ಸಾರಾಂಶ
ಈ ಪಂದ್ಯಾವಳಿ ಮೂಲಕ ಸಂಗ್ರಹಗೊಂಡ ಸುಮಾರು 6 ಲಕ್ಷ ರು.ಗಳನ್ನು ಮಕ್ಕಳ ರಕ್ತಶಾಸ್ತ್ರ ಮತ್ತು ಕ್ಯಾನ್ಸರ್ ವಿಭಾಗದ ಮುಖ್ಯಸ್ಥರಾದ ಡಾ. ವಾಸುದೇವ ಭಟ್ ಅವರಿಗೆ ಮಾಹೆ ಮಣಿಪಾಲದ ಸಹ ಕುಲಪತಿ ಡಾ. ಶರತ್ ಕುಮಾರ್ ರಾವ್ ಅವರ ಮೂಲಕ ಹಸ್ತಾಂತರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಮಾಹೆಯ ಜನರಲ್ ಸರ್ವಿಸಸ್ ವಿಭಾಗವು ಆರ್ಥಿಕವಾಗಿ ಹಿಂದುಳಿದ ಕ್ಯಾನ್ಸರ್ ಪೀಡಿತ ಬಡ ಮಕ್ಕಳ ಸಹಾಯಕ್ಕಾಗಿ ಎರಡು ದಿನಗಳ ಕ್ರಿಕೆಟ್ ಪಂದ್ಯಾವಳಿ ‘ಸ್ಪಂದನ ಟ್ರೋಫಿ- ಸೀಸನ್ 2’ ಆಯೋಜಿಸಿತ್ತು. ಇಲ್ಲಿನ ಆಕ್ಸೆಸ್ ಲೈಫ್ ಸೆಂಟರ್ ಮಣಿಪಾಲ್‌ನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಉಳಿದುಕೊಂಡಿರುವ ಮಕ್ಕಳಿಗೆ ಮನರಂಜನೆ ನೀಡುವುದೇ ಈ ಪಂದ್ಯಾವಳಿಯ ಇನ್ನೊಂದು ಉದ್ದೇಶವಾಗಿತ್ತು.ಈ ಪಂದ್ಯಾವಳಿ ಮೂಲಕ ಸಂಗ್ರಹಗೊಂಡ ಸುಮಾರು 6 ಲಕ್ಷ ರು.ಗಳನ್ನು ಮಕ್ಕಳ ರಕ್ತಶಾಸ್ತ್ರ ಮತ್ತು ಕ್ಯಾನ್ಸರ್ ವಿಭಾಗದ ಮುಖ್ಯಸ್ಥರಾದ ಡಾ. ವಾಸುದೇವ ಭಟ್ ಅವರಿಗೆ ಮಾಹೆ ಮಣಿಪಾಲದ ಸಹ ಕುಲಪತಿ ಡಾ. ಶರತ್ ಕುಮಾರ್ ರಾವ್ ಅವರ ಮೂಲಕ ಹಸ್ತಾಂತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಡಾ.ಶರತ್ ಕುಮಾರ್ ರಾವ್, ವೈದ್ಯಕೀಯ ಚಿಕಿತ್ಸೆಗಳು, ವಿಶೇಷವಾಗಿ ಕ್ಯಾನ್ಸರ್ ಚಿಕಿತ್ಸೆಗಳ ವೆಚ್ಚವು ಹೆಚ್ಚುತ್ತಿರುವ ಈ ಸಮಯದಲ್ಲಿ ಇಂತಹ ಸಾಮಾಜಿಕ ಉಪಕ್ರಮಗಳ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಇಂತಹ ಸಮಾಜಮುಖಿ ಕಾರ್ಯವು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.ಮಾಹೆ ಮಣಿಪಾಲದ ಸಿಒಒ ಸಿ.ಜಿ. ಮುತ್ತಣ್ಣ, ಮಣಿಪಾಲ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಆನಂದ್ ವೇಣುಗೋಪಾಲ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮತ್ತು ಮಾಹೆ ಮಣಿಪಾಲದ ಜನರಲ್ ಸರ್ವಿಸಸ್ ನಿರ್ದೇಶಕ ಶ್ರೀಧರ್ ರಾವ್ ಉಪಸ್ಥಿತರಿದ್ದರು.