ನಗರಸಭೆ 31 ವಾರ್ಡುಗಳಿಗೆ ತಲಾ 6 ಲಕ್ಷ ಅನುದಾನ

| Published : Apr 26 2025, 12:45 AM IST

ಸಾರಾಂಶ

15 ನೇ ಹಣಕಾಸು ಯೋಜನೆಯಡಿ ನಮಗೆ ಲಭ್ಯವಾಗಿರುವ 4.37 ಕೋಟಿ‌ ಅನುದಾನದ ಪೈಕಿ 1.89 ಕೋಟಿ ಅನುದಾನ ವನ್ನು ನಗರಸಭೆಯ 31 ಸದಸ್ಯರ ವಾರ್ಡುಗಳಿಗೆ ತಲಾ 6 ಲಕ್ಷದಂತೆ ಅನುದಾನ ಹಂಚಲು ನಡೆದ ನಗರಸಭೆ ತುರ್ತು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ರಾಮನಗರ

15 ನೇ ಹಣಕಾಸು ಯೋಜನೆಯಡಿ ನಮಗೆ ಲಭ್ಯವಾಗಿರುವ 4.37 ಕೋಟಿ‌ ಅನುದಾನದ ಪೈಕಿ 1.89 ಕೋಟಿ ಅನುದಾನ ವನ್ನು ನಗರಸಭೆಯ 31 ಸದಸ್ಯರ ವಾರ್ಡುಗಳಿಗೆ ತಲಾ 6 ಲಕ್ಷದಂತೆ ಅನುದಾನ ಹಂಚಲು ನಡೆದ ನಗರಸಭೆ ತುರ್ತು ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ನಗರಸಭೆಯ 15ನೇ ಹಣಕಾಸು ಯೋಜನೆ ಅನುದಾನ ಬಳಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳ ಅನುಷ್ಠಾನ ಸಂಬಂಧ ಚರ್ಚೆ ನಡೆದು ಅನುದಾನ ಹಂಚಿಕೆಗೆ ಸದಸ್ಯರು ಒಪ್ಪಿಗೆ ಸೂಚಿಸಿದರು. ಪ್ರಸ್ತುತ ಸಾಲಿನ ಬಜೆಟ್ ನಲ್ಲಿರುವ ವಿಷಯಗಳ ಅನುಷ್ಟಾನ ಆಗುತ್ತಿದೆ. ಇನ್ನೊಂದು ವರ್ಷದಲ್ಲಿ ಎಲ್ಲ ಸದಸ್ಯರು ತಮ್ಮ ತಮ್ಮ ವಾರ್ಡ್ ಗಳ ಅಭಿವೃದ್ಧಿ ಮಾಡಿದ ತೃಪ್ತಿಯಾಗುವಷ್ಟರ ಮಟ್ಟಿಗೆ ಅಭಿವೃದ್ಧಿ ಕೆಲಸಗಳು ಸಾಕಾರವಾಗುತ್ತವೆ ಎಂದು ಶೇಷಾದ್ರಿ ಹೇಳಿದರು.

ನಗರಸಭೆ ಸದಸ್ಯ ಮಂಜುನಾಥ್ ಮಾತನಾಡಿ, ಪಕ್ಷಾತೀತವಾಗಿ ಸಮವಾಗಿ ಅನುದಾನ ಹಂಚಿಕೆ ಮಾಡಿರುವುದು ಮತ್ತು ತೇರು ಬೀದಿ ಅಭಿವೃದ್ದಿಗೆ ಅದ್ಯಕ್ಷರು ಬಹಳ ಮುತುವರ್ಜಿ ವಹಿಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಯುಐಡಿಎಫ್ ನಲ್ಲಿ ಉಳಿದ ಕೆಲಸಗಳನ್ನು ಹಂತ ಹಂತವಾಗಿ ಕೆಲಸ ಮಾಡಲು ಅಧಿಕಾರಿಗಳು ಆಶಕ್ತಿ ವಹಿಸಿ, ಜೊತೆಗೆ ಗುಣಮಟ್ಟ ಕಾಯಬೇಕು ಆಗ ಶಾಶ್ವತ ಕೆಲಸ ಮಾಡಲು ಸಾಧ್ಯ ಎಂದು ಸಲಹೆ ನೀಡಿದರು.

ಡಾ.ಅಂಬೇಡ್ಕರ್ ಜಯಂತಿ :

ನಗರಸಭೆ ಬಜೆಟ್‌ನಲ್ಲಿ 5 ಲಕ್ಷ ರು. ಮೀಸಲಿಟ್ಟಿರುವ ಅನುದಾನದಲ್ಲಿ ಮೇ 11ರಂದು ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ.ಶಿ ವಕುಮಾರ್ ಅವರನ್ನು ಅಹ್ವಾನಿಸಿದ್ದು, ಅಂದು ನಗರಸಭೆಯಲ್ಲಿ ನಡೆದಿರುವ ಪ್ರಗತಿಯ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟು ಇನ್ನಷ್ಟು ಹೆಚ್ಚಿನ ಅನುದಾನಕ್ಕೆ ಮನವಿ ಮಾಡೋಣ, ಪಕ್ಷಾತೀತವಾಗಿ ಎಲ್ಲ ನಗರಸಭೆ ಸದಸ್ಯರು ಸೇರಿ ಕಾರ್ಯಕ್ರಮವನ್ನು ಯಶಸ್ವಿ ಮಾಡೋಣ ಎಂದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಆಯಿಷಾಬಾನು, ಸ್ಥಾಯಿ‌ ಸಮಿತಿ ಅಧ್ಯಕ್ಷ ಫೈರೋಜ್ , ಆಯುಕ್ತ ಡಾ.ಜಯಣ್ಣ ಸೇರಿದಂತೆ ನಗರಸಭೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ಪರ್ಧಾತ್ಮಕ ಪರೀಕ್ಷೆ ಯಶಸ್ವಿಗೆ ಮಾನಸಿಕ ಸಿದ್ಧತೆ ಮುಖ್ಯ

ರಾಮನಗರ: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಯಶಸ್ವಿ ಯಾಗಲು ವಿದ್ಯಾರ್ಥಿಗಳಿಗೆ ಮಾನಸಿಕ ಸಿದ್ದತೆ ಬಹಳ ಮುಖ್ಯ ಎಂದು ಅಕ್ಕಾ ಐಎಎಸ್ ಅಕಾಡೆಮಿ ಮುಖ್ಯಸ್ಥ ಡಾ. ಶಿವಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರಸಭೆ ವತಿಯಿಂದ ಸಿಇಟಿ, ನೀಟ್, ಜೆಇಇ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ನೀಡುವ ಸಲುವಾಗಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಬೌದ್ದಿಕ‌ ಗುಣಮಟ್ಟವನ್ನು ಅಳತೆ ಮಾಡಿ ನಂತರ ಅವರಿಗೆ ತರಬೇತಿ ನೀಡಲಾಗುವುದು ಎಂದರು.

ವಿದ್ಯಾರ್ಥಿಗಳಿಗೆ ಸಮಯವೇ ಜೀವನ. ಸಮಯವನ್ನು ವ್ಯರ್ಥ ಮಾಡದೆ ಅದ್ಯಯನಕ್ಕೆ ಬಳಸಬೇಕಿದೆ. ಸಮಯ ಪಾಲನೆ, ನೀತಿಯುತ ವ್ಯಕ್ತಿತ್ವ ವಿದ್ಯಾರ್ಥಿಗಳ ಯಶಸ್ಸಿನ‌ ಮೆಟ್ಟಿಲುಗಳಾಗಲು ನೆರವಾಗಲಿವೆ. ಇಂದಿನ‌ ದಿನಗಳಲ್ಲಿ ದುಬಾರಿ ವೆಚ್ಚದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಮಕ್ಕಳನ್ನು ಅಣಿಗೊಳಿಸುವ ಸವಾಲು ಪೋಷಕರಿಗೆ ಎದುರಾಗಿದೆ. ಇಂತಹ ಸಮಯದಲ್ಲಿ ತರಬೇತಿಯಿಂದ ವಂಚಿತರಾಗದೆ ಸ್ಪರ್ಧಾತ್ಮಕ ಪರೀಕ್ಷೆ ಎಸುರಿಸಲು ಬಡ ಮಕ್ಕಳಿಗೆ ನಗರಸಭೆ ಉಚಿತ ತರಬೇತಿ ಕೊಡಿಸುವ ಉತ್ತಮ ಕೆಲಸ ಮಾಡುತ್ತಿರುವುದಕ್ಕೆ ಶ್ಲಾಘಿಸಿದರು.

ನಗರಸಭೆ ಆಯುಕ್ತ ಡಾ.ಜಯಣ್ಣ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ನೆರವಾಗುವ ಉದ್ದೇಶದಿಂದ ಅಧ್ಯಕ್ಷರಾದ ಕೆ.ಶೇಷಾದ್ರಿ ಬಜೆಟ್ ನಲ್ಲಿ ಅವಕಾಶ ಕಲ್ಪಿಸಿದ್ದಾರೆ. ತರಬೇತಿಗೆ ಬರುವ ಮಕ್ಕಳು ಮೊದಲು ಆಸಕ್ತಿ ತೋರಿ ನಂತರ ನಿರಾಸಕ್ತಿ ತೋರಿದರೆ ತರಬೇತಿಯ ಪರಿಪೂರ್ಣ ಎನಿಸಿವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.