ಗಂಗಾವತಿ: ನಗರದ ಕೃಷಿ ಮಹಾವಿದ್ಯಾಲಯದ ಬಾಲಕರ ವಸತಿ ನಿಲಯಕ್ಕೆ ಸರ್ಕಾರದಿಂದ ₹ 6 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ನಗರದ ಕೃಷಿ ಮಹಾವಿದ್ಯಾಲಯದ ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯ ಉದ್ಘಾಟಿಸಿ ಮಾತನಾಡಿದರು.ಗಂಗಾವತಿ ನಗರವು ಭತ್ತದ ಖಣಜವಾಗಿದೆ.ಈ ಭಾಗದ ಕೃಷಿ ಹೊಂದಿರುವ ರೈತರ ಮಕ್ಕಳಿಗೆ ಅನುಕೂಲವಾಗುವ ಉದ್ದೇಶದಿಂದ ಬಿಜೆಪಿ ಸರ್ಕಾರ ಕಾಲೇಜು ಮಂಜೂರು ಮಾಡಿದೆ. ಜತೆಗೆ ವಿದ್ಯಾರ್ಥಿನಿಯರಿಗೆ ಉತ್ತಮ ಸೌಲಭ್ಯಯುಳ್ಳ ವಸತಿ ನಿಲಯ ಕಟ್ಟಡ ನಿರ್ಮಾಣವಾಗಿದೆ ಎಂದರು.
ಬರುವ ವರ್ಷ ಬಾಲಕರ ವಸತಿ ನಿಲಯದ ಕಟ್ಟಡ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದ ಅವರು, ಗಂಗಾವತಿ ಕೃಷಿ ಮಹಾವಿದ್ಯಾಲಯವು 280 ಎಕರೆ ಪ್ರದೇಶ ಹೊಂದಿದ್ದು, ಈಗಾಗಲೇ ಬಸ್ ನಿಲ್ದಾಣಕ್ಕೆ 5ಎಕರೆ ಜಮೀನು ನೀಡಿದೆ. ಇನ್ನು 5 ಎಕರೆ ಭೂಮಿ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.ಅಧ್ಯಕ್ಷತೆ ವಹಿಸಿದ್ದ ರಾಯಚೂರು ಕೃಷಿ ವಿಜ್ಞಾನಿಗಳ ಮಹಾವಿದ್ಯಾಲಯದ ಕುಲಪತಿ ಡಾ. ಎಂ.ಹನುಮಂತಪ್ಪ, ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಕೃಷಿ ಪದವಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ ಎಂದರು.
ಕಾಲೇಜಿನ ಮುಖ್ಯಸ್ಥ ಡಾ.ಯಂಜೆರಪ್ಪ ಎಸ್.ಟಿ.ಮಾತನಾಡಿ, ಗಂಗಾವತಿ ನಗರದಲ್ಲಿ ಕಳೆದ 70 ವರ್ಷಗಳಿಂದ ಕೃಷಿ ಸಂಶೋಧನಾ ಕೇಂದ್ರ ಪ್ರಾರಂಭವಾಗಿದೆ. 2020 ಮತ್ತು 21ನೇ ಸಾಲಿನಲ್ಲಿ ಕೃಷಿ ಕಾಲೇಜು ಪ್ರಾರಂಭವಾಗಿದ್ದು, 136 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ಈ ವೇಳೆ ಜಾನಪದ ವಿದ್ವಾಂಸ ಡಾ.ಶಂಭು ಬಳಿಗಾರ, ರಾಯಚೂರು ಕೃಷಿ ವಿಜ್ಞಾನಿಗಳ ವಿಶ್ವ ವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯ ಮಲ್ಲೇಶ ಕೊಲಿಮಿ, ತಿಮ್ಮಣ್ಣ ಸೋಮಪ್ಪ ಚಾವಡಿ, ರೇಣುಕಾ ಪಿರಂಗಿ, ಶಿಕ್ಷಣ ನಿರ್ದೇಶಕ ಡಾ. ಗುರುರಾಜ್ ಸುಂಕದ, ಮಾಜಿ ಸದಸ್ಯ ಶ್ರೀಧರ ಕೇಸಹಟ್ಟಿ, ಡೀನ್ ಡಾ. ಜಾಗೃತಿ ಬಿ. ದೇಶಮಾನ್ಯ, ರವಿ ಮೆಸ್ತಾನ್, ವಿಜ್ಞಾನಿ ಡಾ. ರವಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಸೃಷ್ಠಿ ಸಂಗಡಿಗರಿಂದ ನಾಡಗೀತೆ, ಪ್ರಾಸ್ತಾವಿಕ ಎಂ.ವಿ.ರವಿ, ಡಾ.ಚೇತನ್ ನಿರೂಪಿಸಿದರು.