ಎಂ.ಅಫ್ರೋಜ್ ಖಾನ್
ಕನ್ನಡಪ್ರಭ ವಾರ್ತೆ ರಾಮನಗರರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ‘ಗೃಹಲಕ್ಷ್ಮಿ’ ಯೋಜನೆಯ ಫಲಾನುಭವಿಗಳಲ್ಲಿ ಮೃತರಾದವರನ್ನು ಗುರುತಿಸುವ ಕಾರ್ಯ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಈವರೆಗೆ 6,624 ಮೃತರ ಖಾತೆಗೆ ಜಮೆ ಆಗಿರುವುದು ಪತ್ತೆಯಾಗಿದೆ.
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ₹2 ಸಾವಿರ ಮೊತ್ತವನ್ನು ಸರ್ಕಾರ ಪಾವತಿಸುತ್ತದೆ. ಯೋಜನೆ ಆರಂಭವಾದ 2023ರ ಆಗಸ್ಟ್‌ನಿಂದ ಜಿಲ್ಲೆಯಲ್ಲಿ 2,94,399 ಅರ್ಹ ಮಹಿಳೆಯರ ಪೈಕಿ2,82,030 ನಾರಿಯರು ಹೆಸರು ನೋಂದಾಯಿಸಿಕೊಂಡಿದ್ದರು.
ಇವರಲ್ಲಿ ಅನೇಕರು ಮೃತಪಟ್ಟಿದ್ದು, ಅವರ ಖಾತೆಗೂ ಹಣ ಸಂದಾಯವಾಗುತ್ತಿತ್ತು. ಇದನ್ನು ತಡೆಯುವ ಉದ್ದೇಶದಿಂದ, ಯೋಜನೆ ಅನುಷ್ಠಾನದ ಹೊಣೆ ನಿರ್ವಹಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೃತ ಫಲಾನುಭವಿಗಳ ಪತ್ತೆ ಕಾರ್ಯ ನಡೆಸುತ್ತಿದ್ದು, ಸದ್ಯಕ್ಕೆ ಫಲಾನುಭವಿಗಳಾಗಿದ್ದ 6,624 ಮಹಿಳೆಯರು ಮೃತಪಟ್ಟಿರುವುದು ಪತ್ತೆಯಾಗಿದೆ.
ಫಲಾನುಭವಿಗಳ ಪೈಕಿ ಮೃತಪಟ್ಟಿರುವವರ ಸಂಖ್ಯೆ ಕನಕಪುರದಲ್ಲೇ ಹೆಚ್ಚಾಗಿದೆ. ಕಳೆದ ಮೂರು ವರ್ಷದಲ್ಲಿ ಈ ತಾಲೂಕಿನಲ್ಲಿ 3,058 ಮಂದಿ ಕೊನೆಯುಸಿರೆಳೆದಿದ್ದಾರೆ. ಮಾಗಡಿಯಲ್ಲಿ ಅತಿ ಕಡಿಮೆ 1,375 ಮಂದಿ ಮೃತಪಟ್ಟಿದ್ದಾರೆ. ಮೃತ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಿರುವ ಹಣವನ್ನು ಹಿಂಪಡೆಯಲು ಸರ್ಕಾರದ ಸೂಚನೆ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಕ್ರಮ ವಹಿಸಿದ್ದಾರೆ.
ಈ ಯೋಜನೆಯ ಫಲಾನುಭವಿ ಮಹಿಳೆಯರು ಮೃತಪಟ್ಟರೆ, ಅವರ ವಿಳಾಸ ಪತ್ತೆ ಮಾಡಿ, ದಾಖಲೆ ಸಂಗ್ರಹಿಸುವುದು ಇಲಾಖೆಗೂ ದೊಡ್ಡ ಸವಾಲಾಗಿದೆ. ಫಲಾನುಭವಿ ಮಹಿಳೆ ಮೃತಪಟ್ಟ ವೇಳೆ ಆಕೆಯ ಕುಟುಂಬದ ಸದಸ್ಯರು ಮರಣ ಪ್ರಮಾಣಪತ್ರ ಪಡೆದಿದ್ದರೆ, ಇ– ಜನ್ಮ ತಂತ್ರಾಂಶದ ಮೂಲಕ ಮಾಹಿತಿ ಲಭ್ಯವಾಗಿ, ಅಂತಹವರ ಹೆಸರನ್ನು ಕಡಿತ ಮಾಡಲಾಗುತ್ತದೆ. ಇನ್ನು ಕೆಲವು ಕುಟುಂಬದವರು ಇಲಾಖೆಯ ಕಚೇರಿಗೆ ಬಂದು ಮರಣ ಪ್ರಮಾಣಪತ್ರ ಸಲ್ಲಿಸುತ್ತಾರೆ. ಅನೇಕ ಕುಟುಂಬಗಳಲ್ಲಿ ಫಲಾನುಭವಿ ಯಜಮಾನಿ ಮೃತರಾಗಿದ್ದರೂ, ಆ ಕುಟುಂಬದವರು ಮರಣ ಪ್ರಮಾಣಪತ್ರ ಪಡೆದಿರುವುದಿಲ್ಲ. ಅಂತಹ ಒಂದಿಷ್ಟು ಪ್ರಕರಣಗಳು ಈಗ ಬಾಕಿ ಇವೆ. ಮೃತ ಫಲಾನುಭವಿಗಳ ಖಾತೆಗೆ ಹಣ ಸಂದಾಯ ಆಗಿ, ಯೋಜನೆ ದುರುಪಯೋಗ ಆಗುವುದನ್ನು ತಪ್ಪಿಸಲು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಜೆ.ಆರ್.ದಿನೇಶ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.12,719 ಮಂದಿ ಪಟ್ಟಿಯಿಂದ ಹೊರಕ್ಕೆ:
ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪಾವತಿ ಕಾರಣಕ್ಕೆ ಪಟ್ಟಿಯಿಂದ ಹೊರಗುಳಿದಿರುವ ಫಲಾನುಭವಿಗಳ ಪೈಕಿ ರಾಮನಗರ ತಾಲೂಕಿನಲ್ಲಿ ಅತಿ ಹೆಚ್ಚು 1,746 ಮಹಿಳೆಯರಿದ್ದರೆ, ಮಾಗಡಿಯಲ್ಲಿ ಕನಿಷ್ಠ 587 ಮಂದಿ ಇದ್ದಾರೆ. ಉಳಿದಂತೆ ಚನ್ನಪಟ್ಟಣದಲ್ಲಿ 1,208 ಹಾಗೂ ಕನಕಪುರದಲ್ಲಿ 1,259 ಮಹಿಳೆಯರು ಸೇರಿದ್ದಾರೆ.ಗೃಹಲಕ್ಷ್ಮಿ ಸೌಲಭ್ಯಕ್ಕೆ ಅರ್ಹರಿದ್ದರೂ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡದ ಮಹಿಳೆಯರಲ್ಲಿ ಕನಕಪುರ ತಾಲೂಕಿನಲ್ಲಿ 372 ಮಂದಿ ಇದ್ದಾರೆ. ಉಳಿದಂತೆ ರಾಮನಗರದಲ್ಲಿ 353, ಚನ್ನಪಟ್ಟಣ 301 ಹಾಗೂ ಮಾಗಡಿಯಲ್ಲಿ 269 ಮಹಿಳೆಯರಿದ್ದಾರೆ. ಪ್ರಸ್ತುತ ಆ ಅರ್ಜಿಗಳ ಮ್ಯಾಪಿಂಗ್ ಕಾರ್ಯ ನಡೆಯುತ್ತಿದೆ.
ಈಗ ಜಿಲ್ಲೆಯಲ್ಲಿ ಆಧಾರ್ ಸೀಡಿಂಗ್ ಮಾಡದ 1,295, ಮೃತಪಟ್ಟಿರುವ 6,624 ಹಾಗೂ ಜಿಟಿ- ಜಿಎನ್‌ಟಿ ಪಾವತಿದಾರರಾಗಿರುವ 4,800 ಸೇರಿ ಒಟ್ಟು 12,719 ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಕೈಬಿಡಲಾಗಿದೆ.ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿತರಿಸುವ ಅಂತ್ಯೋದ್ಯಯ ಅನ್ನ ಯೋಜನೆ (ಎಎವೈ), ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಹಾಗೂ ಎಪಿಎಲ್ (ಬಡತನ ರೇಖೆಗಿಂತ ಮೇಲಿರುವ) ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆ ಹಾಗೂ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದರೆ, ಒಬ್ಬರನ್ನು ಮಾತ್ರ ಯೋಜನೆಗೆ ಪರಿಗಣಿಸಲಾಗುತ್ತದೆ.
----ಕೋಟ್ ...
ಅನಾರೋಗ್ಯ, ಅಪಘಾತ, ವಯೋಸಹಜ ಸಾವು ಸೇರಿದಂತೆ ಇತರೆ ಕಾರಣಗಳಿಂದಾಗಿ ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿರುವ 6624 ಫಲಾನುಭವಿಗಳು ಮೃತಪಟ್ಟಿದ್ದಾರೆ. ಇದರಲ್ಲಿ 1,777 ಮಂದಿ ಹೆಸರನ್ನು ಯೋಜನೆಯಿಂದ ಕೈಬಿಡಲಾಗಿದ್ದು, ಬಾಕಿ 4,847 ಮಂದಿ ಹೆಸರನ್ನು ತೆಗೆಯಲು ಕ್ರಮ ವಹಿಸಲಾಗಿದೆ. ಮೃತರ ಬ್ಯಾಂಕ್ ಖಾತೆಗೆ ಹಣ ಹೋಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.- ಕೆ.ರಾಜು, ಜಿಲ್ಲಾಧ್ಯಕ್ಷರು, ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರ, ಬೆಂ.ದಕ್ಷಿಣ ಜಿಲ್ಲೆ.
--------------------------...ಕೋಟ್ ...
ಮೃತ ಫಲಾನುಭವಿಗಳ ಮಾಹಿತಿಯನ್ನು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ಸಂಗ್ರಹಿಸಿ ನೀಡುತ್ತಾರೆ. ಜೊತೆಗೆ ಇಲಾಖೆಯ ಕೇಂದ್ರ ಕಚೇರಿಯಿಂದಲೂ ಮರಣ ಪ್ರಮಾಣಪತ್ರ ಮಾಹಿತಿ ಆಧರಿಸಿ ನಮಗೆ ಮೃತರ ಮಾಹಿತಿ ಕಳಿಸುತ್ತಾರೆ. ಅಂತಹ ಹೆಸರುಗಳನ್ನು ಸ್ಥಳೀಯವಾಗಿ ಸಂಗ್ರಹಿಸಿರುವ ಮಾಹಿತಿ ಜೊತೆಗೆ ತಾಳೆ ನೋಡಿ ಅಂತಿಮವಾಗಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಪಟ್ಟಿಯಿಂದ ಹೆಸರು ತೆಗೆಯುತ್ತೇವೆ.- ಜೆ.ಆರ್.ದಿನೇಶ್, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂ.ದಕ್ಷಿಣ ಜಿಲ್ಲೆ.