ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯ ಬಜೆಟ್ ನಲ್ಲಿ ಘೋಷಿಸಿರುವಂತೆ ಮೈಸೂರು ನಗರದಲ್ಲಿ ರಾತ್ರಿ 1 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಬೇಕು ಎಂದು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ. ರಾಜ್ಯ ಸರ್ಕಾರವು ಬೆಳಗ್ಗೆ 6 ರಿಂದ ಮಧ್ಯರಾತ್ರಿ 1 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಿದ್ದು, ದಸರಾ ದೃಷ್ಟಿಯಲಿರಿಸಿಕೊಂಡು ಜಿಲ್ಲಾಧಿಕಾರಿಗಳು ಮೈಸೂರು ನಗರದಲ್ಲಿ ಅವಕಾಶ ನೀಡಬೇಕು ಎಂದು ಸಂಘದ ಅಧ್ಯಕ್ಷ ಕೆ.ಬಿ. ಲಿಂಗರಾಜು ಮನವಿ ಮಾಡಿದ್ದಾರೆ.ಮೈಸೂರು ನಗರಕ್ಕೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುವುದರಿಂದ ಪ್ರವಾಸೋದ್ಯಮ ಅಭಿವೃದ್ದಿಗೆ ಹೆಚ್ಚಿನ ಅವಕಾಶವಿದೆ. ರಾತ್ರಿ 1 ಗಂಟೆಯವರೆಗೂ ವ್ಯಾಪಾರ ವಹಿವಾಟಿನಿಂದ ಹೆಚ್ಚಿನ ಉದ್ಯೋಗಾವಕಾಶ ಸಿಗುವುದಲ್ಲದೇ ವ್ಯಾಪಾರೋದ್ಯಮಕ್ಕೆ ಉತ್ತೇಜನ ನೀಡಿದಂತೆ ಆಗುತ್ತದೆ ಎಂದು ಅವರು ತಿಳಿಸಿದ್ದಾರೆ.ಈಗಾಗಲೇ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಊಟಕ್ಕೆ ತೊಂದರೆ ಆಗುತ್ತಿತ್ತು. ಆದರೆ ಈಗ 1 ಗಂಟೆಯವರೆಗೂ ವ್ಯಾಪಾರ ನಡೆದರೆ ಅನುಕೂಲವಾಗಲಿದೆ. ಮೈಸೂರು ನಗರಕ್ಕೆ ರಾತ್ರಿ ವೇಳೆಯಲ್ಲಿ ಸಾಕಷ್ಟು ಪ್ರಯಾಣಿಕರು ಬರುವುದರಿಂದ ಪ್ರಯೋಜನವಾಗಲಿದ್ದು, ಮೈಸೂರು ನಗರ ಮತ್ತಷ್ಟು ಅಭಿವೃದ್ಧಿ ಆಗಲಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಮಧ್ಯರಾತ್ರಿ 1 ಗಂಟೆಯವರೆಗೂ ವ್ಯಾಪಾರ ವಹಿವಾಟಿಗೆ ಮುಕ್ತವಕಾಶ ನೀಡಬೇಕು ಎಂದು ಅವರು ಕೋರಿರುವುದಾಗಿ ಗೌರವ ಕಾರ್ಯದರ್ಶಿ ಎ.ಕೆ. ಶಿವಾಜಿರಾವ್ ತಿಳಿಸಿದ್ದಾರೆ.