜ್ಯ ಸರ್ಕಾರಕ್ಕೆ ರಾಜ್ಯಸ್ವ ಬರುವುದರಲ್ಲಿ ಇದರ ಪಾತ್ರ ಸಹ ಪ್ರಮುಖವಾಗಿದೆ.