ಸಾರಾಂಶ
ಫೆಡರೇಶನ್ ೨೦೨೩-೨೪ ಸಾಲಿನಲ್ಲಿ ೬ ಕೋಟಿ ರು. ವ್ಯವಹಾರಿಕ ಲಾಭ ಗಳಿಸಿದೆ. ಫೆಡರೇಶನ್ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ೨೫ ಲಕ್ಷ ರು. ಪ್ರತಿಭಾ ಪುರಸ್ಕಾರ, ಸದಸ್ಯ ಗ್ರಾಹಕರಿಗೆ ೪ ಕೋಟಿ ರು. ಪ್ರೋತ್ಸಾಹಕ ಉಡುಗೊರೆ, ದೇಣಿಗೆ ಮತ್ತು ಬಡ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಸುಮಾರು ೨೦ ಲಕ್ಷ ರು. ಆರೋಗ್ಯನಿಧಿ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ನ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆಯು ಎಮ್ಮೆಕೆರೆ, ಪಾಂಡೇಶ್ವರದ ರಮಾ ಲಕ್ಷ್ಮೀನಾರಾಯಣ ಸಭಾಭವನದಲ್ಲಿ ಸಂಸ್ಥೆಯ ಅಧ್ಯಕ್ಷ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.ಈ ಸಂದರ್ಭ ಮಾತನಾಡಿದ ಅಧ್ಯಕ್ಷರು, ಫೆಡರೇಶನ್ ೨೦೨೩-೨೪ ಸಾಲಿನಲ್ಲಿ ೬ ಕೋಟಿ ರು. ವ್ಯವಹಾರಿಕ ಲಾಭ ಗಳಿಸಿದೆ. ಫೆಡರೇಶನ್ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ೨೫ ಲಕ್ಷ ರು. ಪ್ರತಿಭಾ ಪುರಸ್ಕಾರ, ಸದಸ್ಯ ಗ್ರಾಹಕರಿಗೆ ೪ ಕೋಟಿ ರು. ಪ್ರೋತ್ಸಾಹಕ ಉಡುಗೊರೆ, ದೇಣಿಗೆ ಮತ್ತು ಬಡ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಸುಮಾರು ೨೦ ಲಕ್ಷ ರು. ಆರೋಗ್ಯನಿಧಿ ನೀಡಲಾಗಿದೆ ಎಂದರು.ಸದಸ್ಯ ಸಹಕಾರಿ ಸಂಘಗಳ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಾಗಾರ, ಸದಸ್ಯರಿಗೆ ಫೆಡರೇಶನಿನ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಆರೋಗ್ಯ ಶಿಬಿರ, ಆಯ್ದ ಕೇಂದ್ರಗಳಲ್ಲಿ ಫೆಡರೇಶನ್ ವತಿಯಿಂದ ಮತ್ಸ್ಯ ಕ್ಯಾಂಟಿನ್ ಆರಂಭಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಕಾರ್ಯೋನ್ಮುಖವಾಗಿದೆ. ಫೆಡರೇಶನ್ ವತಿಯಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಕಾರದಿಂದ ಮಂಗಳೂರು ನಗರದ ಕೇಂದ್ರ ಭಾಗವಾದ ಉರ್ವ ಸ್ಟೋರ್‌ನಲ್ಲಿ ಆಧುನಿಕ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ ‘ಮತ್ಸ್ಯ ಸಂಪದ’ ನೂತನ ಪ್ರಧಾನ ಕಚೇರಿ ಕಟ್ಟಡ ಹಾಗೂ ಸಮುದಾಯ ಭವನದ ಕಾಮಗಾರಿ ಪ್ರಗತಿಯಲಿದೆ ಎಂದು ತಿಳಿಸಿದರು.ಕೇಂದ್ರ ಪುರಸ್ಕೃತ ಉಳಿತಾಯ ಪರಿಹಾರ, ಮತ್ಸ್ಯಾಶ್ರಯ ವಸತಿ ಸಹಾಯಧನ ಏರಿಕೆ, ಅಂಬಿಗರ ಚೌಡಯ್ಯ ನಿಗಮದ ವಿದ್ಯಾರ್ಥಿ ವೇತನ, ಮೀನುಗಾರ ಮಹಿಳೆಯರ ಶೂನ್ಯ ಬಡ್ಡಿದರ ಸಾಲ ಸಹಿತ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಫೆಡರೇಶನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಹಾಗೂ ಪ್ರಾಥಮಿಕ ಮೀನುಗಾರ ಸಹಕಾರಿ ಸಂಸ್ಥೆಯ ಸದಸ್ಯರಿಗೆ ತರಬೇತಿ ಕಾರ್ಯಗಾರ ಹಾಗೂ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗಳ ಕಾರ್ಯಾಗಾರವನ್ನು ಶೀಘ್ರದಲ್ಲೇ ಏರ್ಪಡಿಸಲಾಗುವುದು ಎಂದರು.ಸಮಾರಂಭದಯಲ್ಲಿ ರಾಷ್ಟ್ರಮಟ್ಟದ ಅತ್ಯುತ್ತಮ ಮೀನುಗಾರಿಕಾ ಸಹಕಾರಿ ಸಂಘ ಪ್ರಶಸ್ತಿಗೆ ಭಾಜನರಾದ ಮಲ್ಪೆ ಯಾಂತ್ರಿಕ ಟ್ರಾಲ್ ದೋಣಿ ಮೀನುಗಾರರ ಪ್ರಾ. ಸಹಕಾರಿ ಸಂಘದ ಅಧ್ಯಕ್ಷ ಶ್ರೀರಾಮಚಂದ್ರ ಕುಂದರ್, ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಬಿ. ಮಂಜುನಾಥ ಕುಂದರ್ ಹಾಗೂ ಆರ್ಯಭಟ ಪ್ರಶಸ್ತಿ ಪುರಸ್ಕೃತ ಸಾಹಿತಿ ಯೋಗೀಶ್ ಕಾಂಚನ್ ಅವರನ್ನು ಅಭಿನಂದಿಸಲಾಯಿತು.ಫೆಡರೇಶನಿನ ೨೦೨೩-೨೪ ನೇ ವಾರ್ಷಿಕ ವರದಿಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮಹಾಸಭೆಯಲ್ಲಿ ಮಂಡಿಸಿದರು. ಸಭೆಯಲ್ಲಿ ಫೆಡರೇಶನಿನ ಉಪಾಧ್ಯಕ್ಷ ದೇವಪ್ಪ ಕಾಂಚನ್, ಸಹಕಾರಿ ಸಂಘಗಳ ಉಪನಿಬಂಧಕರಾದ ಲಾವಣ್ಯ, ಮಿನುಗಾರಿಕಾ ಉಪನಿರ್ದೇಶಕರಾದ ದಿಲೀಪ್, ವ್ಯವಸ್ಥಾಪಕ ನಿದೇರ್ಶಕರಾದ ಶ್ರೀಮತಿ ದರ್ಶನ್ ಹಾಗೂ ಆಡಳಿತ ಮಂಡಳಿಯ ನಿದೇರ್ಶಕರು ಉಪಸ್ಥಿತರಿದ್ದರು.-----------
ಕೇಂದ್ರ ಸರ್ಕಾರದ ಯೋಜನೆಗೆ ಆಯ್ಕೆಪ್ರಧಾನಮಂತ್ರಿ ಮತ್ಯಸಂಪದ ಯೋಜನೆಯಡಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮವು ಸಹಕಾರಿ ಸಂಘಗಳನ್ನು ಬಲವರ್ಧನೆಗೊಳಿಸಲು ಯೋಜನೆ ಅನುಷ್ಟಾನ ಸಂಸ್ಥೆಯಾಗಿ ಫೆಡರೇಶನನ್ನು ಆಗಿ ಆಯ್ಕೆ ಮಾಡಿದ್ದು, ಸಂಸ್ಥೆಯ ಸದಸ್ಯ ಸಹಕಾರಿ ಸಂಘಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೀನುಗಾರಿಕಾ ಯೋಜನೆಯನ್ನು ಅರ್ಹ ಮೀನುಗಾರರಿಗೆ ತಲುಪಿಸಲು ಫೆಡರೇಶನ್ ಕಾರ್ಯೋನ್ಮುಖವಾಗಲಿದೆ ಎಂದು ಯಶ್ಪಾಲ್ ಸುವರ್ಣ ತಿಳಿಸಿದರು.