ಸಾರಾಂಶ
ಕೃಷ್ಣಮೋಹನ ತಲೆಂಗಳ
ಕನ್ನಡಪ್ರಭ ವಾರ್ತೆ ಮಂಡ್ಯಕವಿಗಳಿಗೆ ನಿಗದಿಪಡಿಸಿದ್ದು ತಲಾ ಮೂರು ನಿಮಿಷ. ಒಟ್ಟು ಕವನ ವಾಚಿಸಿದವರು 24 ಮಂದಿ. ಈ ಪೈಕಿ ಶೇ.25ರಷ್ಟು ಎಂದರೆ, ಆರು ಮಂದಿ ನಿಗದಿಗಿಂತಲೂ ಮೊದಲು ವಾಚನ ಮುಗಿಸಿ ಸೈ ಎನಿಸಿಕೊಂಡರೆ ಆರು ಕವನಗಳಿಗೆ ಸಭಿಕರು ಅಹುದಹುದೆಂದು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಇಬ್ಬರು ಮೊಬೈಲ್ ಸ್ಕ್ರೀನ್ ನೋಡಿ ಕವನ ಓದಿದರೆ, ಒಬ್ಬರು ನೆನಪಿಟ್ಟು ವಾಚಿಸಿದರು.
ಸಮ್ಮೇಳನದ ಕೊನೆಯ ದಿನ ಭಾನುವಾರ ಸಮಾನಾಂತರ ವೇದಿಕೆ 2ರಲ್ಲಿ ನಡೆದ ಕೊನೆಯ ಕಾರ್ಯಕ್ರಮ ಕವಿಗೋಷ್ಠಿ. ಒಬ್ಬರು ಗೈರು ಹಾಜರಾಗಿ, 24 ಮಂದಿ ಕವನ ವಾಚಿಸಿ, ನಿಗದಿತ 2 ಗಂಟೆಯ ಅವಧಿಗೂ ಮೊದಲೇ ಕಾರ್ಯಕ್ರಮ ಮುಗಿಸಿ, ಸಿಟ್ಟು ಸಿಡುಕುಗಳಿಲ್ಲದೆ ಮಾದರಿಯಾದರು.ಧರ್ಮಾಂಧತೆ, ಶಬರಿಮೆಲೆಗೆ ಮಹಿಳಾ ಪ್ರವೇಶ ನಿಷೇಧ, ಭ್ರಷ್ಟಾಚಾರ, ಪ್ರಾಕೃತಿಕ ದೌರ್ಜನ್ಯ, ಭ್ರೂಣಹತ್ಯೆ, ಬಾಣಂತಿ ಮರಣ, ಪ್ರವಾಹ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಅಂಬೇಡ್ಕರ್ ಮತ್ತಿತರ ಹತ್ತು ಹಲವು ವಿಚಾರಗಳು ಕವನ ರೂಪಕಗಳಾಗಿ ಪ್ರಸ್ತುತಗೊಂಡವು. ಸಮಾನಾಂತರ ಸಭಾಂಗಣ ಮಧ್ಯಾಹ್ನದ ಹಸಿವಿನ ವೇಳೆಯಲ್ಲೂ ಆರಂಭದಲ್ಲಿ ಪೂರ್ತಿಯಾಗಿ ಕೊನೆ ಕೊನೆಗೆ ಭಾಗಶಃ ಭರ್ತಿಯಾಗಿ ಸಕ್ರಿಯ ಪ್ರೋತ್ಸಾಹ ಗಳಿಸಿತು.
ಎಲ್.ತಿಪ್ಪಾನಾಯ್ಕ ಲಂಬಾಣಿ ಭಾಷೆಯಲ್ಲಿ ‘ತೂ ಖೇಲೋ ಖೇಲ್’ ಕವನ ವಾಚಿಸಿ, ಪ್ರೇಕ್ಷಕರ ಒತ್ತಾಯದ ಮೇರೆಗೆ ಕನ್ನಡ ಭಾವಾನುವಾದವನ್ನು ಸ್ಥಳದಲ್ಲೇ ಓದಿದರು. ಇನ್ನು ಪ್ರೇಕ್ಷಕರು ಕೇಳುವ ಮೊದಲೇ ಕನ್ನಡದಲ್ಲಿ ಭಾವಾನುವಾದ ನೀಡಿದ ಬ್ಯಾರಿ ಭಾಷೆಯ ಕವಿ ಬಷೀರ್ ಅಹ್ಮದ್ ‘ಉಮ್ಮ’ ಹೆಸರಿನ ಕವನ ಓದಿದರು.ಮಂಡ್ಯ ಜಿಲ್ಲೆಯ ಪೊಲೀಸ್ ಸಿಬ್ಬಂದಿ ಲೋಕೇಶ್ ಕಲ್ಕುಣಿ ಕವನದಲ್ಲೇ ಸಾರ್ವಜನಿಕರ ದೂರುಗಳನ್ನು ಪೋಣಿಸಿದ್ದಲ್ಲದೆ, ‘ನಾವು ಪೋಲೀಸ್ನೋರು, ಪೊಲೀಸ್ನೋರತ್ರ ಬಂದೋರು ನೀವು ಮಾನ್ಯ ಸಾರ್ವಜನಿಕರು’ ಸಾಲುಗಳನ್ನು ಪುನರುಕ್ತಿಗೊಳಿಸಿ ‘ಜನಸ್ನೇಹಿ’ಯಾದರು.
ಮಹೇಶ್ ಊಗಿನಹಳ್ಳಿ ಅವರ ‘ಮಣ್ಣಿನ ಮಕ್ಕಳಿಗೆ ಹೆಣ್ಣು ಕೊಡಿ ಸ್ವಾಮಿ’ ಕವನದಲ್ಲಿ‘ಕಬ್ಬಿನ ಗದ್ದೆಯೇ ನಮ್ಮೂರಿನ ಕಬ್ಬನ್ ಪಾರ್ಕು’ ಎಂಬ ಪಂಚ್ ಹೊಡೆದರಲ್ಲದೆ, ರೈತರ ಪರವಾಗಿ ‘ರೈತರ ಮಕ್ಕಳಿಗೆ ಮದುವೆ ಭಾಗ್ಯ ಕೊಡಿಸಿ’ ಅಂತ ಸರ್ಕಾರಕ್ಕೆ ಮನವಿ ಮಾಡಿದರು!ಕಾಗದ, ಮೊಬೈಲ್ ಬಳಸದೆ ನೆನಪಿಟ್ಟೇ ಕವನ ವಾಚಿಸಿದ ನಿಸಾರ್ ಅಹಮದ್ ಅವರ ‘ದೊಡ್ಡವರಾರೂ ಕಸವನ್ನು ಬೀದಿಗೆ ಚೆಲ್ಲುವುದಿಲ್ಲ, ನೇರವಾಗಿ ಎದೆಗೆ ಚೆಲ್ಲಿ ಬಿಡುತ್ತಾರೆ. ನೇರ-ದಿಟ್ಟ-ನಿರಂತರ ಸುಳ್ಳುಗಳನ್ನೇ ಕೇಳುವ ನಮಗೆ ಸತ್ಯದ ಸಮಾಧಿಯ ಮುಂದೆ ನಿಂತು ಅಳುವುದಕ್ಕೂ ಭಯವಾಗುತ್ತದೆ ಬಾಪು... ದೊಡ್ಡವರು ದೊಡ್ಡವರಾಗುವುದಕ್ಕೂ ನಾವು ದಡ್ಡರಾಗಬೇಕು’ ಸಾಲುಗಳನ್ನು ವಾಚಿಸಿದಾಗ ಭರ್ಜರಿ ಶಿಳ್ಳೆ, ಚಪ್ಪಾಳೆ ಮಾರ್ದನಿಸಿತು.
ಇಡೀ ಸಭಾಂಗಣವೇ ನಕ್ಕು, ಕರತಾಡನ ಮಾಡಿದ ಕವನ ಅರುಣ್ ಕುಲಕರ್ಣಿ ಅವರ ‘ಮಡದಿಗೊಂದು ಪತ್ರ’. ತವರಿಗೆ ತೆರಳಿದ ಪತ್ನಿ ಮರಳಿ ಬರುವುದೇ ಬೇಡ ಎಂಬ ಧಾಟಿಯಲ್ಲಿ ಬರೆದ ಕವನದ ಸಾಲುಗಳು... ‘ನಿನ್ನ ಕೈ ಅಡುಗೆಯಿಂದ ಜಡ್ಡುಗಟ್ಟಿದ ನಾಲಿಗೆ, ವಾಗ್ದಾಳಿಯಿಂದ ಈಗ ಪಾರಾಗುವ ವಿಶ್ವಾಸ ಬಂದಿದೆ..., ಆರು ತಿಂಗಳು ಮತ್ತೆ ಬಾರದಿರು, ಬಂದು ನನ್ನ ಜೀವ ಹೀರದಿರು, ನನ್ನ ಸಂತಸಕ್ಕೆ ಭಂಗ ತಾರದಿರು, ದೂರವಿದ್ದರೆ ಪ್ರೀತಿ ಜಾಸ್ತಿಯಂತೆ, ನೀನು ಬರಲೇಬೇಡ, ದೂರದಿಂದ ದೇವರ ದಯದಿಂದ ಇಬ್ಬರೂ ಚೆನ್ನಾಗಿದ್ದೇವೆ’ ಎಂದಾಗ ಸಾಹಿತ್ಯಪ್ರಿಯರು ಬಿದ್ದು ಬಿದ್ದು ನಕ್ಕರು.‘ಕನ್ನಡಪ್ರಭ’ ತುಮಕೂರು ಜಿಲ್ಲಾ ವರದಿಗಾರ ಉಗಮ ಶ್ರೀನಿವಾಸ ‘ತಗ್ಗಿನ ಬುದ್ಧ’ ಕವನ ವಾಚಿಸಿದರು.
ಈರಣ್ಣ ಬೆಂಗಾಲಿ, ಮಂಜೇಶ್ ಬಾಬು, ಚಂದ್ರಹಾಸ ಹಿರೇಮರಳಿ, ಭಾರತಿ ಪ್ರಸಾದ್, ಶಿವಪುತ್ರಪ್ಪ ಆರ್., ಆಶಿ, ರಮೇಶ ಬಸರಗಿ, ನೀಲಪ್ಪ ಝರೆ, ಅರುಣ ಕುಲಕರ್ಣಿ, ವಿದ್ಯಾವತಿ ಬಲ್ಲೂರು, ಮುನಿಸ್ವಾಮಿ ಬಿ.ಕೆ, ಗೌರಾದೇವಿ ಕಾಳಿಕೋಟಿಮಠ, ಸೂರ್ಯಕೀರ್ತಿ, ರೋಷನ್ ಛೋಪ್ರಾ, ಡಾ.ಜಗನ್ನಾಥ್ ಎಲ್, ನಾಗೊಂಡಳ್ಳಿ ಸುನಿಲ್, ಎಸ್.ಟಿ.ಶಾಂತಕುಮಾರಿ, ಎಸ್.ಶಿಶಿರಂಜನ್, ಕಾಂತರಾಜಪುರ ಸುರೇಶ, ಮಹೇಶ ಊಗಿನಹಳ್ಳಿ ಕವನ ವಾಚಿಸಿದರು.ಅಧ್ಯಕ್ಷತೆ ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ.ಮಾನಸಾ ಮಾತನಾಡಿ, ಒಬ್ಬ ಕವಿ ‘ಹೆಣ್ಣು ಕೊಡಿ’ ಎಂಬ ಕವನ ಓದಿದರೆ, ಇನ್ನೊಬ್ಬರು ‘ಹೆಂಡತಿ ತವರಿನಿಂದ ಬರುವುದೇ ಬೇಡ’ವೆನ್ನುತ್ತಾರೆ, ಇದೇ ಜೀವನ ವೈರುಧ್ಯ ಎಂದು ಚಟಾಕಿ ಹಾರಿಸಿದರು. ಹಿರಿಯ ಸಾಹಿತಿ ಕೆ.ಪಿ.ಮೃತ್ಯುಂಜಯ ಆಶಯ ನುಡಿಯಾಡಿದರು. ನಯನಾ ಎಸ್.ನಿರೂಪಿಸಿದರು. ಕಿರಣ್ ಪಿ.ಎಲ್.ಸ್ವಾಗತಿಸಿದರು. ಕೆ.ಎ.ಶ್ರೀಹರಿ ವಂದಿಸಿದರು. ಜಿ.ಎಲ್.ಲಕ್ಷ್ಮಮ್ಮ ನಿರ್ವಹಿಸಿದರು.