ಸಾರಾಂಶ
ಬಿಎಂಟಿಸಿ ನೌಕರರ ಮೇಲಿದ್ದ 6,960 ಪ್ರಕರಣಗಳು ವಜಾ, ಹೊಸ ವರ್ಷಕ್ಕೆ ಸಿಬ್ಬಂದಿಗೆ ಭರ್ಜರಿ ಉಡುಗೊರೆಬಿಎಂಟಿಸಿಗೆ 25 ವರ್ಷ ಪೂರ್ಣಗೊಂಡಿದ್ದು, ರಜತ ಮಹೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಿಗಮದ ಏಳಿಗೆಗಾಗಿ ಕೆಲಸ ಮಾಡುತ್ತಿರುವ ನೌಕರರಿಗೆ ಉಡುಗೊರೆ ನೀಡಲು ನಿಗಮ ಮುಂದಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹೊಸ ವರ್ಷಕ್ಕೆ ಸಿಬ್ಬಂದಿಗೆ ಭರ್ಜರಿ ಉಡುಗೊರೆ ನೀಡಿರುವ ಬಿಎಂಟಿಸಿ, ನೌಕರರ ಮೇಲಿದ್ದ 6,960 ಇಲಾಖೆ ವ್ಯಾಪ್ತಿಯ ಪ್ರಕರಣಗಳನ್ನು ವಜಾಗೊಳಿಸಿ ಕ್ರಮ ಕೈಗೊಳ್ಳಲಾಗಿದೆ.ಬಿಎಂಟಿಸಿಗೆ 25 ವರ್ಷ ಪೂರ್ಣಗೊಂಡಿದ್ದು, ರಜತ ಮಹೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಿಗಮದ ಏಳಿಗೆಗಾಗಿ ಕೆಲಸ ಮಾಡುತ್ತಿರುವ ನೌಕರರಿಗೆ ಉಡುಗೊರೆ ನೀಡಲು ನಿಗಮ ಮುಂದಾಗಿದೆ. ನೌಕರರಲ್ಲಿ ದಕ್ಷತೆ, ಸೇವಾ ಮನೋಭಾವ, ಕರ್ತವ್ಯ ಪ್ರಜ್ಞೆ ಮೂಡಿಸುವ ದೃಷ್ಟಿಯಿಂದ ಹಾಗೂ ಉತ್ಸಾಹದಿಂದ ಕೆಲಸ ಮಾಡುವಂತೆ ಮಾಡಲು ಕರ್ತವ್ಯಕ್ಕೆ ಗೈರು ಹಾಜರಿ ಸೇರಿದಂತೆ ಇನ್ನಿತರ ಶಿಸ್ತು ಪ್ರಕರಣಗಳನ್ನು ವಜಾ ಮಾಡಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶಿಸಿದ್ದಾರೆ.ಬಿಎಂಟಿಸಿ ಕೈಗೊಂಡಿರುವ ಕ್ರಮದಂತೆ ನ.30ರ ಅಂತ್ಯಕ್ಕೆ ಚಾಲನಾ/ತಾಂತ್ರಿಕ ಸಿಬ್ಬಂದಿ ವಿರುದ್ಧ ದಾಖಲಾಗಿರುವ ಗೈರು ಹಾಜರಿ ಹಾಗೂ ಶಿಸ್ತು ಪ್ರಕರಣಗಳ ಗಂಭೀರತೆಗಳನ್ನು ಅವಲೋಕಿಸಿ ತರಬೇತಿ ನೌಕರರೂ ಸೇರಿದಂತೆ ನೌಕರರ ವಿರುದ್ಧ ಘಟಕ ಹಾಗೂ ಕೇಂದ್ರ ಕಚೇರಿಯ ವಲಯ ಮಟ್ಟದಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇದ್ದ 2,536 ಗೈರು ಹಾಜರಿ ಪ್ರಕರಣಗಳು ಹಾಗೂ 4,424 ಶಿಸ್ತು ಪ್ರಕರಣಗಳು ಸೇರಿದಂತೆ ಒಟ್ಟು 6,960 ಪ್ರಕರಣಗಳನ್ನು ವಜಾಗೊಳಿಸಲಾಗಿದೆ.ಈ ಕ್ರಮವು ಒಂದು ಬಾರಿಗೆ ಮಾತ್ರ ಅನ್ವಯವಾಗಲಿದ್ದು, ಮತ್ತೆ ಅದೇ ರೀತಿಯ ತಪ್ಪು ಮರು ಕಳಿಸಿದರೆ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗುವುದು ಎಂದೂ ಸೂಚಿಸಲಾಗಿದೆ.ಸಂಘಟನೆ ಅಸಮಾಧಾನ ನಡುವೆ ಸಂತಸದ ಕ್ರಮ:ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಿ. ಸತ್ಯವತಿ ಅವರು ನೌಕರರನ್ನು ಸಮರ್ಪಕವಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕಾಗಿ ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಬಗ್ಗೆ ಫೆಡರೇಷನ್ ಸತ್ಯವತಿ ಅವರಿಗೆ ಪತ್ರವನ್ನೂ ಬರೆದಿತ್ತು. ಅದರ ನಡುವೆಯೇ ಸತ್ಯವತಿ ಅವರು ನೌಕರ ಸ್ನೇಹಿ ಕ್ರಮ ಕೈಗೊಂಡಿದ್ದಾರೆ.ಬಿಎಂಟಿಸಿಯಿಂದ ಮಾರ್ಗಸೂಚಿ ಫಲಕ ಪ್ರದರ್ಶನ ಮಾಸಾಚರಣೆ
ಕನ್ನಡಪ್ರಭ ವಾರ್ತೆ ಬೆಂಗಳೂರುಬಿಎಂಟಿಸಿ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ಹಾಗೂ ನಿಗಮದ ಬಗ್ಗೆ ಉತ್ತಮ ಅಭಿಪ್ರಾಯ ರೂಪಿಸಲು ಜನವರಿ ತಿಂಗಳಲ್ಲಿ ‘ಸಂಪೂರ್ಣ ಸಮವಸ್ತ್ರ ಹಾಗೂ ಮಾರ್ಗಸೂಚಿ ಫಲಕ ಪ್ರದರ್ಶಿಸುವ ಮಾಸ’ ಎಂದು ಆಚರಿಸಲು ನಿರ್ಧರಿಸಲಾಗಿದೆ.
ಸದ್ಯ ಬಿಎಂಟಿಸಿ ಚಾಲಕರು ನಿಯಮದಂತೆ ಸಮರ್ಪಕವಾಗಿ ಸಮವಸ್ತ್ರ ಧರಿಸುತ್ತಿಲ್ಲ. ಅಲ್ಲದೆ, ಹಲವು ಬಸ್‌ಗಳಲ್ಲಿ ಮಾರ್ಗಸೂಚಿ ಫಲಕಗಳಿಲ್ಲದೆ ಪ್ರಯಾಣಿಕರಿಗೆ ಬಸ್ ಯಾವ ಮಾರ್ಗದಲ್ಲಿ ಸಂಚರಿಸಲಿದೆ ಎಂಬುದು ತಿಳಿಯುತ್ತಿಲ್ಲ. ಹೀಗಾಗಿ ಅದನ್ನು ಸರಿಪಡಿಸಿ ಉತ್ತಮ ಸೇವೆ ನೀಡುವ ದೃಷ್ಟಿಯಿಂದ ಜನವರಿ ತಿಂಗಳಲ್ಲಿ ಸಂಪೂರ್ಣ ಸಮವಸ್ತ್ರ ಹಾಗೂ ಮಾರ್ಗಸೂಚಿ ಫಲಕ ಪ್ರದರ್ಶಿಸುವ ಮಾಸ ಎಂದು ಆಚರಿಸಲಾಗುತ್ತಿದೆ.ಈ ತಿಂಗಳಲ್ಲಿ ಚಾಲನಾ ಸಿಬ್ಬಂದಿ ನಿಗದಿತ ಹಾಗೂ ಶುಭ್ರ ಸಮವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸಬೇಕು, ನಾಮಫಲಕ, ಬ್ಯಾಡ್ಜ್, ಶೂ ಹಾಗೂ ಬೆಲ್ಟ್ ಧರಿಸಬೇಕು. ಜತೆಗೆ ಬಸ್‌ಗಳಲ್ಲಿ ನಿಗದಿತ ರೀತಿಯಲ್ಲಿ ಮಾರ್ಗಸೂಚಿ ಫಲಕ ಅಳವಡಿಸಬೇಕು ಎಂದು ಆದೇಶಿಸಲಾಗಿದೆ.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಮಾಡಿರುವ ಈ ಆದೇಶವನ್ನು ಪಾಲಿಸಿ ಸಂಪೂರ್ಣ ಸಮವಸ್ತ್ರ ಹಾಗೂ ಮಾರ್ಗಸೂಚಿ ಫಲಕ ಪ್ರದರ್ಶಿಸುವ ಮಾಸವನ್ನು ಯಶಸ್ವಿಗೊಳಿಸುವ 240 ಚಾಲನಾ ಸಿಬ್ಬಂದಿಗೆ ತಲಾ ₹500 ಬಹುಮಾನ ನೀಡಲಾಗುವುದು ಎಂದು ತಿಳಿಸಲಾಗಿದೆ.