ಪ್ರಯಾಗರಾಜ್‌ನ ಮಹಾಕುಂಭಮೇಳ ಯಾತ್ರೆ ವೇಳೆ ಉತ್ತರ ಪ್ರದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಳಗಾವಿಯ ನಾಲ್ವರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಶುಕ್ರವಾರ ಸಂಭವಿಸಿದ ಮತ್ತೊಂದು ಭೀಕರ ಅಪಘಾತದಲ್ಲಿ ಬೀದರ್‌ನ ಆರು ಮಂದಿ ಇಹಲೋಕ ತ್ಯಜಿಸಿದ್ದಾರೆ.

 ಬೀದರ್‌ : ಪ್ರಯಾಗರಾಜ್‌ನ ಮಹಾಕುಂಭಮೇಳ ಯಾತ್ರೆ ವೇಳೆ ಉತ್ತರ ಪ್ರದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಳಗಾವಿಯ ನಾಲ್ವರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಶುಕ್ರವಾರ ಸಂಭವಿಸಿದ ಮತ್ತೊಂದು ಭೀಕರ ಅಪಘಾತದಲ್ಲಿ ಬೀದರ್‌ನ ಆರು ಮಂದಿ ಇಹಲೋಕ ತ್ಯಜಿಸಿದ್ದಾರೆ.

ನಗರದ ಲಾಡಗೇರಿಯಿಂದ 14 ಜನರ ತಂಡ ಮಂಗಳವಾರ ಮಧ್ಯಾಹ್ನ ಕ್ರೂಸರ್‌ನಲ್ಲಿ ಕುಂಭಮೇಳಕ್ಕೆ ತೆರಳಿತ್ತು. ಪ್ರಯಾಗರಾಜ್‌ನಲ್ಲಿ ಪುಣ್ಯ ಸ್ನಾನ ಮುಗಿಸಿಕೊಂಡು ಶುಕ್ರವಾರ ಬೆಳಗಿನ ಜಾವ ಕಾಶಿ ವಿಶ್ವನಾಥ ದರ್ಶನ ಪಡೆಯಲು ತೆರಳುತ್ತಿತ್ತು. ಉತ್ತರ ಪ್ರದೇಶದ ಬನಾರಸ್‌ ಹೆದ್ದಾರಿ ರಾಂಪೂರ ಬಳಿ ಕ್ರೂಸರ್‌ ವಾಹನ ಶುಕ್ರವಾರ ಬೆಳಗ್ಗೆ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮುಖ್ಯಮಂತ್ರಿಗಳು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

ಮೃತಪಟ್ಟವರು: ಘಟನೆಯಲ್ಲಿ ನೀಲಮ್ಮ ಅಲಿಯಾಸ್‌ ಲೋಲಾವತಿ (62), ಪುತ್ರ ಸಂತೋಷಕುಮಾರ (45), ಸಂತೋಷ ಕುಮಾರ ಪತ್ನಿ ಸುನೀತಾ (40), ಲಕ್ಷ್ಮೀ (57), ಕಲಾವತಿ ಮೃತಪಟ್ಟಿದ್ದು, ಇನ್ನೊಬ್ಬರ ಹೆಸರು ತಿಳಿದುಬಂದಿಲ್ಲ. ಒಂದು ಮಗು ಸೇರಿ 8 ಮಂದಿ ಗಾಯಾಳುಗಳಿಗೆ ವಾರಾಣಾಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತದೇಹಗಳನ್ನು ವಿಮಾನದ ಮೂಲಕ ಸ್ವಗ್ರಾಮಕ್ಕೆ ತರುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.