ಸಾರಾಂಶ
ಬೆಂಗಳೂರು : ಒತ್ತುವರಿಯಾಗಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸುಮಾರು ₹430 ಕೋಟಿ ಮೌಲ್ಯದ ಆರು ಎಕರೆ ಭೂಮಿಯನ್ನು ವಶಕ್ಕೆ ಪಡೆದಿದೆ.
ಶನಿವಾರ ಮುಂಜಾನೆ ನಾಗರಭಾವಿ ಗ್ರಾಮದ ಸರ್ವೆ ನಂ.78ರಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ಗೋದಾಮು, ಶೆಡ್‌ಗಳನ್ನು ಜೆಸಿಬಿ, ಹಿಟಾಚಿಗಳ ನೆರವಿನೊಂದಿಗೆ ಬಿಡಿಎ ಅಧಿಕಾರಿಗಳು ತೆರವುಗೊಳಿಸಿದರು.
ನಾಗರಭಾವಿ 1ನೇ ಹಂತ ಬಡಾವಣೆ ರಚನೆಗೆ ಬಿಡಿಎ 1985ರಲ್ಲಿ 9.13 ಎಕರೆ ಪ್ರದೇಶಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ ಭೂಸ್ವಾಧೀನಪಡಿಸಿಕೊಂಡಿತ್ತು. ನಂತರ ಈ ಸರ್ವೆ ನಂಬರಿನ ಜಮೀನಿನ ಮೇಲೆ ಭೂಮಾಲೀಕರು ನ್ಯಾಯಾಲಯದಲ್ಲಿ ದಾವೆಗಳನ್ನು ಹೂಡಿದ್ದರು. ಈ ಪ್ರಕರಣಗಳು ಈಗ ಪ್ರಾಧಿಕಾರದ ಪರವಾಗಿ ಇತ್ಯರ್ಥವಾಗಿರುವ ಹಿನ್ನೆಲೆಯಲ್ಲಿ ಬಿಡಿಎ ಅಧ್ಯಕ್ಷರು ಮತ್ತು ಆಯುಕ್ತರ ಸೂಚನೆ ಮೇರೆಗೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.
ಈ ಹಿಂದೆ ಈಗಾಗಲೇ ಪ್ರಾಧಿಕಾರದಿಂದ ರಸ್ತೆ ನಿರ್ಮಾಣಕ್ಕೆ ಉಪಯೋಗಿಸಿಕೊಂಡಿರುವ ಪ್ರದೇಶವನ್ನು ಹೊರತುಪಡಿಸಿ ಉಳಿಕೆ ಜಮೀನಿನ ಪೈಕಿ 6.10 ಎಕರೆ ಜಮೀನಿನಲ್ಲಿ ನಿರ್ಮಾಣವಾಗಿದ್ದ ಅನಧಿಕೃತ ಶೆಡ್‌ಗಳು, ಗ್ಯಾರೇಜ್‌ಗಳು ಮತ್ತು ಅಂಗಡಿ ಮಳಿಗೆಗಳು, ನರ್ಸರಿ ಗಾರ್ಡನ್‌ಗಳನ್ನು ತೆರವುಗೊಳಿಸಲಾಯಿತು. ವಶಕ್ಕೆ ಪಡೆದ ಪ್ರದೇಶದಲ್ಲಿ ಬೇಲಿ ಮತ್ತು ಬಿಡಿಎ ನಾಮಫಲಕಗಳನ್ನು ಅಳವಡಿಸಿ ಪ್ರಾಧಿಕಾರದ ಸುಪರ್ದಿಗೆ ಪಡೆಯಲಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.