ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರು, ಕೊಡಗು, ಕರಾವಳಿ, ಮಲೆನಾಡು ಸೇರಿ ರಾಜ್ಯದ 18ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂಗಾರುಪೂರ್ವ ಮಳೆ ಅಬ್ಬರಿಸುತ್ತಿದ್ದು, ಮಂಗಳವಾರ ಸುರಿದ ಸಿಡಿಲಬ್ಬರದ ಮಳೆಗೆ 6 ಮಂದಿ ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಇಬ್ಬರು, ಧಾರವಾಡ, ಬಳ್ಳಾರಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ತಲಾ ಒಬ್ಬೊಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ರಾಮನಗರದ ಹೊರವಲಯದಲ್ಲಿ ಬೆಂಗಳೂರಿನ ಬಾಲಕನೊಬ್ಬ ಅರ್ಕಾವತಿ ನದಿಯಲ್ಲಿ ಕೊಚ್ಚಿಹೋಗಿದ್ದಾನೆ.ರಾಮನಗರದ ಹೊರವಲಯದ ಹಳ್ಳಿಮಾಳ ಸಮೀಪ ಅರ್ಕಾವತಿ ನದಿ ಪಕ್ಕದಲ್ಲಿರುವ ದರ್ಗಾಗೆ ಬಂದಿದ್ದ ಬೆಂಗಳೂರಿನ ಲಕ್ಕಸಂದ್ರದ ಮೊಹಮ್ಮದ್ ಸೈಫ್ (9) ಎಂಬ ಬಾಲಕ ನೀರಿನಲ್ಲಿ ಆಟವಾಡುವಾಗ ಕಾಲುಜಾರಿ ಬಿದ್ದು ಕೊಚ್ಚಿ ಹೋಗಿದ್ದಾನೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಕರಜಗಿಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ರೈತ ನಬಿಲಾಲ ಚೌಧರಿ (70) ಎಂಬುವರು ಅಸುನೀಗಿದ್ದಾರೆ. ಇದೇ ವೇಳೆ, ರಾಯಚೂರು ಜಿಲ್ಲೆ ಅರಕೇರಾ ತಾಲೂಕಿನ ಭೋಗಿ ರಾಮನಗುಡ್ಡ ಗ್ರಾಮದಲ್ಲಿ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದಾಗ ಸಿಡಿಲು ಬಡಿದು ಹನುಮಗೌಡ ನಾಯಕ (16) ಎಂಬುವರು ಮೃತಪಟ್ಟಿದ್ದಾರೆ. ದೇವದುರ್ಗ ತಾಲೂಕಿನ ಲಿಂಗದಹಳ್ಳಿಯಲ್ಲಿ ಸಿಡಿಲಿಗೆ ಯಲ್ಲಮ್ಮ (42) ಎಂಬುವರು ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮೊಬೈಲ್ ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದ ಸಮಯದಲ್ಲಿ ಸಿಡಿಲು ಬಡಿಯಿತು.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇನೆರ್ತಿಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಹಿರೇಹರಕುಣಿ ಗ್ರಾಮದ ಮೈಲಾರಪ್ಪ(18) ಎಂಬುವರು ಮೃತಪಟ್ಟಿದ್ದಾರೆ. ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ದೇವಲಾಪುರದಲ್ಲಿ ಕುರಿ ಮೇಯಿಸುತ್ತಿದ್ದಾಗ ಸಿಡಿಲು ಬಡಿದು ಕುರಿ ಕರಿಬಸಪ್ಪ (23) ಎಂಬುವರು ಮೃತಪಟ್ಟಿದ್ದಾರೆ. ಇತರ ಐವರು ಗಾಯಗೊಂಡಿದ್ದಾರೆ.ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಅನ್ವರಿ ಸಮೀಪ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಹಟ್ಟಿ-ಕವಿತಾಳ ಸಾರಿಗೆ ಬಸ್ ಸಿಲುಕಿ, ಪ್ರಯಾಣಿಕರು ಪರದಾಡಿದರು. ಬಳಿಕ, ಜೆಸಿಬಿ ನೆರವಿನಿಂದ ಬಸ್ಸನ್ನು ದಾಟಿಸಲಾಯಿತು.
ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್‌ನ ಸುಂಕಸಾಲೆ ಬಳಿ ಮಿನಿ ಬಸ್ ಹಾಗೂ ಬೈಕ್ ಮೇಲೆ ಬೃಹತ್ ಮರ ಬಿದ್ದಿದ್ದು, ಬೈಕ್ ಸವಾರನಿಗೆ ಗಾಯವಾಗಿದೆ. ಮಿನಿ ಬಸ್‌ನ ಮುಂಭಾಗ ಜಖಂಗೊಂಡಿದೆ.ಉಡುಪಿ ಜಿಲ್ಲೆಯಾದ್ಯಂತ ಮಳೆಯಾಗಿದ್ದು, ಮಣಿಪಾಲದ ಸಿಂಡಿಕೇಟ್ ವೃತ್ತದಲ್ಲಿ ಮಳೆ ನೀರು ಕಾಲುವೆಯಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿದು, ಕೃತಕ ಪ್ರವಾಹದ ಪರಿಸ್ಥಿತಿ ಸೃಷ್ಟಿಸಿತ್ತು. ಇದರಿಂದ ಕೆಲವು ದ್ವಿಚಕ್ರ ವಾಹನಗಳು ಉರುಳಿಬಿದ್ದು, ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಈ ಕೃತಕ ನೆರೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದೇ ವೇಳೆ, ಮಂಡ್ಯ, ಬೆಂಗಳೂರು, ಧಾರವಾಡ, ಚಿಕ್ಕೋಡಿ ಸೇರಿ ರಾಜ್ಯದ ಇತರಡೆಯೂ ಮಳೆಯಾದ ವರದಿಯಾಗಿದೆ.
-ಬಾಕ್ಸ್-ಏರ್ಪೋರ್ಟ್ ರನ್‌ವೇನಲ್ಲಿದ್ದ ನೀರು
ಏಕಾಏಕಿ ಹೊರಕ್ಕೆ: ಭಾರಿ ಸಮಸ್ಯೆ!ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇಯಲ್ಲಿ ತುಂಬಿದ ಮಳೆ ನೀರನ್ನು ಏಕಾಏಕಿ ಹೊರಬಿಟ್ಟ ಪರಿಣಾಮ ಕೆಳಭಾಗದ ಅದ್ಯಪಾಡಿ ಗ್ರಾಮಕ್ಕೆ ತೆರಳುವ ರಸ್ತೆಯುದ್ದಕ್ಕೂ ಭಾರೀ ಕೆಸರು ನೀರು ತುಂಬಿ, ವಾಹನ ಸವಾರರು ಪರದಾಡುವಂತಾಯಿತು. ಅಲ್ಲದೆ ನೀರಿನ ರಭಸದಿಂದ ಐದಾರು ಮನೆಗಳಿಗೂ ಹಾನಿ ಸಂಭವಿಸಿದೆ. ರಸ್ತೆಯ ಅಡಿ ಭಾಗ ಕುಸಿದು ರಸ್ತೆಗೂ ಹಾನಿಯಾಗಿದೆ.
ಇದೇ ವೇಳೆ, ಮಂಗಳೂರು ನಗರದ ವಿವಿಧೆಡೆ ಹತ್ತಕ್ಕೂ ಹೆಚ್ಚು ಮರಗಳು ಉರುಳಿ ಬಿದ್ದಿದ್ದು, ಕೆಲ ಮನೆಗಳಿಗೆ ಹಾನಿಯಾಗಿದೆ. ಮಣ್ಣಗುಡ್ಡೆಯ ಕೆನರಾ ಹೈಸ್ಕೂಲ್, ಕೊಡಿಯಾಲ್ ಗುತ್ತು, ಕೆತ್ತಿಕಲ್‌ನಲ್ಲಿ ಗುಡ್ಡ ಕುಸಿತ ಉಂಟಾಗಿದೆ.7 ಜಿಲ್ಲೆಗೆ ರೆಡ್ ಅಲರ್ಟ್:ರಾಜ್ಯದಲ್ಲಿ ಇನ್ನೂ ಎರಡ್ಮೂರು ದಿನ ಭಾರೀ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ಕರಾವಳಿಯ ಮೂರು ಜಿಲ್ಲೆಗಳು ಸೇರಿ ಒಟ್ಟು 7 ಜಿಲ್ಲೆಗಳಲ್ಲಿ ಭಾರೀ ಮಳೆ ಲಕ್ಷಣ ಹಿನ್ನೆಲೆಯಲ್ಲಿ ‘ರೆಡ್ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ.ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಲಕ್ಷಣ ಕಂಡು ಬರುತ್ತಿವೆ. ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಂಡಿದ್ದು, ಮುಂದಿನ ವಾರ ಭಾರೀ ಮಳೆಯ ಸಾಧ್ಯತೆ ಇದೆ. ಹೀಗಾಗಿ ಮೇ 21, 22ಕ್ಕೆ ಮೂರು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’, ಚಿಕ್ಕಮಗಳೂರು, ಶಿವಮೊಗ್ಗಕ್ಕೆ ಮುಂದಿನ ಎರಡು ದಿನಕ್ಕೆ ಹಾಗೂ ಹಾಸನ ಮತ್ತು ಕೊಡಗು ಜಿಲ್ಲೆಗಳಿಗೆ ಮುಂದಿನ 24 ಗಂಟೆಗೆ ‘ರೆಡ್ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ.ಬೆಳಗಾವಿ, ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಮೈಸೂರು ಜಿಲ್ಲೆಗಳಿಗೆ ಮುಂದಿನ ಎರಡು ದಿನಕ್ಕೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ತುಮಕೂರು, ರಾಮನಗರ, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ವಿಜಯಪುರ, ಕೊಪ್ಪಳ, ಕಲಬುರಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.
ರಾಜ್ಯದ ಉಳಿದೆಡೆ ಎರಡು ದಿನಗಳ ಬಳಿಕ ಮಳೆ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗುವ ಲಕ್ಷಣ ಇದೆ. ಬೆಂಗಳೂರಿನಲ್ಲಿ ಬುಧವಾರದಿಂದ ಮಳೆ ಅರ್ಭಟ ತಗ್ಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಕಾರ್ಕಳದಲ್ಲಿ 15 ಸೆಂ.ಮೀ. ಮಳೆ:ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಿರುವ ವರದಿ ಪ್ರಕಾರ, ಕಾರ್ಕಳದಲ್ಲಿ ಅತಿ ಹೆಚ್ಚು 15 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಯಲ್ಲಾಪುರದಲ್ಲಿ 13, ಮಂಗಳೂರು ವಿಮಾನ ನಿಲ್ದಾಣದಲ್ಲಿ 12, ಹಾವೇರಿಯ ಗುತ್ತಲ 11, ಪಣಂಬೂರು, ಕಳಸ, ಬೆಂಗಳೂರಲ್ಲಿ ತಲಾ 10, ಕೋಲಾರ 8, ಮುಲ್ಕಿ 7, ಕೊಟ್ಟಿಗೆಹಾರ 6, ಮಂಗಳೂರು, ಯಲಬುರಗಿ, ಕುಣಿಗಲ್, ಭಾಗಮಂಡಲ, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ತಲಾ 5, ಉಡುಪಿ, ಪುತ್ತೂರು, ಮಾಣಿ, ಕುಷ್ಟಗಿ, ನೆಲಮಂಗಲ, ಬೆಂಗಳೂರು ವೀಕ್ಷಣಾಲಯ, ದಾವಣಗೆರೆಯಲ್ಲಿ ತಲಾ 4, ಗೋಕರ್ಣ, ಕುಮಟಾ, ಗೇರಸೊಪ್ಪ, ಗಬ್ಬೂರು, ಗುರುಮಿಟ್ಕಲ್, ಸೈದಾಪುರ, ಅನವಟ್ಟಿ, ಎಲೆಕ್ಟ್ರಾನಿಕ್ ಸಿಟಿ, ಬೆಳ್ಳೂರು, ಮಾಗಡಿ, ವಿರಾಜಪೇಟೆಯಲ್ಲಿ ತಲಾ 3, ಕಾರವಾರ, ಮಂಕಿ, ಧರ್ಮಸ್ಥಳ, ಹೊನ್ನಾವರ, ಬನವಾಸಿ, ಅಂಕೋಲಾ, ಹಾವೇರಿ, ಮಸ್ಕಿಯಲ್ಲಿ ತಲಾ 2 ಸೆಂ.ಮೀ. ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೇ 27ಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶ?:ರಾಜ್ಯಕ್ಕೆ ಮೇ 27 ಅಥವಾ 28ರ ವೇಳೆಗೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಸಾಮಾನ್ಯವಾಗಿ ಜೂ.1ರ ವೇಳೆ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಬರುತ್ತದೆ. ಈ ಬಾರಿ ನಿರೀಕ್ಷೆಗಿಂತ ಮೊದಲೇ ಮುಂಗಾರು ಮಾರುತಗಳು ಚುರುಕುಗೊಂಡಿವೆ. ಹೀಗಾಗಿ, ಅವಧಿಗೆ ಒಂದು ವಾರ ಮೊದಲೇ ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ.ಮುಂಗಾರು ಆರಂಭಕ್ಕೆ ಪೂರಕ ವಾತಾವರಣ ಸಹ ಅರಬ್ಬಿ ಸಮುದ್ರದಲ್ಲಿ ರೂಪುಗೊಂಡಿದೆ. ಈಗಾಗಲೇ ಮುಂಗಾರು ಮಾರುತಗಳು ಶ್ರೀಲಂಕಾ ಪ್ರವೇಶಿಸಿವೆ. ಮೇ 25ರ ಒಳಗೆ ಲಕ್ಷದ್ವೀಪ ಹಾಗೂ ಕೇರಳ ರಾಜ್ಯ ಪ್ರವೇಶಿಸಲಿದೆ.ಕಳೆದ ವರ್ಷ ಮೇ 30ಕ್ಕೆ ಕೇರಳ ಪ್ರವೇಶಿಸಿದ್ದ ಮುಂಗಾರು, ಜೂ.2ಕ್ಕೆ ರಾಜ್ಯಕ್ಕೆ ಕಾಲಿಟ್ಟಿತ್ತು. ಅರಬ್ಬಿ ಸಮುದ್ರದಲ್ಲಿ ಇದೀಗ ವಾಯುಭಾರ ಕುಸಿತದ ಲಕ್ಷಣ ಇದ್ದು, ವಾಯುಭಾರ ಕುಸಿತ ಪ್ರಬಲಗೊಂಡು ಮುಂಗಾರು ಮಾರುತಗಳನ್ನು ಸೆಳೆದರೆ ಮುಂಗಾರು ಪ್ರವೇಶಕ್ಕೆ ಹಿನ್ನೆಡೆ ಉಂಟಾಗಬಹುದು. ಇಲ್ಲವಾದರೆ ಯಥಾ ಪ್ರಕಾರ ನಿರೀಕ್ಷೆಯಂತೆ ಮುಂಗಾರು ರಾಜ್ಯದಲ್ಲಿ ಆರಂಭಗೊಳ್ಳಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.